ಸಂಪಾದಕೀಯ: ಸಕಾರಾತ್ಮಕ ಸಂದೇಶ

Injection
Published on

ಇಡೀ ಜಗತ್ತನ್ನು ಕಾಡುತ್ತಿರುವ ಕರೊನಾ ವೈರಸ್​ಗೆ ಆದಷ್ಟು ಬೇಗ ಔಷಧ ಬರಲಿ ಎಂದು ಎಲ್ಲರೂ ಕಾಯುತ್ತಿದ್ದಾರೆ. ಆಗಲಾದರೂ ಈ ಪಿಡುಗಿಗೆ ನಿಯಂತ್ರಣ ಸಾಧ್ಯವಾದೀತು ಎಂಬ ಆಶಾಭಾವ ಇದಕ್ಕೆ ಕಾರಣ. ಭಾರತವೂ ಸೇರಿದಂತೆ ಹಲವು ದೇಶಗಳು ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದು, ಕೆಲ ಲಸಿಕೆಗಳು ಕ್ಲಿನಿಕಲ್ ಟ್ರಯಲ್ ಹಂತಕ್ಕೂ ಬಂದಿವೆ. ಈ ನಡುವೆ, ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ನೀಡಿರುವ ಹೇಳಿಕೆ ಸಂಚಲನವನ್ನೇ ಮೂಡಿಸಿದೆ ಎಂದರೆ ತಪ್ಪಾಗಲಾರದು.

ಇದೇ ಆಗಸ್ಟ್ ಮಧ್ಯಭಾಗದ ವೇಳೆಗೆ ಕರೊನಾ ಲಸಿಕೆ ಸಾಧ್ಯತೆಯನ್ನು ಅದು ವ್ಯಕ್ತಪಡಿಸಿದೆ. ಮೈಕ್ರೊಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕೂಡ, ಕರೊನಾ ಲಸಿಕೆ ವಿಚಾರದಲ್ಲಿ ಭಾರತದ ಸಾಮರ್ಥ್ಯದ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದು, ವಿಶ್ವಕ್ಕೆ ಈ ಔಷಧವನ್ನು ಪೂರೈಸಲು ಭಾರತದ ಔಷಧ ಕಂಪನಿಗಳು ಶಕ್ತವಾಗಿವೆ ಎಂದೂ ಹೇಳಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಈ ವಿಚಾರದಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಹೇಳಿದ್ದಾರೆ. ಈ ಎಲ್ಲ ಕಾರಣದಿಂದಾಗಿ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ ಎನ್ನಬಹುದು. ಭಾರತದಲ್ಲಿ ಕೊವಾಕ್ಸಿನ್ ಎಂಬ ಲಸಿಕೆಯ ಪ್ರಾಯೋಗಿಕ ಪರೀಕ್ಷೆಗೆ ಐಸಿಎಂಆರ್ ಈಗಾಗಲೇ ಒಂಬತ್ತು ಸಂಸ್ಥೆಗಳಿಗೆ ಅನುಮತಿ ನೀಡಿದ್ದು, ಪರೀಕ್ಷೆಯನ್ನು ತ್ವರಿತವಾಗಿ ನಡೆಸುವಂತೆ ಸೂಚಿಸಿದೆ.

ಕೆಲ ಖಾಸಗಿ ಸಂಸ್ಥೆಗಳೂ ಈ ದಿಕ್ಕಿನಲ್ಲಿ ಪ್ರಯತ್ನ ನಡೆಸಿವೆ. ಕರೊನಾ ಲಸಿಕೆಯನ್ನು ಆಗಸ್ಟ್ ಮಧ್ಯಭಾಗದ ವೇಳೆಗೆ ಮಾರುಕಟ್ಟೆಗೆ ತರುವ ಬಗ್ಗೆ ಐಸಿಎಂಆರ್ ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ್ದು ವಿವಾದಕ್ಕೂ ಕಾರಣವಾಗಿತ್ತು. ಲಸಿಕೆಯ ಕ್ಲಿನಿಕಲ್ ಟ್ರಯಲ್ ಯಶಸ್ಸಿನ ಬಗ್ಗೆ ಒಂದು ನಿರ್ದಿಷ್ಟ ಗಡುವನ್ನು ನೀಡಲು ಸಾಧ್ಯವಿಲ್ಲ; ಈ ಮಹತ್ವದ ಹಂತದಲ್ಲಿ ರಾಜಿ ಸಲ್ಲ ಎಂದು ಕೆಲ ತಜ್ಞರು ಹೇಳಿದ್ದರು. ಐಸಿಎಂಆರ್ ಈ ಬಗ್ಗೆ ಸ್ಪಷ್ಟನೆ ನೀಡಿ, ಆದಷ್ಟು ಬೇಗ ಲಸಿಕೆ ತಯಾರಿಸುವ ಕುರಿತು ತಾನು ಹೇಳಿದ್ದಾಗಿಯೂ, ಗುಣಮಟ್ಟದಲ್ಲಿ ರಾಜಿ ಪ್ರಶ್ನೆಯೇ ಇಲ್ಲವೆಂದೂ ಹೇಳಿತು. ಇದೀಗ ಐಸಿಎಂಆರ್ ಮತ್ತೆ ಇದೇ ತೆರನಾದ ವಿಶ್ವಾಸ ವ್ಯಕ್ತಪಡಿಸಿದ್ದು, ಆಗಸ್ಟ್ 15ರ ವೇಳೆಗೆ ಲಸಿಕೆಯನ್ನು ಮಾರುಕಟ್ಟೆಗೆ ತರುವ ಬಗ್ಗೆ ಸಂಸ್ಥೆ ನಿರ್ದೇಶಕ ಬಲರಾಮ ಭಾರ್ಗವ ಪುನರುಚ್ಚರಿಸಿದ್ದಾರೆ. ಮತ್ತು ವೈಜ್ಞಾನಿಕವಾಗಿ ಎಲ್ಲ ಹಂತಗಳನ್ನು ಕ್ರಮಬದ್ಧವಾಗಿ ನಿರ್ವಹಿಸುವ ಮೂಲಕವೇ ಈ ಪ್ರಕ್ರಿಯೆ ನೆರವೇರಿಸಲಾಗುವುದೆಂದು ಅವರು ಸ್ಪಷ್ಟಪಡಿಸಿದ್ದಾರೆ.

ಇತರ ಅನೇಕ ದೇಶಗಳು ಕೂಡ ಕ್ಲಿನಿಕಲ್ ಟ್ರಯಲ್ ನಡೆಸುತ್ತಿದ್ದು, ಕರೊನಾ ಔಷಧ ಅನ್ವೇಷಣೆಗೆ ಒಂದುರೀತಿಯಲ್ಲಿ ಸ್ಪರ್ಧೆಯೇ ಏರ್ಪಟ್ಟಿದೆ ಎನ್ನಬಹುದು. ಇಂಥ ತುರುಸು ಸಹಜ ಕೂಡ. ಏಕೆಂದರೆ, ಸದ್ಯ ಎಲ್ಲ ದೇಶಗಳಲ್ಲಿ ಕರೊನಾಕ್ಕೆ ಲಕ್ಷಣಾಧಾರಿತ ಚಿಕಿತ್ಸೆ ನಡೆಯುತ್ತಿರುವುದರಿಂದ, ನಿರೀಕ್ಷಿತ ಪ್ರಮಾಣದಲ್ಲಿ ರೋಗಿಗಳು ಗುಣಮುಖರಾಗುತ್ತಿಲ್ಲ ಮತ್ತು ಸೋಂಕು ಹರಡುವ ವೇಗಕ್ಕೆ ಕಡಿವಾಣ ಬೀಳುತ್ತಿಲ್ಲ. ಅಮೆರಿಕದಂತಹ ದೇಶದಲ್ಲಿ ಮೊದಲಿಂದಲೂ ಸೋಂಕು ಪಸರಿಸುವಿಕೆ ಜೋರಾಗಿಯೇ ಇದೆ. ಭಾರತದಲ್ಲಿ ಮೊದಲು ಈ ಪ್ರಮಾಣ ಕಡಿಮೆ ಇತ್ತಾದರೂ ಈಚಿನ ದಿನಗಳಲ್ಲಿ ಅಬ್ಬರ ಹೆಚ್ಚಿದೆ. ಹೀಗಾಗಿ ಈ ಹಾವಳಿ ನಿಯಂತ್ರಣಕ್ಕೆ ಲಸಿಕೆಯೇ ರಾಮಬಾಣವಾಗಲಿದೆ. ಮತ್ತು ಅಂಥ ಔಷಧ ಭಾರತದಲ್ಲಿಯೇ ಮೊದಲು ತಯಾರಾಗುವುದೆಂದು ಆಶಿಸೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net