

ಪೋರ್ಚುಗಲ್ನ ಅಲ್ಗಾರ್ವೆ ಕಡಲತೀರದಲ್ಲಿ ಅಪಾಯಕ್ಕೆ ಸಿಲುಕಿದ್ದ ಇಬ್ಬರು ಮಹಿಳೆಯರನ್ನು ಆ ದೇಶದ ಅಧ್ಯಕ್ಷರೇ ಕಾಪಾಡಿದ ಅಪರೂಪದ ಘಟನೆ ನಡೆದಿದೆ.
ಇಬ್ಬರು ಮಹಿಳೆಯರು ಅಲ್ಗಾರ್ವೆ ಬೀಚ್ಗೆ ಕಯಾಕಿಂಗ್ (ಸಾಹಸ ಜಲ ಕ್ರೀಡೆ)ಗೆ ತೆರಳಿದ್ದರು. ಆಟವಾಡುತ್ತಿದ್ದ ಅವರ ಕಯಾಕ್ (ಈ ಸಾಹಸದ ಆಟಕ್ಕೆ ಬಳಸುವ ರಬ್ಬರ್ ದೋಣಿ) ಪಲ್ಟಿಯಾಗಿ, ಇಬ್ಬರೂ ನೀರಿಗೆ ಬಿದ್ದಿದ್ದಾರೆ. ಅದೇ ಸಮಯದಲ್ಲಿ ಪೋರ್ಚುಗಲ್ನ 71 ವರ್ಷದ ಅಧ್ಯಕ್ಷ ಮಾರ್ಸೆಲೋ ರೆಬೆಲೋ ಡಿ ಸೂಸಾ ಅವರು ಪ್ರವಾಸೋದ್ಯಮ ಉತ್ತೇಜನಕ್ಕೆ ಸಂಬಂಧಪಟ್ಟ ಕೆಲವು ಕಾರ್ಯಕ್ರಮಗಳ ಪರಿಶೀಲನೆಗಾಗಿ ಅದೇ ಬೀಚ್ಗೆ ವಿಹಾರಕ್ಕೆ ಹೋಗಿದ್ದರು. ಆಗಷ್ಟೇ ಮಾಧ್ಯಮದವರೊಂದಿಗೆ ಮಾತನಾಡಿ, ಅಲ್ಲಿಯೇ ಓಡಾಡುತ್ತಿದ್ದ ಅಧ್ಯಕ್ಷರು ಮಹಿಳೆಯರು ನೀರಿಗೆ ಬೀಳುತ್ತಿರುವುದನ್ನು ನೋಡಿದ್ದೇ ತಡ, ಹಿಂದೆಮುಂದೆ ಯೋಚಿಸದೆ ಸಮುದ್ರದಲ್ಲಿ ಅವರಿದ್ದಲ್ಲಿಗೆ ಈಜುಕೊಂಡು ಹೋಗಿದ್ದಾರೆ. ಹಾಗೇ, ಅಲ್ಲಿಯೇ ಇದ್ದ ಇನ್ನೋರ್ವನೂ ಮಹಿಳೆಯರಿಗೆ ಸಹಾಯ ಮಾಡಲೆಂದು ನೀರಿಗೆ ಧುಮುಕಿದ್ದಾರೆ. ಇವರಿಬ್ಬರೂ ಮಹಿಳೆಯರಿದ್ದಲ್ಲಿಗೆ ಹೋಗುವಲ್ಲಿ, ಕಯಾಕಿಂಗ್ನಲ್ಲಿ ತೊಡಗಿದ್ದ ಇನ್ನೋರ್ವ ವ್ಯಕ್ತಿ, ತನ್ನ ಕಯಾಕ್ ಜತೆ ಅಲ್ಲಿಗೆ ಆಗಮಿಸಿದ್ದ. ಇದನ್ನೂ ಓದಿ: ಟ್ರೋಲ್ ಆಗುತ್ತಿರುವ ಕೊತ್ಮಿರಿ ಸೊಪ್ಪಿಗೆ ಹೊಸ ಆಯಾಮವನ್ನೇ ನೀಡಿದ ಕವಿರಾಜ್; ನಿಮಗೇನು ಅನ್ನಿಸುತ್ತದೆ ನೋಡಿ…
ಆಗಸ್ಟ್ 15ರಂದು ಘಟನೆ ನಡೆದಿದ್ದು, ಅಧ್ಯಕ್ಷರು ಸಮುದ್ರದಲ್ಲಿ ಈಜಿಕೊಂಡು ಹೋಗುತ್ತಿರುವ ಹಲವು ಫೋಟೋ, ವಿಡಿಯೋಗಳು ಸಿಕ್ಕಾಪಟೆ ವೈರಲ್ ಆಗಿವೆ.
ಈ ಮಹಿಳೆಯರು ಮತ್ತೊಂದು ಬೀಚ್ನಿಂದ ಕಯಾಕಿಂಗ್ ಮಾಡುತ್ತ ಇಲ್ಲಿಗೆ ಬಂದಿದ್ದರು. ಆದರೆ ದೊಡ್ಡ ಅಲೆಗಳ ಕಾರಣದಿಂದ ಅವರಿಗೆ ಆಯತಪ್ಪಿ ಅಪಾಯಕ್ಕೆ ಸಿಲುಕಿದ್ದರು ಎಂದು ಅಧ್ಯಕ್ಷರು ನಂತರ ಮಾಧ್ಯಮದವರಿಗೆ ತಿಳಿಸಿದ್ದಾರೆ. (ಏಜೆನ್ಸೀಸ್)