

ಅಹಮದಾಬಾದ್: ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಪೋಷ್ (Porsche) ಕಾರಿನ ಮಾಲೀಕರೊಬ್ಬರಿಗೆ ಸಂಚಾರಿ ಪೊಲೀಸರು ವಿಧಿಸಿದ ದಂಡದ ಮೊತ್ತ 27 ಲಕ್ಷ ರೂಪಾಯಿಗೂ ಅಧಿಕ!
ಹಾಗಾದರೆ ಭಾರತದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆಗಾಗಿ ವಿಧಿಸಲ್ಪಟ್ಟ ಗರಿಷ್ಠ ಮೊತ್ತದ ದಂಡ ಎಷ್ಟಿರಬಹುದು! ಹೀಗೊಂದು ಸಂದೇಹ ಎಲ್ಲರ ಮನದಲ್ಲಿ ಮೂಡಿದರೆ ಅಚ್ಚರಿ ಏನಿಲ್ಲ. ಪೋಷ್ ಕಾರಿನ ಮಾಲೀಕರಿಗೆ ಈ ರೀತಿ ದಂಡ ವಿಧಿಸಿದ್ದು ಅಹಮದಾಬಾದ್ ಪೊಲೀಸರು.
ಈ ಕೇಸ್ ಹಿಸ್ಟರಿ ಕೆದಕಿದರೆ ಪ್ರಕರಣ 2019ರ ನವೆಂಬರ್ಗೆ ಹೋಗುತ್ತದೆ. ಈ ಕಾರಿಗೆ ಅಂದು ನಂಬರ್ ಪ್ಲೇಟ್ ಇರಲಿಲ್ಲ. ಅಷ್ಟೇ ಅಲ್ಲ, ಅಗತ್ಯ ದಾಖಲೆಗಳೂ ಇರಲಿಲ್ಲವಂತೆ. ಅಗತ್ಯ ದಾಖಲೆಗಳು ಅಂದರೆ ಆರ್ಸಿ, ವಿಮಾ ಪತ್ರ, ಚಾಲನಾ ಪರವಾನಗಿ, ವಾಯು ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಸೇರಿ ಯಾವುದೇ ದಾಖಲೆ ಪತ್ರಗಳು ಇರಲಿಲ್ಲ. ಪೊಲೀಸರು ಕೂಡಲೇ ವಾಹನ ಮಾಲೀಕರಿಗೆ 9.80 ಲಕ್ಷ ರೂಪಾಯಿ ದಂಡ ವಿಧಿಸಿದ್ದರು.
ಆರು ವಾರಗಳ ನಂತರ ಪೊಲೀಸರು ದಂಡದ ಪ್ರಮಾಣವನ್ನು ಪರಿಷ್ಕರಿಸಿ 27.68 ಲಕ್ಷ ರೂಪಾಯಿಗೆ ಏರಿಸಿದರು. ಬಳಿಕ ಈ ಬಗ್ಗೆ ಟ್ವೀಟ್ ಮಾಡಿದ್ದು, ಸಂಚಾರ ನಿಯಮ ಉಲ್ಲಂಘನೆಗಾಗಿ ದೇಶದಲ್ಲೇ ಇದು ಗರಿಷ್ಠ ಪ್ರಮಾಣದ ದಂಡ ಎಂದು ಬರೆದುಕೊಂಡಿದ್ದಾರೆ. (ಏಜೆನ್ಸೀಸ್)