ಪೋರ್ನ್ ವ್ಯಸನ, ಕಾನೂನಿನ ಕುತ್ತು

Computer Screen
Published on

ನೀವು ರೈಲ್ವೇ ನಿಲ್ದಾಣದಲ್ಲಿ ನಿಂತಿರುವಾಗ ಅಲ್ಲಿನ ಟಿವಿ ಪರದೆಯ ಮೇಲೆ ಪೋರ್ನ್ (ಅಶ್ಲೀಲ ಲೈಂಗಿಕ) ವಿಡಿಯೋ ಪ್ರದರ್ಶನಗೊಂಡರೆ... ಅದ್ಹೇಗೆ ಸಾಧ್ಯ? ಕೆಲ ದಿನಗಳ ಹಿಂದೆ ಪಾಟ್ನಾ ರೈಲ್ವೇ ನಿಲ್ದಾಣದಲ್ಲಿ ಇಂತಹ ಘಟನೆಯೊಂದು ಜರುಗಿತು.

ಈ ಘಟನೆಯ ಹಿನ್ನೆಲೆಯಲ್ಲಿ ತಕ್ಷಣವೇ ಟಿವಿ ನಿರ್ವಹಣೆಯ ಗುತ್ತಿಗೆ ಪಡೆದುಕೊಂಡ ಗುತ್ತಿಗೆದಾರನನ್ನು ಕಿತ್ತುಹಾಕಲಾಗಿದ್ದು, ಆತನ ವಿರುದ್ಧ ಪ್ರಕರಣವನ್ನೂ ದಾಖಲಿಸಲಾಗಿದೆ. ಈ ಲೋಪವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಪೂರ್ವ ಮಧ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿ.ನರೇಂದ್ರಕುಮಾರ್ ತಿಳಿಸಿದರು. ಗುತ್ತಿಗೆದಾರನ ಎಲ್ಲಾ ಟೆಂಡರ್​ಗಳನ್ನು ರದ್ದುಪಡಿಸಿ ಕಪ್ಪುಪಟ್ಟಿಗೆ ಸೇರಿಸಲಾಗಿದ್ದು, ಇನ್ನು ಮುಂದೆ ಆತನಿಗೆ ಯಾವುದೇ ಇ-ಕಾಂಟ್ರಾಕ್ಟ್ ನೀಡಲಾಗುವುದಿಲ್ಲ; ಆಪರೇಟರ್ ಅಳವಡಿಸದ ಎಲ್ಲಾ ಟಿವಿ ಪರದೆಗಳ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಅವರು ಹೇಳಿದರು. ಹಾಗಿದ್ದರೆ ಭಾರತದಲ್ಲಿ ಪೋರ್ನ್ ನೋಡುವುದು ಕಾನೂನುಬಾಹಿರವೋ ಅಲ್ಲವೋ? ನಮ್ಮ ಕೈಯಲ್ಲಿರುವ ಮೊಬೈಲ್​ಫೋನ್​ನಲ್ಲಿ ಕೂಡ ಪೋರ್ನ್ ಇಟ್ಟುಕೊಂಡರೆ, ನೋಡಿದರೆ ಹಾಗೂ ಇತರರೊಂದಿಗೆ ಹಂಚಿಕೊಂಡರೆ ಏನಾಗಬಹುದು ಎಂಬ ಪ್ರಶ್ನೆಗಳು, ಕುತೂಹಲಗಳು ಈ ಸಂದರ್ಭದಲ್ಲಿ ಉದ್ಭವಿಸಬಹುದು. ಖಾಸಗಿಯಾಗಿ ಹಾಗೂ ಖಾಸಗಿ ಜಾಗದಲ್ಲಿ ಪೋರ್ನ್ ನೋಡುವುದು ತಪ್ಪಲ್ಲ ಎಂದು ಸುಪ್ರೀಂ ಕೋರ್ಟ್ 2015ರಲ್ಲಿ ನೀಡಿದ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಖಾಸಗಿ ಕೋಣೆಯಲ್ಲಿ ಪೋರ್ನ್ ನೋಡುವುದು ವೈಯಕ್ತಿಕ ಸ್ವಾತಂತ್ರ್ಯದ ಅಧಿಕಾರ ವ್ಯಾಪ್ತಿಗೆ ಬರಬಹುದು ಎಂದೂ ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ, ನೀವು ನಿಮ್ಮ ಖಾಸಗಿ ಜಾಗದಲ್ಲಿ ಪೋರ್ನ್ ವೀಕ್ಷಿಸುತ್ತಿದ್ದರೆ ಅದು ಸಂಪೂರ್ಣವಾಗಿ ಕಾನೂನುಬಾಹಿರವಲ್ಲ. ಆದರೆ, ಮಕ್ಕಳ ಅಶ್ಲೀಲ ಚಿತ್ರಗಳು ಅಥವಾ ಮಹಿಳೆಯರ ಮೇಲಿನ ಅತ್ಯಾಚಾರ ಇಲ್ಲವೇ ಹಿಂಸೆಗೆ ಸಂಬಂಧಿಸಿದ ಅಶ್ಲೀಲ ವಿಷಯಗಳನ್ನು ವೀಕ್ಷಿಸುವುದು ಅಥವಾ ಸಂಗ್ರಹಿಸುವುದು ಅಪರಾಧದ ವ್ಯಾಪ್ತಿಗೆ ಬರುತ್ತದೆ ಎಂದೂ ನ್ಯಾಯಾಲಯ ಹೇಳಿದೆ.

ಒಟ್ಟಾರೆಯಾಗಿ, ಖಾಸಗಿ ಜಾಗದಲ್ಲಿ ಅಥವಾ ಏಕಾಂಗಿಯಾಗಿ ಪೋರ್ನ್ ವೀಕ್ಷಿಸುತ್ತಿದ್ದರೆ, ಅದು ಸಂಪೂರ್ಣವಾಗಿ ಮಾನ್ಯವಾಗಿದೆ ಮತ್ತು ಕಾನೂನುಬದ್ಧವಾಗಿದೆ. ಆದರೆ, ಸಾರ್ವಜನಿಕ ಸ್ಥಳದಲ್ಲಿ ಪೋರ್ನ್ ವೀಕ್ಷಿಸುತ್ತಿದ್ದರೆ ಅದು ಅಶ್ಲೀಲತೆಯ ವರ್ಗದಲ್ಲಿ ಬರುತ್ತದೆ ಮತ್ತು ಅದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ.

ಕಾನೂನು ಏನು ಹೇಳುತ್ತದೆ?: ಖಾಸಗಿ ಜಾಗದಲ್ಲಿ ಪೋರ್ನ್ ವೀಕ್ಷಿಸುವುದು ಭಾರತದಲ್ಲಿ ಕಾನೂನುಬಾಹಿರ ಅಲ್ಲದಿರಬಹುದು. ಆದರೆ, ಅಶ್ಲೀಲ ವಿಡಿಯೋಗಳು ಅಥವಾ ಫೋಟೋಗಳನ್ನು ಡೌನ್​ಲೋಡ್ ಮಾಡಿ ಮೊಬೈಲ್​ನಲ್ಲಿ ಇಟ್ಟುಕೊಳ್ಳುವುದು ಅಥವಾ ವೈರಲ್ ಮಾಡುವುದು ಅಪರಾಧವೇ. ಹೀಗೆ ಮಾಡಿದರೆ, ಮಾಹಿತಿ ತಂತ್ರಜ್ಞಾನ ಕಾನೂನು ಅಥವಾ ಹೊಸ ಐಟಿ ಕಾಯ್ದೆಯ ಸೆಕ್ಷನ್ 67, 67ಎ, 67ಬಿ ಅಡಿಯಲ್ಲಿ ಜೈಲು ಮತ್ತು ದಂಡದ ಶಿಕ್ಷೆಯಾಗಬಹುದು.

ಸೆಕ್ಷನ್ 67 ರ ಪ್ರಕಾರ, ವಿದ್ಯುನ್ಮಾನ ರೂಪದಲ್ಲಿ ಅಶ್ಲೀಲವಾಗಿರುವ ಮಾಹಿತಿಯನ್ನು ಪ್ರಕಟಿಸುವುದು ಅಪರಾಧವಾಗಿದೆ. ಪೋರ್ನ್ ವೀಕ್ಷಣೆ, ಡೌನ್​ಲೋಡ್ ಮತ್ತು ವೈರಲ್ ಮಾಡಿದರೆ ಮೊದಲ ಬಾರಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 5 ಲಕ್ಷ ರೂಪಾಯಿವರೆಗೆ ದಂಡ ಇದೆ. ಎರಡನೇ ಬಾರಿಗೆ ಸಿಕ್ಕಿಬಿದ್ದರೆ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 10 ಲಕ್ಷ ರೂಪಾಯಿಯವರೆಗೆ ದಂಡ ವಿಧಿಸಬಹುದು.

ಸೆಕ್ಷನ್ 67ಎ ಅಡಿಯಲ್ಲಿ, ಒಬ್ಬ ವ್ಯಕ್ತಿಯು ಲೈಂಗಿಕ ಸ್ಪಷ್ಟ ಕ್ರಿಯೆ ಅಥವಾ ನಡವಳಿಕೆಯನ್ನು ಹೊಂದಿರುವ ಚಿತ್ರಗಳನ್ನು ಪ್ರಕಟಿಸುವುದು ಅಥವಾ ರವಾನಿಸುವುದು ಅಪರಾಧವಾಗಿದೆ. ಅಶ್ಲೀಲ ವಿಷಯವನ್ನು ಹೊಂದಿರುವುದು ಮತ್ತು ಅದನ್ನು ವೈರಲ್ ಮಾಡುವುದು ಕಾನೂನುಬಾಹಿರವಾಗಿದ್ದು ಮೊದಲ ಬಾರಿಗೆ ಸಿಕ್ಕಿಬಿದ್ದರೆ 5 ವರ್ಷ ಜೈಲುಶಿಕ್ಷೆ ಮತ್ತು 10 ಲಕ್ಷ ರೂ. ದಂಡ ಹಾಗೂ ಎರಡನೇ ಬಾರಿ ಸಿಕ್ಕಿಬಿದ್ದರೆ 7 ವರ್ಷ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ. ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

ಇನ್ನು ಸೆಕ್ಷನ್ 67ಬಿ ಪ್ರಕಾರ, ಮಕ್ಕಳ ಅಶ್ಲೀಲ ಪ್ರಕಟಣೆ ಅಥವಾ ಮಕ್ಕಳ ಪೋರ್ನ್ ಗಳನ್ನು ಆನ್​ಲೈನ್​ನಲ್ಲಿ ಪ್ರಕಟಿಸುವುದು ಅಪರಾಧವಾಗಿದೆ. ಯಾರಾದರೂ ಮಕ್ಕಳ ಪೋರ್ನ್ (ಆಶ್ಲೀಲ ವಿಡಿಯೋ ಅಥವಾ ಚಿತ್ರ) ಹೊಂದಿದ್ದರೆ ಅಥವಾ ವೈರಲ್ ಮಾಡಿದರೆ ಅದು ಕಾನೂನುಬಾಹಿರವಾಗಿದೆ. ಹೀಗೆ ಮಾಡಿ ಮೊದಲ ಬಾರಿಗೆ ಸಿಕ್ಕಿಬಿದ್ದರೆ 5 ವರ್ಷ ಜೈಲು ಶಿಕ್ಷೆ ಮತ್ತು 10 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿಗೆ ಸಿಕ್ಕಿಬಿದ್ದರೆ 7 ವರ್ಷ ಜೈಲು ಹಾಗೂ 10 ಲಕ್ಷ ದಂಡ ರೂಪಾಯಿ ವಿಧಿಸಲಾಗುತ್ತದೆ.

ಮಕ್ಕಳ ಪೋರ್ನ್ ಬಗ್ಗೆ ಕಟ್ಟುನಿಟ್ಟಿನ ಕಾನೂನು

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಮಕ್ಕಳ ಪೋನೋಗ್ರಫಿ ಕುರಿತಂತೆ ಕಠಿಣ ಶಿಕ್ಷೆಯ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಈ ಕಾಯ್ದೆಯ ಸೆಕ್ಷನ್ 14ರ ಪ್ರಕಾರ, ಒಬ್ಬ ವ್ಯಕ್ತಿಯು ಆಶ್ಲೀಲ ವಸ್ತುವಿಗಾಗಿ ಮಕ್ಕಳನ್ನು ಬಳಸಿಕೊಂಡರೆ ಜೀವಾವಧಿ ಶಿಕ್ಷೆಗೆ ಗುರಿಯಾಗಬಹುದು. ಇದರ ಜತೆಗೆ, ದಂಡವನ್ನು ಕೂಡ ವಿಧಿಸಬಹುದಾಗಿದೆ. ಪೋಕ್ಸೋ ಕಾಯ್ದೆಯ ಸೆಕ್ಷನ್ 15ರ ಪ್ರಕಾರ, ಒಬ್ಬ ವ್ಯಕ್ತಿಯು ಮಕ್ಕಳ ಪೋರ್ನ್​ಗೆ ಸಂಬಂಧಿಸಿದ ವಿಷಯವನ್ನು ಇಟ್ಟುಕೊಂಡರೆ, ಆತನಿಗೆ ಮೂರು ವರ್ಷಗಳವರೆಗೆ ಸೆರೆವಾಸ ಮತ್ತು ದಂಡವನ್ನು ವಿಧಿಸಬಹುದಾಗಿದೆ.

ಐಪಿಸಿಯಲ್ಲೂ ಶಿಕ್ಷೆಗೆ ಅವಕಾಶ

ಪೋರ್ನೆಗ್ರಫಿ ಅಥವಾ ಅಶ್ಲೀಲತೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆ (ಐಪಿಸಿ) ಯಲ್ಲೂ ಶಿಕ್ಷೆ ವಿಧಿಸಲು ಅವಕಾಶವಿದೆ. ಐಪಿಸಿಯ ಸೆಕ್ಷನ್ 292 ಮತ್ತು 293ರಲ್ಲಿ ಇಂತಹುದಕ್ಕೆ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಐಪಿಸಿ ಸೆಕ್ಷನ್ 292 ರ ಅಡಿಯಲ್ಲಿ ಅಶ್ಲೀಲ ವಸ್ತುಗಳನ್ನು ಮಾರಾಟ ಮಾಡುವುದು, ವಿತರಿಸುವುದು, ಪ್ರದರ್ಶಿಸುವುದು ಅಥವಾ ಪ್ರಸಾರ ಮಾಡುವುದು ಅಪರಾಧವಾಗಿದೆ. ಮೊದಲ ಬಾರಿಗೆ ಈ ರೀತಿ ಮಾಡಿ ಸಿಕ್ಕಿಬಿದ್ದರೆ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 2 ಸಾವಿರ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ. ಸೆಕ್ಷನ್ 293ರ ಅಡಿಯಲ್ಲಿ, 20 ವರ್ಷದೊಳಗಿನ ವ್ಯಕ್ತಿಗೆ ಅಶ್ಲೀಲ ವಸ್ತುವನ್ನು ತೋರಿಸುವುದು, ಮಾರಾಟ ಮಾಡುವುದು, ಬಾಡಿಗೆಗೆ ನೀಡುವುದು ಅಥವಾ ಹಂಚುವುದು ಅಪರಾಧವಾಗಿದೆ. ಈ ರೀತಿ ಮಾಡಿ ಮೊದಲ ಬಾರಿಗೆ ಸಿಕ್ಕಿಬಿದ್ದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 2 ಸಾವಿರ ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ. ಎರಡನೇ ಬಾರಿಗೆ ಸಿಕ್ಕಿಬಿದ್ದರೆ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 5 ಸಾವಿರ ರೂಪಾಯಿವರೆಗೆ ದಂಡ ವಿಧಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net