ಜಾತಿ ಗಣತಿ ಹೆಸರಲ್ಲಿ ಜನಸಂಖ್ಯೆ ಕಡಿಮೆ ತೋರಿಸಲಾಗಿದೆ

21blrp1
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದಿಂದ ಆಯೋಜಿಸಿದ್ದ ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು.
Published on

ಬೇಲೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದಿಂದ ಶ್ರೀ ಚನ್ನಕೇಶವಸ್ವಾಮಿ ದಾಸೋಹ ಸಭಾ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಆಚರಣೆ ಹಾಗೂ ಬಸವ ಜಯಂತಿ ಪೂರ್ವಭಾವಿ ಸಭೆಯನ್ನು ಸೋಮವಾರ ಆಯೋಜಿಸಲಾಗಿತ್ತು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಎ.ಎಸ್.ಬಸವರಾಜ ಮಾತನಾಡಿ, ಡಾ.ಅಂಬೇಡ್ಕರ್ ಅವರು ಒಂದು ಜಾತಿ, ವರ್ಗ, ಧರ್ಮಕ್ಕೆ ಸೀಮಿತರಾದವರಲ್ಲ. ಸಂವಿಧಾನದ ಮೂಲಕ ಎಲ್ಲರಿಗೂ ಹಕ್ಕು ಮತ್ತು ಅವಕಾಶಗಳನ್ನು ನೀಡಿದವರು. ಅಂತಹ ಮಹಾನ್ ಸಾಧಕರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಜತೆಗೆ ವೀರಶೈವ ಲಿಂಗಾಯತ ಧರ್ಮ ತನ್ನದೇ ಆದ ಇತಿಹಾಸ ಹೊಂದಿದೆ. ಎಲ್ಲರನ್ನು ಅಪ್ಪಿಕೊಂಡು, ಪ್ರೀತಿಸಿ ಅಭಿಮಾನಿಸುವ ಧರ್ಮವಾಗಿದೆ. ಈ ನಮ್ಮ ಧರ್ಮದ ಮೇಲೆ ರಾಜ್ಯದಲ್ಲಿ ಜಾತಿ ಗಣಿತ ಹೆಸರಲ್ಲ್ಲಿ ಜನಸಂಖ್ಯೆಯಲ್ಲಿ ಹಿಂದಿದೆ ಎಂದು ಬಿಂಬಿಸಲು ಮುಂದಾಗಿದ್ದಾರೆ. ಈ ಬೆಳವಣಿಗೆಯನ್ನು ಖಂಡಿಸಿ ಕೆಲವು ಭಾಗದಲ್ಲಿ ಪ್ರತಿಭಟನೆ ನಡೆದಿದೆ. ಅದೇ ರೀತಿ ಈ ಬಾರಿಯ ಬಸವ ಜಯಂತಿ ಕಾರ್ಯಕ್ರಮದಲ್ಲಿ ನಮ್ಮ ಶಕ್ತಿ ಪ್ರದರ್ಶನ ಮಾಡಬೇಕಿದೆ. ಹಾಗೇಯೇ ಮಹಾಸಭಾ ವತಿಯಿಂದ ನಮ್ಮ ಜನಾಂಗದ ಗಣತಿ ಸಮೀಕ್ಷೆ ನಡೆಸಲಾಗುತ್ತಿದೆ. ಅಲ್ಲದೆ ಈಗಾಗಲೇ ಜನಿವಾರಕ್ಕೆ ಕೈ ಹಾಕಿದವರು ಮುಂದಿನ ದಿನಗಳಲ್ಲಿ ಶಿವದಾರಕ್ಕೆ ಕೈ ಹಾಕುವ ಸಾಧ್ಯತೆ ಇದ್ದು ಸಮಾಜ ಎಚ್ಚರಗೊಳ್ಳಬೇಕು ಎಂದರು.

ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ತಾಲೂಕು ವೀರಶೈವ ಲಿಂಗಾಯತ ಸಮಾಜದಿಂದ ಡಾ.ಅಂಬೇಡ್ಕರ್ ಜಯಂತಿ ಆಯೋಜಿಸಿದ್ದು ಉತ್ತಮ ಬೆಳವಣಿಗೆಯಾಗಿದೆ. ಇಂದು ಅಂಬೇಡ್ಕರ್ ಅವರ ಬಗ್ಗೆ ಕೆಲವರು ಗಂಟೆಗಟ್ಟಲೇ ಮಾತನಾಡುತ್ತಾರೆ. ಅದರಲ್ಲೂ ಕಾಂಗ್ರೆಸ್‌ನವರು ಅಂಬೇಡ್ಕರ್ ಅವರನ್ನು ಹೇಗೆ ನಡೆಸಿಕೊಂಡಿದ್ದಾರೆ ಎಂಬುದರ ಬಗ್ಗೆ ಇತಿಹಾಸದ ಪುಟದಲ್ಲಿ ಅಡಗಿದೆ. ಬಸವಾದಿ ಶರಣರು ಅಂದಿನ ಕಾಲಘಟ್ಟದಲ್ಲಿ ಅನುಭವ ಮಂಟಪ ನಿರ್ಮಿಸಿ 770 ವಿವಿಧ ಜಾತಿಯವರಿಗೆ ಮುನ್ನುಡಿ ಬರೆದಿದ್ದು, ಇಂದಿನ ಸಂವಿಧಾನದಲ್ಲಿ ಕಾಣಬಹುದು. ಆ ಕಾರಣದಿಂದ ಬುದ್ಧ-ಬಸವ-ಅಂಬೇಡ್ಕರ್ ಅಭಿಮಾನಿಗಳು ಏಕಕಾಲದಲ್ಲಿ ಇಂತಹ ಜಯಂತಿಯನ್ನು ಆಯೋಜಿಸಿದರೆ ಸಮಸಮಾಜ ನಿರ್ಮಿಸಲು ಸಾಧ್ಯ ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಸನ ಜಿಲ್ಲಾಧ್ಯಕ್ಷ ಪರಮೇಶ್, ರಾಷ್ಟ್ರೀಯ ಉಪಾಧ್ಯಕ್ಷೆ ಬಿ.ಕೆ.ಚಂದ್ರಕಲಾ, ರಾಜ್ಯ ಯುವ ಘಟಕದ ಕಾರ್ಯದರ್ಶಿ ವಿಕ್ರಂ, ಮಾಜಿ ಅಧ್ಯಕ್ಷ ರವಿಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ವಿಂಪು, ಯುವ ಘಟಕದ ಅಧ್ಯಕ್ಷ ಚೇತನ್, ಉಪಾಧ್ಯಕ್ಷ ಅರಣಕುಮಾರ್ ಸಮಾಜದ ಮುಖಂಡರಾದ ಜಗದೀಶ್, ಅನ್ನಪೂರ್ಣಾ, ದೊಡ್ಡವೀರೇಗೌಡ, ಯಶೋದಾ, ಹೆಬ್ಬಾಳು ಹಾಲಪ್ಪ, ಮದನ್, ಸುನಿಲ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net