

ಅಗರ್ತಲ: ದುರ್ಗಾಪೂಜೆ ಸಮಯದಲ್ಲಿ ಖ್ಯಾತ ಯುವ ಗಾಯಕಿಗೆ ದುಷ್ಕರ್ಮಿಗಳ ಗುಂಪೊಂದು ಲೈಂಗಿಕ ಕಿರುಕುಳ ನೀಡಿ, ಹಲ್ಲೆ ಮಾಡಿರುವ ಘಟನೆ ತ್ರಿಪುರಾ ರಾಜಧಾನಿ ಅಗರ್ತಲದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗಾಯಕಿಗೆ ಮಾತ್ರವಲ್ಲದೆ ಆಕೆಯ ಬಾಯ್ಫ್ರೆಂಡ್ ಮೇಲೆಯೂ ದುಷ್ಕರ್ಮಿಗಳು ಸಾರ್ವಜನಿಕ ಪ್ರದೇಶದಲ್ಲೇ ಹಲ್ಲೆ ಮಾಡಿದ್ದಾರೆ. ಅಪರಾಧ ಎಸಗಿದ್ದಲ್ಲದೆ ರೆಕಾರ್ಡ್ ಮಾಡಿಕೊಂಡಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ.
ಸದ್ಯ ಪ್ರಕರಣದ ಪ್ರಮುಖ ಆರೋಪಿ ಸಂಜಿತ್ ಬರ್ಮನ್ ಎಂಬಾತನನ್ನು ಅಗರ್ತಲ ಪೊಲೀಸರು ಬಂಧಿಸಿದ್ದಾರೆ. ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡಿದ್ದಲ್ಲದೆ. ಕೆಟ್ಟ ಪದಗಳಿಂದಲೂ ನಿಂದಿಸಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದಾಗಿನಿಂದ ಆರೋಪಿಗಳನ್ನು ಬಂಧಿಸುವಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು. ಗಾಯಕಿಗೆ ನ್ಯಾಯ ಕೊಡಿಸುವಂತೆ ಒತ್ತಾಯಗಳು ಕೇಳಿಬಂದಿದ್ದವು.
ಇದೀಗ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಇನ್ನುಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿ ಸಂಜಿತ್ ಬರ್ಮನ್ನನ್ನು ವಿಚಾರಣೆಗೆ ಒಳಪಡಿಸಿದ್ದು, ಆತ ನೀಡುವ ಹೇಳಿಕೆ ಆಧಾರದ ಮೇಲೆ ಇನ್ನುಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. (ಏಜೆನ್ಸೀಸ್)