ಸರಳರಲ್ಲಿ ವಿರಳ ಪೋಪ್ ಫ್ರಾನ್ಸಿಸ್

pope
Published on

ಮೊನ್ನೆ  ಕ್ರೈಸ್ತೈಕ್ಯರಾದ ಸಾರ್ವತ್ರಿಕ ಕಥೋಲಿಕ ಕ್ರೖೆಸ್ತ ಧರ್ಮಸಭೆಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಲ್ಯಾಟಿನ್ ಅಮೆರಿಕದ ಅರ್ಜೆಂಟೀನಾ ಸಂಜಾತ ಕಾರ್ಡಿನಲ್ ಜಾರ್ಜ್ ಬಗೋಗ್ಲಿಯೊ 266ನೇ ಪೋಪ್ ವಿಶ್ವಗುರುವಾಗಿ ಚುನಾಯಿತರಾದದ್ದೊಂದು ಸೋಜಿಗ. ಬಡ ಜೆಸಿಟ್ ಸಮುದಾಯದ ಇವರು ಆಡಂಬರ, ಅದ್ದೂರಿತನ ಮತ್ತು ವೈಭವಗಳನ್ನು ದೂರವಿಟ್ಟವರು. ತಾವು ಆಸೀನರಾಗುವ ವೈಭವೋಪೇತ ಸಿಂಹಾಸನ ತೊರೆದು ಸಾಧಾರಣ ಕಟ್ಟಿಗೆಯ ಖುರ್ಚಿಯಲ್ಲಿ ಕೂರುತ್ತ, ಶಯನಕ್ಕಾಗಿ ಮೀಸಲಿದ್ದ ಹಂಸತೂಲಿಕಾತಲ್ಪ ತೊರೆದು, ಸಾಮಾನ್ಯ ಮರದ ಮಂಚದ ಮೇಲೆ ಮಲಗುತ್ತಿದ್ದರು. ತಮ್ಮ ಓಡಾಟಕ್ಕೆಂದಿದ್ದ ಐಷಾರಾಮಿ ಲಿಮೋಸಿನ್ ಕಾರನ್ನು ತೊರೆದು, ಸಾಧಾರಣ ಚತುಷ್ಚಕ್ರ ವಾಹನ ಬಳಸ ತೊಡಗಿದರು.

ವಿಶ್ವಗುರುವಾಗಿ, ಸುಡಾನ್ ರಾಷ್ಟ್ರದ 2 ಬಣಗಳ ನಡುವಿನ ರಾಜಕೀಯ ಸಂಘರ್ಷ ತೊಡೆ ಯಲು ಆ ನಾಯಕರನ್ನು ವ್ಯಾಟಿಕನ್​ಗೆ ಬರಮಾಡಿ, ಅವರ ಮುಂದೆ ಮೊಣಕಾಲೂರಿ ಅವರ ಶೂ-ಭರಿತ ಪಾದಗಳನ್ನು ಚುಂಬಿಸುತ್ತ ಶಾಂತಿ ಸ್ಥಾಪನೆಗೊಂದು ಅವಕಾಶ ನೀಡಿ ಎಂದು ಆ ದೇಶದಲ್ಲಿ ಶಾಂತಿ ಸ್ಥಾಪಿಸಿದರು. ಪ್ರತಿವರ್ಷದ ತಪಸ್ಸು ಕಾಲದಲ್ಲಿ ರೋಂನ ಸೆರೆಮನೆಗೆ ತೆರಳಿ ಅಲ್ಲಿಯ ಪರಿತ್ಯಕ್ತರೆನಿಸಿದ ಸ್ತ್ರೀ-ಪುರುಷ ಕೈದಿಗಳ ಕಾಲು ತೊಳೆದು, ಅವಕ್ಕೆ ಮುತ್ತಿಟ್ಟು ಕ್ರಿಸ್ತನನ್ನೇ ಅಲ್ಲಿ ನೆಲೆಗೊಳಿಸಿದರು. ಸಿರಿಯ ದೇಶದ ನಿರಾಶ್ರಿತರನ್ನು ದೇವರ ಮಕ್ಕಳು ಎನ್ನುತ್ತ ಅವರಿಗೆ ಆಶ್ರಯದ ವ್ಯವಸ್ಥೆ ಮಾಡಿದರು. ಪೋಪ್ ಆಗಿ ತಮಗೆ ದೊರೆವ ಸಾವಿರಾರು ಡಾಲರುಗಳ ಸಂಬಳ ಪೂರ್ತಿ ದಾನ ಧರ್ಮಗಳಿಗೆ ವ್ಯಯಿಸುತ್ತ, ಪರಿಸರ ರಕ್ಷಣೆಯನ್ನು ಕಥೋಲಿಕ ಕ್ರೖೆಸ್ತ ಜಗತ್ತು ಪರಿಪಾಲಿಸುವಂತೆ ಕ್ರಮ ಕೈಗೊಂಡರು. ಚಿಕ್ಕ ಮಕ್ಕಳ ಬಗ್ಗೆ ವಿಶೇಷ ಆದರ, ವಾತ್ಸಲ್ಯ ತೋರುತ್ತಿದ್ದರು. ತೃತೀಯ ಲಿಂಗಿಗಳಿಗೂ ಗೌರವ ತೋರಬೇಕೆಂದು ಅಲವತ್ತು ಕೊಂಡರು. ಹೀಗೆ, ಸರಳರಲ್ಲಿ ವಿರಳರಾದ ವಿಶ್ವಗುರು ಪೋಪ್ ಫ್ರಾನ್ಸಿಸ್, ಜಗತ್ತಿನಲ್ಲಿ ಅಳಿಸಲಾಗದ ಛಾಪು ಮೂಡಿಸಿ ಅಮರರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net