ತಂದೆ ಸತ್ತ ನಾಲ್ಕು ತಿಂಗಳಿಗೆ ಹುಟ್ಟಿದ ಹೆಣ್ಣುಮಗು ತಾಯಿಗೂ ಬೇಡವಾಯ್ತು...!

baby 20 APR 20
Published on

ಚೆನ್ನೈ: ನತದೃಷ್ಟತನ ಎಂದರೆ ಇದೇ ಇರಬೇಕು. ಗರ್ಭದಲ್ಲಿದ್ದಾಗಲೇ ಆ ಮಗು ತಂದೆಯನ್ನು ಕಳೆದುಕೊಂಡಿತು. ಹುಟ್ಟಿದ ಬಳಿಕ ತಾಯಿಗೂ ಬೇಡವಾಯ್ತು...!

ನಾಲ್ಕು ತಿಂಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ಮಧುರೈನ ಚಿಕ್ಕಅನುರಣಿ ಎಂಬ ಗ್ರಾಮದ ಮಹಿಳೆಯೊಬ್ಬಳು ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ. ಆಕೆಗೆ ತನಗೆ ಆ ಮಗು ಬೇಡ ಎಂದು ಮಕ್ಕಳ ದತ್ತು ಕೇಂದ್ರಕ್ಕೆ ದಾನ ಮಾಡಿದ್ದಾಳೆ.

ಆಕೆಯ ಪತಿ ದಿನಗೂಲಿ ಕೆಲಸ ಮಾಡುತ್ತಿದ್ದ. ಹೃದಯಾಘಾತದಿಂದ ನಾಲ್ಕು ತಿಂಗಳ ಹಿಂದೆ ಮೃತಪಟ್ಟಿದ್ದಾನೆ. ಅಲ್ಲದೇ, ಈಗಾಗಲೇ ಆಕೆಗೆ 9 ಹಾಗೂ 10 ನೇ ತರಗತಿ ಓದುತ್ತಿರುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೂರನೇ ಮಗುವನ್ನು ಸಾಕಲು ತಾನು ಆರ್ಥಿಕವಾಗಿ ಶಕ್ತಳಾಗಿಲ್ಲ ಎನ್ನುವ ಕಾರಣಕ್ಕೆ ದತ್ತು ಕೇಂದ್ರಕ್ಕೆ ನೀಡಿರುವುದಾಗಿ ಮಹಿಳೆ ಹೇಳಿಕೆ ನೀಡಿದ್ದಾಳೆ.

ಸದ್ಯ, ತನ್ನ ಪಾಲಕರೊಂದಿಗೆ ನೆಲೆಸಿರುವ ಮಹಿಳೆ, ತೋಟದ ಕೆಲಸ ಮಾಡುತ್ತಿದ್ದಳು. ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಬಳಿಕ, ತನಗೆ ಮಗು ಸಾಕಲು ಆಗುವುದಿಲ್ಲ ಎಂದು ವೈದ್ಯರಿಗೆ ಹೇಳಿದ್ದಾಳೆ.

ಆಕೆಯ ಅಸಹಾಯಕತೆ ಬಗ್ಗೆ ಅರಿತ ವೈದ್ಯರು, ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕುಟುಂಬದ ಬಡತನ ಅರಿತ ಅಧಿಕಾರಿಗಳು ಮಗುವನ್ನು ದತ್ತು ಕೇಂದ್ರಕ್ಕೆ ನೀಡಿದ್ದಾರೆ. ಜತೆಗೆ, ಉಳಿದ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net