ಬಾಕಿ ವಸೂಲಿಗೆ ಸಿದ್ಧತೆ: ಸುಧಾರಿಸದ ತೆರಿಗೆ ಸಂಗ್ರಹ, ಸಂಕಷ್ಟದಲ್ಲಿದೆ ಸರ್ಕಾರ..

Front 2nd lead F
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಕರೊನಾ ಮಹಾಮಾರಿ ಮತ್ತಿತರ ಸರಣಿ ಸಂಕಷ್ಟಗಳ ನಡುವೆ ತೆರಿಗೆ ಸಂಗ್ರಹ ನಿರೀಕ್ಷಿತ ಸುಧಾರಣೆ ಕಾಣದಿರುವ ಹಿನ್ನೆಲೆಯಲ್ಲಿ ಆರ್ಥಿಕ ಶಿಸ್ತು ತರಲು ಪಣತೊಟ್ಟಿರುವ ಸರ್ಕಾರ ಬಾಕಿ ವಸೂಲಿಗಳತ್ತ ಗಮನ ಕೇಂದ್ರೀಕರಿಸಿದೆ. ಮುಂದಿನ ಆರ್ಥಿಕ ವರ್ಷದಿಂದ ರಾಜ್ಯಕ್ಕೆ ಜಿಎಸ್​ಟಿ ಪರಿಹಾರ ನಿಲ್ಲಲಿದ್ದು, ಇನ್ನೂ ಐದು ವರ್ಷ ಪರಿಹಾರ ಮುಂದುವರಿಸಬೇಕೆಂಬ ಬೇಡಿಕೆಗೆ ಕೇಂದ್ರ ಸರ್ಕಾರದಿಂದ ನಿರೀಕ್ಷಿತ ಬೆಂಬಲ ವ್ಯಕ್ತವಾಗಿಲ್ಲ. ಆದ್ದರಿಂದಲೇ ಆರ್ಥಿಕ ಕ್ರೋಡೀಕರಣಕ್ಕಾಗಿ ಬೇರೆ ಬೇರೆ ಮಾರ್ಗಗಳತ್ತ ಸರ್ಕಾರ ಗಮನ ಹರಿಸುತ್ತಿದೆ.

ಸಾರ್ವಜನಿಕ ಉದ್ದಿಮೆಗಳು, ಸಹಕಾರಿ ಸಂಘಗಳು, ಶಿಕ್ಷಣ, ಕ್ರೀಡೆ, ಸಮಾಜ ಕಲ್ಯಾಣ ಕಾರ್ಯಗಳು, ನೀರು ಸರಬರಾಜು ಯೋಜನೆಗಳು, ಕೃಷಿ, ಗ್ರಾಮೀಣಾಭಿವೃದ್ಧಿ, ಇಂಧನ, ಉದ್ದಿಮೆ-ಖನಿಜ, ಸಾರಿಗೆ, ಸರ್ಕಾರೇತರ ಸಂಸ್ಥೆಗಳು ಹೀಗೆ ವಿವಿಧ ವಲಯಗಳಿಗೆ ಸರ್ಕಾರ ಸಾಲ ನೀಡಿದೆ. ಆಯವ್ಯಯಯೇತರ ಸಾಲಗಳು ಹೆಚ್ಚಾಗಿವೆ. ಅನೇಕ ಸಂಸ್ಥೆಗಳಿಗೆ ಸರ್ಕಾರ ಖಾತರಿ ನೀಡಿದೆ.

ವರ್ಷದಿಂದ ವರ್ಷಕ್ಕೆ ಸರ್ಕಾರದಿಂದ ಸಾಲ ನೀಡುವ ಪ್ರಮಾಣ ಹೆಚ್ಚಾಗುತ್ತಿದ್ದರೆ, ಮರು ವಸೂಲಾತಿ ನಿಂತಲ್ಲೇ ನಿಂತಿದೆ. ಸರ್ಕಾರ ತರುವ ಸಾಲ ಹೆಚ್ಚಿನ ಬಡ್ಡಿದರದ್ದಾಗಿದ್ದರೆ, ಸರ್ಕಾರ ನೀಡುವ ಸಾಲದ ಬಡ್ಡಿ ಪ್ರಮಾಣ ಕಡಿಮೆ ಇರುತ್ತದೆ. ಇದರ ಜತೆಗೆ ಎನ್​ಪಿಎ ಸಹ ಹೆಚ್ಚಾಗುತ್ತಿದೆ. ಆದ್ದರಿಂದಲೇ ಸರ್ಕಾರ ಈಗ ಮರು ವಸೂಲಾತಿ ಕಡೆ ಆದ್ಯತೆ ನೀಡಲು ಎಲ್ಲ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ತೆರಿಗೆ ಹೆಚ್ಚಳಕ್ಕೆ ಇಲ್ಲ ಅವಕಾಶ: ಜಿಎಸ್​ಟಿ ಪರಿಹಾರ ನಿಂತರೆ ಸಂಪನ್ಮೂಲಕ್ಕೆ ಸರ್ಕಾರ ಪರದಾಡಬೇಕಾಗುತ್ತದೆ. ಜಿಎಸ್​ಟಿ ಇರುವುದರಿಂದ ಯಾವುದೇ ವಲಯದಲ್ಲಿ ತೆರಿಗೆ ಹೆಚ್ಚಳಕ್ಕೆ ಅವಕಾಶಗಳಿಲ್ಲ. ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ತೆರಿಗೆ ಈಗಾಗಲೇ ಹೆಚ್ಚಿದೆ. ಸಾಲ ಪಡೆಯುವ ಪ್ರಮಾಣ ಶೇ.2 ಹೆಚ್ಚಿಸಲು ಸ್ಥಳೀಯ ಸಂಸ್ಥೆಗಳಲ್ಲಿ ತೆರಿಗೆ ಸುಧಾರಣೆಗೆ ಕೇಂದ್ರ ಷರತ್ತು ಹಾಕಿತ್ತು, ಆದ್ದರಿಂದ ಸ್ಥಳೀಯ ಸಂಸ್ಥೆಗಳಲ್ಲಿ ಕಳೆದ ವರ್ಷವೇ ಎಲ್ಲ ರೀತಿಯ ತೆರಿಗೆ ಹೆಚ್ಚಳವಾಗಿದೆ. ಅಬ್ಕಾರಿ ಹೊರತುಪಡಿಸಿ ಬೇರೆ ಎಲ್ಲೂ ಅವಕಾಶಗಳಿಲ್ಲ. ತೆರಿಗೆಯೇತರ ಆದಾಯ ಹೆಚ್ಚಿಸಿಕೊಳ್ಳಬಹುದಷ್ಟೇ. ಆದರೆ ಅದರಲ್ಲೂ ಹೆಚ್ಚಿನ ಆದ್ಯತೆ ಕಾಣಿಸುತ್ತಿಲ್ಲ. ಆದ್ದರಿಂದ ಬಾಕಿ ವಸೂಲಿಗಳ ಕಡೆ ಗಮನ ಹರಿಸಿದೆ.

ಕಾರಣಗಳೇನು?: ಸಂಬಳ, ಪಿಂಚಣಿ, ಬಡ್ಡಿ ಪಾವತಿ, ಸಬ್ಸಿಡಿಯಂತಹ ಬದ್ಧ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತವೆ. ತುಟ್ಟಿಭತ್ಯೆ ಹೆಚ್ಚಳ, ಪ್ರಕೃತಿ ವಿಕೋಪದಿಂದ ಆಗುವ ಹಾನಿಗೆ ಪರಿಹಾರ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಆಗುವ ವೆಚ್ಚ, ಸಮಾಜ ಕಲ್ಯಾಣ ಕಾರ್ಯಗಳಿಗೆ ಹಣಕಾಸು ಒದಗಿಸಬೇಕಾಗುತ್ತದೆ. ಇದರ ಜೊತೆಗೆ ಸಾರ್ವಜನಿಕ ಉದ್ದಿಮೆಗಳ ಕಳಪೆ ಸಾಧನೆ, ದುಬಾರಿ ಸಹಾಯಧನ, ಜಿಎಸ್​ಡಿಪಿಯಲ್ಲಿ ತೆರಿಯೇತರ ರಾಜಸ್ವ ನಗಣ್ಯವಾಗುತ್ತಿರುವುದು, ದರ ಇಳಿಕೆ, ವೆಚ್ಚದ ಹೆಚ್ಚಳದಿಂದ ಆದಾಯದ ಕೊರತೆಯಾಗುತ್ತಿದೆ.

ತೆರಿಗೆ ಬಾಕಿ: ಸರ್ಕಾರಕ್ಕೆ ಬರಬೇಕಾಗಿರುವ ತೆರಿಗೆಯಲ್ಲಿ ವಿವಿಧ ವಲಯಗಳಲ್ಲಿ -ಠಿ;19,657 ಕೋಟಿ ಬಾಕಿ ಉಳಿದಿದೆ. ಸರ್ಕಾರ ಕರಸಮಾಧಾನ ಯೋಜನೆ ಜಾರಿಗೆ ತಂದರೂ ವಸೂಲಿ ಆಗುತ್ತಿಲ್ಲ. ಕೆಲವು ಪ್ರಕರಣಗಳು ನ್ಯಾಯಾಲಯದ ಮುಂದೆಯೂ ಇವೆ. ಇಂಥ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಲು ಆದ್ಯತೆ ನೀಡುವಂತೆ ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ.

ಎಷ್ಟಿದೆ ಬಾಕಿ?: ಸರ್ಕಾರದಿಂದ ವಿವಿಧ ವಲಯಗಳಿಗೆ ನೀಡುರುವ ಸಾಲ 28,847 ಕೋಟಿ ರೂ.ಗಳಿದ್ದರೆ, ಅದಕ್ಕೆ ಬರಬೇಕಾಗಿರುವ ಬಡ್ಡಿ ವಾರ್ಷಿಕ 356.47 ಕೋಟಿ ರೂ.ಗಳಿದೆ. ಸರ್ಕಾರ ವಿವಿಧ ಸಂಸ್ಥೆಗಳಲ್ಲಿ ಮಾಡಿರುವ ಹೂಡಿಕೆ 67,816 ಕೋಟಿ ರೂ.ಗಳಿದೆ. ಸರ್ಕಾರ ನೀಡಿರುವ ಗ್ಯಾರಂಟಿ 26,679.31 ಕೋಟಿ ರೂ.ಗಳಿದ್ದು ವಾರ್ಷಿಕ 150.51 ಕೋಟಿ ರೂ.ಗಳ ಬಡ್ಡಿ ಪಾವತಿಸಬೇಕಾಗಿದೆ. ಆಯವ್ಯಯ ಹೊರತಾಗಿ ವಿವಿಧ ನೀರಾವರಿ ನಿಗಮಗಳು ಹಾಗೂ ಇತರೆ ಸಂಸ್ಥೆಗಳು ಪಡೆದಿರುವ ಸಾಲ 5079.59 ಕೋಟಿ ರೂ.ಗಳಿದೆ. ಆಯವ್ಯಯೇತರ ಸಾಲದ ಅಸಲು ಮತ್ತು ಬಡ್ಡಿ ಪಾವತಿಯ ಜವಾಬ್ದಾರಿ ಸರ್ಕಾರದ ಮೇಲಿರುತ್ತದೆ. ಸರ್ಕಾರದ ಹೂಡಿಕೆಗೆ ವಾರ್ಷಿಕ 53.64 ಕೋಟಿ ರೂ. ಲಾಭಾಂಶ ಬರಬೇಕಿದೆ.

ತೆರಿಗೆಯೇತರ ಆದಾಯ ದೃಷ್ಟಿ: ತೆರಿಗೆಗಳಿಗಿಂತ ತೆರಿಗೆಯೇತರ ರಾಜಸ್ವದ ಕಡೆ ಗಮನ ಹರಿಸಬೇಕಾಗಿದೆ. ಆದ್ದರಿಂದ ತೆರಿಗೆಯೇತರ ಆದಾಯದ ಮೂಲಗಳ ಪರಿಶೀಲನೆ, ದರಗಳ ಹೆಚ್ಚಳ, ಬಳಕೆದಾರರ ಶುಲ್ಕ ಹೆಚ್ಚಳಕ್ಕೆ ಪರಿಷ್ಕರಣೆ ಮಾಡಲು ಎಲ್ಲ ಇಲಾಖೆಗಳಿಗೂ ಸರ್ಕಾರ ಸೂಚನೆ ನೀಡಿದೆ. 2021-22 ನೇ ಸಾಲಿನಲ್ಲಿ 8258 ಕೋಟಿ ರೂ.ಗಳ ತೆರಿಗೆಯೇತರ ಆದಾಯ ಸಂಗ್ರಹಣೆ ಗುರಿ ಇದ್ದರೂ ಆಗಸ್ಟ್ ಅಂತ್ಯದ ತನಕ 3966 ಕೋಟಿ ರೂ.ಗಳನ್ನು ಮಾತ್ರ ಸಂಗ್ರಹ ಮಾಡಲಾಗಿದೆ. ಆದ್ದರಿಂದಲೇ ಎಲ್ಲ ತೆರಿಗೇಯೇತರ ಆದಾಯಗಳ ಪರಿಷ್ಕರಣೆ ಆಗುವ ನಿರೀಕ್ಷೆ ಇದೆ. ಸಿಎಜಿ ಸಹ ಬಳಕೆದಾರರ ಶುಲ್ಕ ಹೆಚ್ಚಳ ಮಾಡಿಕೊಳ್ಳುವ ಮೂಲಕ ತೆರಿಗೇಯೇತರ ಆದಾಯ ವೃದ್ಧಿಸಿಕೊಳ್ಳಲು ಸೂಚನೆ ನೀಡಿದೆ.

ಹೆಚ್ಚುತ್ತಿದೆ ಸಾಲ: ಸರ್ಕಾರ ಮಾಡುತ್ತಿರುವ ಸಾಲದ ಪ್ರಮಾಣ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. 2022ರ ಮಾರ್ಚ್ ಅಂತ್ಯಕ್ಕೆ ರಾಜ್ಯದ ಸಾಲ 4.40 ಲಕ್ಷ ಕೋಟಿ ರೂ.ಗಳಿಗೆ ತಲುಪಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net