

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ನಾಗರೀಕತೆ ಹೆಸರಿನಲ್ಲಿ ಪ್ರಕೃತಿ ಮತ್ತು ಸಂಸ್ಕೃತಿ ಅವನತಿಯಂಚಿಗೆ ಹೋಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ದಕ್ಷಿಣ ಭಾರತದ ಸಾಧು ಸಂತರು ಆತಂಕ ವ್ಯಕ್ತ ಪಡಿಸಿದ್ದಾರೆ.
ತಮಿಳುನಾಡಿನ ಪೂಂಪ್‌ಹಾರ್ ಬಳಿ ಭಾನುವಾರ ನಡೆದ ಕಾವೇರಿ ಸ್ವಚ್ಚತಾ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಸಾಧು ಸಂತರು ಒಕ್ಕೊರಲಿನ ನಿರ್ಣಯ ಕೈಗೊಂಡಿದ್ದು, ನದಿ ಜಲ ಮೂಲಗಳ ರಕ್ಷಣೆ ಹಾಗೂ ನೀರಿನ ಸದ್ಭಳಕೆ ಆಗುವಂತೆ ಸರ್ಕಾರಗಳು ಯೋಜನೆ ರೂಪಿಸುವಂತೆ ಆಗ್ರಹಿಸಿದ್ದಾರೆ.
ಅಖಿಲ ಭಾರತ ಸನ್ಯಾಸಿ ಸಂಘ, ಕಾವೇರಿ ನದಿ ಸ್ವಚ್ಚತಾ ಅಂದೋಲನ, ಕಾವೇರಿ ರಿವರ್ ಸೇವಾ ಟ್ರಸ್ಟ್ ಮತ್ತು ಅಣ್ಣೈ ಕಾವೇರಿ ರಿವರ್ ಪ್ರೊಟೆಕ್ಷನ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಸ್ವಚ್ಚ ಕಾವೇರಿಗಾಗಿ ತಲಕಾವೇರಿಯಿಂದ ಅಕ್ಟೋಬರ್ ೨೧ ರಂದು ಚಾಲನೆಗೊಂಡ ೧೨ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ ನ.೧೩ ರಂದು ತುಳುನಾಡಿನ ಪೂಂಪ್‌ಹಾರ್‌ನಲ್ಲಿ ಸಮಾಪ್ತಿಗೊಂಡಿದೆ. ಈ ಸಂದರ್ಭ ಯಾತ್ರಾ ತಂಡ ಮೂಲ ಕಾವೇರಿಯಿಂದ ೧೨ ಕಳಶಗಳಲ್ಲಿ ತೆಗೆದುಕೊಂಡು ಹೋದ ಪವಿತ್ರ ತೀರ್ಥವನ್ನು ನದಿ ಸಮುದ್ರ ಸಂಗಮದಲ್ಲಿ ವಿಶೇಷ ಪೂಜಾ ವಿಧಿ ವಿಧಾನಗಳೊಂದಿಗೆ ವಿಸರ್ಜಿಸಲಾಯಿತು.
ಅಭಿವೃದ್ಧಿ ಹೆಸರಿನಲ್ಲಿ ನದಿ, ತೊರೆಗಳು ಉಪನದಿಗಳು ಕಣ್ಮರೆಯಾಗದಂತೆ ಸರ್ಕಾರಗಳು ಎಚ್ಚರ ವಹಿಸಬೇಕು. ಅಂತರ್ಜಲ ಕುಸಿತ ವಾಗದಂತೆ ಯೋಜನೆ ರೂಪಿಸುವುದು, ಪ್ರಮುಖ ನದಿಗಳ ರಾಷ್ಟ್ರೀಕರಣ ಮಾಡುವ ಮೂಲಕ ನದಿಗಳ ಮೂಲ ಅಸ್ತಿತ್ವ ಉಳಿಸಬೇಕೆಂದು ಆಗ್ರಹಿಸಿದರು.
ರಾಜ್ಯ- ರಾಜ್ಯಗಳ ನಡುವೆ ನದಿ ನೀರಿನ ವ್ಯಾಜ್ಯಗಳನ್ನು ನೈಸರ್ಗಿಕ ಮಾರ್ಗದಲ್ಲಿ ಪರಿಹಾರ ಕಾಣುವುದು, ಜೀವ ನದಿಯ ಕಾವೇರಿಯ ಉಗಮ ಸ್ಥಾನವಾದ ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೇಂದ್ರ, ರಾಜ್ಯ ಸರ್ಕಾರಗಳು ಹೆಚ್ಚಿನ ಮೊತ್ತದ ಅನುದಾನ ಕಲ್ಪಿಸುವುದು, ಕಾವೇರಿ ಸಮುದ್ರ ಸಂಗಮವಾಗುವ ಪೂಂಪ್‌ಹಾರ್ ಪೂರ್ಣೆಶ್ವರಿ ದೇವಾಲಯ ಬಳಿ ಸರ್ಕಾರಗಳ ಮೂಲಕ ಕಾವೇರಿ ಮಾತೆ ಪ್ರತಿಮೆ ನಿರ್ಮಿಸುವುದು ಸೇರಿದಂತೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಅಖಿಲ ಭಾರತ ಸನ್ಯಾಸಿ ಸಂಘ ಪ್ರಧಾನ ಕಾರ್ಯದರ್ಶಿ ಸ್ವಾಮಿ ಆತ್ಮಾನಂದ ಮಾತನಾಡಿ, ದೇಶಗಳ ನಡುವೆ ವೈರತ್ವ ಇದ್ದರೂ, ನದಿ ನೀರಿನ ಬಗ್ಗೆ ಯಾವುದೇ ತಕರಾರು ಇರುವುದಿಲ್ಲ. ಕಾವೇರಿ ನದಿ ನೀರಿನ ವಿಷಯಕ್ಕೆ ಬಂದಾಗ ಎರಡು ರಾಜ್ಯಗಳ ಮಧ್ಯೆ ಅಂತರ ಕಂಡು ಬರುತ್ತಿರು
ವುದು ವಿಷಾದನೀಯ ಎಂದರು. ಕಾವೇರಿ ಮಾತೆ ಮೂಲಕ ಇದಕ್ಕೆ ಪರಿಹಾರ ಸಾಧ್ಯ. ಜೀವನದಿ ಕಾವೇರಿ ಅವನತಿ ಉಂಟಾದಲ್ಲಿ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳು ಬರಡಾಗುವುದು ಖಚಿತ ಎಂದರು.
ಕಾವೇರಿ ನದಿ ಸ್ವಚ್ಚತಾ ಆಂದೋಲನ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮಾತನಾಡಿ, ಜೀವನದಿಯ ಉಗಮ ಸ್ಥಾನವಾದ ಕೊಡಗು ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆ ಮತ್ತು ನದಿ ತಟಗಳ ಸಮಸ್ಯೆಗಳ ವಾಸ್ತವಾಂಶ ಕಲೆಹಾಕಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಗಮನಕ್ಕೆ ತರಲಾಗಿದೆ. ನದಿ, ಜಲಮೂಲಗಳ ಸಂರಕ್ಷಣೆಗೆ ಕಠಿಣ ಕಾನೂನು ರೂಪುಗೊಂಡು ಅನುಷ್ಠಾನಗೊಳಿಸಬೇಕೆಂದರು.
ಪೂಂಪ್‌ಹಾರ್ ಪೂರ್ಣೇಶ್ವರಿ ದೇವಾಲಯದಲ್ಲಿ ಲೋಪಮುದ್ರ ಯಾಗ, ಹೋಮ ನಂತರ ಸಾಧು ಸಂತರು ವೇದಘೋಷಗಳ ಪಠಣ ಮಾಡಿದರು. ತಲಕಾವೇರಿಯಿಂದ ೧೨ ಕಳಶಗಳಲ್ಲಿ ಒಯ್ದ ಪವಿತ್ರ ತೀರ್ಥ ಪೂಜೆ ನೆರವೇರಿಸಿ, ಕಾವೇರಿ- ಬಂಗಾಳಕೊಲ್ಲಿ ಸಮುದ್ರ ಸಂಗಮದಲ್ಲಿ ವಿಸರ್ಜಿಸುವುರೊಂದಿಗೆ ಈ ಬಾರಿಯ ಯಾತ್ರೆ ಪೂರ್ಣಗೊಂಡಿತು.
ಹತ್ತು ದಿನಗಳಿಂದ ಬಂಗಾಳಕೊಲ್ಲಿ ಸಮುದ್ರದಲ್ಲಿ ಚಂಡಮಾರುತ ಹಿನ್ನೆಲೆಯಲ್ಲಿ ತಮಿಳುನಾಡಿನ ಎಲ್ಲೆಡೆ ಭಾರಿ ಮಳೆ ಸುರಿಯುತ್ತಿದ್ದರೂ, ಸಮಾರೋಪ ಕಾರ್ಯಕ್ರಮ ಸಂದರ್ಭ ಕೆಲವೇ ಗಂಟೆಗಳ ಕಾಲ ಮಾತ್ರ ಪ್ರಕೃತಿ ಸಂಪೂರ್ಣ ಶಾಂತವಾಗಿತ್ತು. ಕಾರ್ಯಕ್ರಮಕ್ಕೆ ಯಾವುದೇ ಅಡಚಣೆ ಉಂಟು ಮಾಡದಿರುವುದು ನೆರೆದಿದ್ದ ಭಕ್ತರಲ್ಲಿ ಅಚ್ಚರಿ ಉಂಟು ಮಾಡಿತು.
ಈ ಸಂದರ್ಭ ಅಖಿಲ ಭಾರತೀಯ ಸನ್ಯಾಸಿ ಸಂಘ ಸ್ಥಾಪಕ ರಮಾನಂದ ಸ್ವಾಮೀಜಿ, ಯಾತ್ರೆ ಸಂಚಾಲಕ ಸ್ವಾಮಿ ವೇದಾನಂದ, ಅಖಿಲ ಭಾರತ ಸನ್ಯಾಸಿ ಸಂಘ ಉಪಾಧ್ಯಕ್ಷರಾದ ಸ್ವಾಮಿ ಕುಮಾರಗುರು, ಸ್ವಾಮಿ ಶಿವಾನಂದ ವಾರಿಯರ್, ಸ್ವಾಮಿ ಶಿವಾರಾಮಾನಂದ, ಕಾವೇರಿ ರಿವರ್ ವಾಟರ್ ಪ್ರೊಟೆಕ್ಷನ್ ಟ್ರಸ್ಟ್‌ನ ವಾಸು ರಾಮಚಂದ್ರನ್, ಕಾವೇರಿ ನದಿ ಸ್ವಚ್ಚತಾ ಅಂದೋಲನ ಸಮಿತಿ ಪ್ರಮುಖರಾದ ಕೆ.ಜಿ. ಮನು, ಬಿ.ಜೆ. ಅಣ್ಣಯ್ಯ, ಚೈತನ್ಯ ಚಂದ್ರಮೋಹನ್ ಮತ್ತಿತರರು ಇದ್ದರು.