ಸುಧಾರಣೆ ಸ್ಥಿತಿಯತ್ತ ಕರ್ನಾಟಕ

Pollution
Published on

|ರಮೇಶ ದೊಡ್ಡಪುರ / ಗಿರೀಶ್ ಗರಗ

ರಾಷ್ಟ್ರ ರಾಜಧಾನಿ ದೆಹಲಿಗೆ ಹೋಲಿಕೆ ಮಾಡಿದರೆ ಕರ್ನಾಟಕ ಮಾಲಿನ್ಯ ಪ್ರಮಾಣದಲ್ಲಿ ಸುರಕ್ಷಿತವಾಗಿದೆ. ಕರ್ನಾಟಕ ಸೇರಿ ದಕ್ಷಿಣ ಭಾರತದ ನಗರಗಳಲ್ಲಿ ಕಡಿಮೆಮಾಲಿನ್ಯವಿದೆ. ರಾಜ್ಯದ ಇತರೆ ನಗರಗಳಲ್ಲೂ ವಾಯುಮಾಲಿನ್ಯ ಮಿತಿ ಮೀರಿಲ್ಲ. ಕಳೆದ 5 ವರ್ಷಗಳಲ್ಲಿ ಬೆಂಗಳೂರಿನಲ್ಲಿ ವಾಯುಮಾಲಿನ್ಯ ನಿರಂತರ ಇಳಿಮುಖವಾಗುತ್ತಿದೆ. ಆದರೆ, ಸಾರಿಗೆ ವ್ಯವಸ್ಥೆ ಬದಲಾವಣೆಯಾಗದಿದ್ದರೆ 2031ರ ವೇಳೆಗೆ ಬೆಂಗಳೂರು ಮಾಲಿನ್ಯ ನಗರಿಯಾಗಿ ಪರಿವರ್ತನೆಯಾಗಲಿದೆ ಎಂದು ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ಸಿದ್ಧಪಡಿಸಿರುವ ಸಮಗ್ರ ಚಲನ ಶೀಲ ಯೋಜನೆ (ಕಾಂಪ್ರಹೆನ್ಸಿವ್ ಮೊಬಿಲಿಟಿ ಪ್ಲಾನ್)ಯಲ್ಲಿ ಎಚ್ಚರಿಸಿದೆ.

ವಾಯುಮಾಲಿನ್ಯ ಪ್ರಮಾಣ ಅಳತೆ ಮಾಡಲು ಕೇಂದ್ರ ಸರ್ಕಾರ ಎಕ್ಯೂಐ ರೂಪಿಸಿದೆ. ಬೆಂಗಳೂರಿನಲ್ಲಿ 2014-15ರಿಂದ 2018ರ ಅವಧಿಯಲ್ಲಿ ಶೇ.17.7 ಕೆಳಗಿಳಿದಿದೆ. 2014-15ರಲ್ಲಿ 107.1 ಇದ್ದ ವಾಯು ಗುಣಮಟ್ಟ ಸೂಚ್ಯಂಕ(ಎಕ್ಯೂಐ) ಪ್ರತಿವರ್ಷ ಇಳಿಕೆಯಾಗುತ್ತ 2018-19ರಲ್ಲಿ 88.1 ಆಗಿದೆ. ‘ಮಧ್ಯಮ’ ಮಟ್ಟದಿಂದ ‘ಸಮಾಧಾನಕರ’ ಮಟ್ಟಕ್ಕೆ ಬಂದಿವೆ. ಅದೇ ರೀತಿ ಮೂಗು, ಬಾಯಿ ಹಾಗೂ ಗಂಟಲಲ್ಲಿ ಸಿಕ್ಕಿಕೊಂಡು ತೊಂದರೆ ನೀಡುವ ಪಿಎಂ 10 ಧೂಳಿನ ಕಣಗಳ ಪ್ರಮಾಣ 125.6ರಿಂದ 89.9ಕ್ಕೆ ಅಂದರೆ ಶೇ.28ರಷ್ಟು ಕುಗ್ಗಿದೆ. ದೇಹದ ಒಳಗೆ ಶ್ವಾಸಕೋಶದಲ್ಲೂ ಹೊಕ್ಕು ಸಮಸ್ಯೆ ಸೃಷ್ಟಿಸುವ ಪಿಎಂ 2.5 ಧೂಳಿನ ಕಣಗಳ ಪ್ರಮಾಣ ಶೇ.29ರಷ್ಟು ಕುಸಿತ ಕಂಡಿದೆ. ಬೆಂಗಳೂರಿನಲ್ಲಿ 2014ರಲ್ಲಿ 50.5 ಲಕ್ಷ ಇದ್ದ ವಾಹನಗಳು 5 ವರ್ಷದಲ್ಲಿ (2019) ಶೇಕಡ 60 ಹೆಚ್ಚಳವಾಗಿ 80.5 ಲಕ್ಷಕ್ಕೆ ತಲುಪಿದೆ.

ವಾಯುಮಾಲಿನ್ಯವನ್ನು ಸಂಪೂರ್ಣವಾಗಿ ಕಡಿಮೆ ಮಾಡಲು ಸಮೂಹ ಸಾರಿಗೆ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜಿಸಬೇಕು. ರಾಜಧಾನಿ ದೆಹಲಿಯಲ್ಲಿನ ಮಾಲಿನ್ಯ ಗಂಭೀರ ಸ್ಥಿತಿಗೆ ತಲುಪಿದೆ. ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ದೆಹಲಿ ಹಾದಿಯಲ್ಲೇ ಸಾಗುವ ಲಕ್ಷಣಗಳು ಗೋಚರಿಸುತ್ತಿವೆ. ಈ ಕಾರಣದಿಂದಾಗಿ ಮಾಲಿನ್ಯ ನಿಯಂತ್ರಣ, ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬಿಎಂಆರ್​ಸಿಎಲ್ ಜತೆಗೂಡಿ ಡಲ್ಟ್ ಸಮಗ್ರ ಚಲನಶೀಲ ಯೋಜನೆ ಸಿದ್ಧಪಡಿಸಿದೆ. 2031ರ ವೇಳೆಗೆ ಬೆಂಗಳೂರು ಮೆಟ್ರೋಪಾಲಿಟನ್ ವ್ಯಾಪ್ತಿಯಲ್ಲಿ ಜನಸಂಖ್ಯೆ, ವಾಹನಗಳ ಸಂಖ್ಯೆ ಎಷ್ಟು ಹೆಚ್ಚಳವಾಗಲಿದೆ? ಅದರಿಂದ ಪರಿಸರದ ಮೇಲಾಗುವ ಪರಿಣಾಮ? ಅದಕ್ಕೆ ಪರಿಹಾರವೇನು? ಎಂಬ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಿದೆ. ಅದರ ಪ್ರಕಾರ 2031ರ ವೇಳೆಗೆ ಈಗಿರುವ ಮಾಲಿನ್ಯದ ಪ್ರಮಾಣ ದುಪ್ಪಟ್ಟಾಗಲಿದ್ದು, ಅದರ ನಿಯಂತ್ರಣಕ್ಕೆ ಸಾರಿಗೆ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕೆಂದು ಸಲಹೆ ನೀಡಲಾಗಿದೆ.

ದಿನಾಚರಣೆ ಹಿನ್ನೆಲೆ: ಮಧ್ಯಪ್ರದೇಶದ ಭೋಪಾಲ್​ನಲ್ಲಿದ್ದ ಯೂನಿಯನ್ ಕಾರ್ಬೆಡ್ ಎಂಬ ಕೀಟನಾಶಕ ಉತ್ಪಾದನಾ ಘಟಕದಲ್ಲಿ 1984ರ ಡಿಸೆಂಬರ್ 2 ಹಾಗೂ 3ರ ನಡುವಿನ ರಾತ್ರಿ ಸಂಭವಿಸಿದ ಅನಿಲ ಸೋರಿಕೆಯು ವಿಶ್ವದ ಅತಿ ದೊಡ್ಡ ಕೈಗಾರಿಕಾ ದುರಂತಗಳ ಪಟ್ಟಿಗೆ ಸೇರಿತು. ಅನಿಲ ಸೇವನೆಯಿಂದ 3,787 ಜನರು ಪ್ರಾಣ ಬಿಟ್ಟರೆ ಲಕ್ಷಾಂತರ ಜನರ ಜೀವನ ನೆಲಕಚ್ಚಿತು. ಆ ದುರಂತದ ನಂತರದಲ್ಲಿ ದೇಶದ ಸರ್ಕಾರಗಳು ಮಾಲಿನ್ಯ ನಿಯಂತ್ರಣ ಕುರಿತು ಅನೇಕ ಕ್ರಮಗಳನ್ನು ಕೈಗೊಳ್ಳಲು ಆರಂಭಿಸಿದವು. ಅನಿಲ ದುರಂತದಲ್ಲಿ ಮೃತರಾದವರ ಗೌರವ, ನೆನಪು ಹಾಗೂ ಭವಿಷ್ಯದಲ್ಲಿ ಅಂಥ ದುರಂತಗಳು ಸಂಭವಿಸದಂತೆ ಕಂಕಣ ತೊಡುವ ಸಲುವಾಗಿ ಪ್ರತಿ ವರ್ಷ ಡಿ.2ರಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನಾಗಿ ಆಚರಿಸಲಾಗುತ್ತಿದೆ.

ಕಾರುಗಳ ಸಂಖ್ಯೆ ಹೆಚ್ಚಳ: ವರದಿಯಲ್ಲಿ 2015ರ ಅಂಕಿಅಂಶಗಳನ್ನು ಉಲ್ಲೇಖಿಸಲಾಗಿದೆ. ಅದರಂತೆ ಬೆಂಗಳೂರಿನಲ್ಲಿ 2015ರಲ್ಲಿ ಜನರ ಓಡಾಟ ಹೆಚ್ಚಿರುವ ಸಮಯದಲ್ಲಿ ವಾಹನಗಳ ಟ್ರಿಪ್​ಗಳು ಕಾರುಗಳ ಪ್ರಮಾಣ ಶೇಕಡ 21, ದ್ವಿಚಕ್ರ ವಾಹನ ಶೇ. 24, ಆಟೋ ಶೇ. 8 ಹಾಗೂ ಸಾರ್ವಜನಿಕ ಸಾರಿಗೆ ಶೇ. 48 ಇದ್ದವು. ಈಗಿನ ವ್ಯವಸ್ಥೆ 2031ರವರೆಗೆ ಮುಂದುವರಿದರೆ ಕಾರುಗಳ ಪ್ರಮಾಣ ಶೇ.30, ದ್ವಿಚಕ್ರ ವಾಹನ ಶೇ. 29ರಷ್ಟು ಹೆಚ್ಚಳವಾಗಲಿದೆ. ಅದೇ, ಆಟೋ ಶೇ. 5 ಹಾಗೂ ಸಮೂಹ ಸಾರಿಗೆ ಪ್ರಮಾಣ ಶೇ.36ಕ್ಕೆ ಕುಸಿಯಲಿದೆ.
ಮಾಲಿನ್ಯ ಪ್ರಮಾಣ: 2015ರಲ್ಲಿ ಬೆಂಗಳೂರಿನಲ್ಲಿ ಪ್ರತಿದಿನ ಕಾರ್ಬನ್ ಡೈಯಾಕೈ ್ಸ್ 29,204 ಟನ್, ಹೈಡ್ರೋಕಾರ್ಬನ್ 51 ಟನ್, ನೈಟ್ರಿಕ್ ಆಕ್ಸಿಡ್ 323 ಟನ್ ಹಾಗೂ ಕಾರ್ಬನ್ ಮೋನಾಕೆ ೖ ್ಸ್ 198 ಟನ್ ಇತ್ತು. ಅದೇ 2031ರ ವೇಳೆಗೆ ಪ್ರತಿದಿನ ಕಾರ್ಬನ್ ಡೈಯಾಕೈ ್ಸ್ 69,062 ಟನ್, ಹೈಡ್ರೋಕಾರ್ಬನ್ 126 ಟನ್, ನೈಟ್ರಿಕ್ ಆಕ್ಸಿಡ್ 768 ಟನ್ ಹಾಗೂ ಕಾರ್ಬನ್ ಮೋನಾಕೈ ್ಸ್ ಪ್ರಮಾಣ 464 ಟನ್ ಇರುವ ಅಂದಾಜಿದೆ.

ದೆಹಲಿ ಸ್ಥಿತಿ ಶೋಚನೀಯ: ವಾಯುಮಾಲಿನ್ಯದಿಂದ ದೆಹಲಿ ಸ್ಥಿತಿ ಹದಗೆಟ್ಟಿದೆ. ಇಲ್ಲಿನ ಅರ್ಧದಷ್ಟು ಮಕ್ಕಳು ಅಸ್ತಮಾ ಸಮಸ್ಯೆ ಎದುರಿಸುವಂತಾಗಿದೆ. ದೀಪಾವಳಿಯ ಮುಂಚೆಯೇ ದೆಹಲಿಯಲ್ಲಿ ಎಕ್ಯೂಐ 300ರ ಗಡಿ ದಾಟಿತ್ತು. ಉತ್ತರ ಭಾರತದ ನಗರಗಳಲ್ಲಂತೂ ಪರಿಸ್ಥಿತಿ ಶೋಚನೀಯವಾಗಿದೆ. ಎಕ್ಯೂಐ 300, 400, 500ರ ಗಡಿ ದಾಟಿದೆ. ಕೈಗಾರಿಕೆಗಳಿಂದ ಬರುವ ಕಲುಷಿತ ಹೊಗೆ, ವಾಹನಗಳ ಹೊಗೆ, ಬೆಳೆಯ ಕಳೆ ಸುಡುವುದು ಮತ್ತು ಕಸ ಸುಡುವುದರಿಂದ ವಾಯುಮಾಲಿನ್ಯ ಹೆಚ್ಚುತ್ತಿದೆ. ಜನಸಂಖ್ಯೆ, ವಾಹನಗಳ ಸಂಖ್ಯೆ, ಕೈಗಾರಿಕೆಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿರುವುದರಿಂದ ಸಮಸ್ಯೆಯ ತೀವ್ರತೆಯೂ ಹೆಚ್ಚುತ್ತಿದೆ. ಚಳಿಯಲ್ಲಿ ಫಾಗ್ ಜತೆಗೆ ಸ್ಮಾಗ್ ಕಾಣಿಸಿಕೊಂಡು (ಮಂಜಿನ ಜತೆ ಸೇರಿಕೊಳ್ಳುವ ಮಾಲಿನ್ಯ) ಪ್ರಾಣಘಾತಕವಾಗಿ ಪರಿಣಮಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net