ಮಾಲಿನ್ಯ ತಗ್ಗಿಸಲೇ ಬೇಕು; ಮನೆಗಳಿಂದಲೇ ನಡೆಯಲಿ ಅಭಿಯಾನ

sdfsdfsdfasad
Published on
ಪರಿಸರ ಮಾಲಿನ್ಯ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಆದರೆ, ಸರ್ಕಾರ ಮತ್ತು ಜನಸಾಮಾನ್ಯರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದೇ ರೀತಿ ಮಾಲಿನ್ಯದ ಪ್ರಮಾಣ ಮುಂದುವರಿದರೆ ಮನುಕುಲಕ್ಕೆ ಗಂಡಾಂತರ. ಹಾಗಾಗಿ, ಮಾಲಿನ್ಯವನ್ನು ಕಡಿಮೆ ಮಾಡಲು ಸರ್ಕಾರಗಳು ಕಠಿಣ ನೀತಿ ರೂಪಿಸಿ ಜಾರಿಗೆ ತರಬೇಕು, ಜನಸಾಮಾನ್ಯರು ನಿಸರ್ಗಸ್ನೇಹಿ ಜೀವನಶೈಲಿಯತ್ತ ಮರಳಬೇಕು- ಇದು ಪರಿಸರ ಮಾಲಿನ್ಯ ತಡೆ ದಿನದ ಅಂಗವಾಗಿ ವಿಜಯವಾಣಿ ಕ್ಲಬ್​ಹೌಸ್ ಸಂವಾದದಲ್ಲಿ ತಜ್ಞರು ಹೇಳಿದ ಸ್ಪಷ್ಟನುಡಿ.

ಸ್ವಚ್ಛವಾತಾವರಣ, ಪರಿಸರ, ಆಹಾರ, ಶಾಂತವಾದ ಬದುಕು ಎಲ್ಲ ಜೀವಿಗಳ ಹಕ್ಕು. ಹಾಗಾಗಿ ಸದ್ಯ ಉಳಿದಿರುವ ಪರಿಸರವನ್ನಾದರೂ ನಾವು ಮುಂದಿನ ಪೀಳಿಗೆಗೆ ಉಳಿಸುವ ಅನಿವಾರ್ಯತೆ ಇದೆ. ಸೃಷ್ಟಿಯಲ್ಲಿ ಅದರದೇ ಆದ ಬದಲಾವಣೆಗಳಿರುತ್ತವೆ. ಅವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಹಾಗಾಗಿ ಬುದ್ಧಿವಂತ ಮನುಷ್ಯ ಪರಿಸರವನ್ನು ಚೆನ್ನಾಗಿಟ್ಟುಕೊಳ್ಳಬೇಕು. ಈಗಿರುವ ಪರಿಸರವನ್ನು ಇನ್ನೂ ಉತ್ತಮಪಡಿಸುವ ಕೆಲಸ ಮಾಡಬೇಕು.

ಪರಿಸರ ಮಾಲಿನ್ಯವನ್ನು ನಿಯಂತ್ರಣಕ್ಕೆ ತರುವ ದೃಷ್ಟಿಯಿಂದ ಮಾಲಿನ್ಯ ನಿಯಂತ್ರಣ ಕಾಯಿದೆ ಜಾರಿಗೆ ತರಲಾಗಿದೆ. ಇದರಲ್ಲಿ ನೀರಿನ ಕಾಯಿದೆ, ವಾಯು ಕಾಯಿದೆಯೂ ಇದೆ. ಅಂದರೆ ನದಿ, ಕೆರೆ, ಬಾವಿಗಳು, ಕಟ್ಟೆಗಳು, ಕೊಳವೆಬಾವಿ ಸೇರಿದಂತೆ ಅಂತರ್ಜಲ ಕಲುಷಿತ ಆಗುವುದನ್ನು ತಡೆಯುವುದು. ಅದೇ ರೀತಿ ಸಸ್ಯ ಸಂಕುಲವನ್ನು ಉಳಿಸಿ ಬೆಳೆಸುವ ಮೂಲಕ ವಾಯುಮಾಲಿನ್ಯವನ್ನು ತಡೆಗಟ್ಟುವ ಅಗತ್ಯವಿದೆ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಸಸ್ಯ ಸಂಕುಲವನ್ನು ನಾಶಗೊಳಿಸಿದ್ದೇವೆ. ನಗರೀಕರಣದ ಹೆಸರಿನಲ್ಲಿ ಒಳಚರಂಡಿ ನೀರನ್ನು ಕೆರೆ, ಕಾಲುವೆಗಳಿಗೆ ಹರಿಯ ಬಿಟ್ಟು ಅಂಜರ್ಲವನ್ನು ಕಲುಷಿತಗೊಳಿಸಿದ್ದೇವೆ.

ಪ್ಲಾಸ್ಟಿಕ್ ಹಾವಳಿ: ಕ್ಯಾರಿಬ್ಯಾಗ್ ಪೂರ್ತಿಯಾಗಿ ನಿಷೇಧಿಸಿಲ್ಲ. 15 ಮೈಕ್ರಾನ್​ಗಿಂತ ಕಡಿಮೆ ಇರುವ ಬ್ಯಾಗ್​ಗಳನ್ನು ಬ್ಯಾನ್ ಮಾಡಲಾಗಿದೆ. ತೆಳುಬ್ಯಾಗ್​ಗಳು ತುಂಬ ಕಡಿಮೆ ದರಕ್ಕೆ ಸಿಗುತ್ತವೆ. ಹಾಗಾಗಿ ಅವುಗಳನ್ನು ಜನರು ಹೆಚ್ಚು ಬಳಸುತ್ತಾರೆ. ಇವು ಗಾಳಿಯಲ್ಲಿ ಬೇಗ ಹಾರಿಹೋಗುತ್ತವೆ, ಪ್ರಾಣಿಗಳು ಸುಲಭವಾಗಿ ನುಂಗಿಬಿಡುತ್ತವೆ. ಹಾಗಾಗಿ ಸರ್ಕಾರ ಇಂಥ ಕ್ಯಾರಿಬ್ಯಾಗ್​ಗಳನ್ನು ನಿಷೇಧಿಸಿದೆ. ಉಳಿದಂತೆ ಮರುಬಳಕೆಗೆ ಯೋಗ್ಯವಾದವುಗಳಿಗೆ ಅನುಮತಿ ನೀಡಿದೆ. ಹೋಟೆಲ್ ಸೇರಿದಂತೆ ಹೊರಗಿನಿಂದ ಆಹಾರ ಪಾರ್ಸಲ್ ತೆಗೆದುಕೊಂಡು ಹೋಗುವವರು ಮನೆಯಿಂದಲೇ ಬಾಕ್ಸ್​ಗಳನ್ನು ಕೊಂಡೊಯ್ಯುವುದು ಸೂಕ್ತ. ಇದರಿಂದ ಪ್ಲಾಸ್ಟಿಕ್ ತ್ಯಾಜ್ಯ ಕಡಿಮೆಯಾಗಿಸಬಹುದು. ಮಾಲಿನ್ಯ ನಿಯಂತ್ರಣಾ ಮಂಡಳಿಯ ಕಟ್ಟುನಿಟ್ಟಿನ ಕ್ರಮದಿಂದಾಗಿ ಕ್ಯಾರಿಬ್ಯಾಗ್ ಬಳಕೆ ಕೊಂಚ ನಿಯಂತ್ರಣಕ್ಕೆ ಬಂದಿದೆ. ಜನರೂ ಮನೆಯಿಂದ ಹೊರಹೋಗುವಾಗ ಚೀಲ ಕೊಂಡೊಯ್ಯವುವದರಿಂದ ಪ್ಲಾಸ್ಟಿಕ್ ಬಳಕೆ ಕಡಿಮೆ ಆಗಿದೆ. ಕೃಷಿಯಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತದೆ.

ಮೆಡಿಕಲ್ ತ್ಯಾಜ್ಯ (ಬಯೋಮೆಡಿಕಲ್ ವೇಸ್ಟ್) ತುಂಬ ಅಪಾಯಕಾರಿ ಆಗಿರುವುದರಿಂದ ಇದನ್ನು ಮಣ್ಣಿ್ಣಲ್ಲಿ ಬೆರೆಯಲು ಬಿಡಬಾರದು. ಹಾಗಾಗಿಯೇ ನೋಂದಾಯಿತ ಹಲವು ಕಂಪನಿಗಳು ಇದನ್ನು ಸಂಗ್ರಹಿಸಿ 1000-1200 ಡಿಗ್ರಿ ಟೆಂಪರೇಚರ್​ನಲ್ಲಿ ಸುಟ್ಟು ಆಧುನಿಕ ತಂತ್ರಜ್ಞಾನ ಬಳಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುತ್ತಿವೆ. ಅದಕ್ಕಾಗಿ ಕೆ.ಜಿ.ಗೆ ಇಂತಿಷ್ಟು ಹಣ ಪಡೆದು ತ್ಯಾಜ್ಯ ಸಂಗ್ರಹಿಸುತ್ತಾರೆ. ಎಲ್ಲ ಆಸ್ಪತ್ರೆಗಳವೂ ಬಯೋಮೆಡಿಕಲ್ ವೇಸ್ಟ್ ಪರಿಸರದಲ್ಲಿ ಸೇರದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಿದೆ.

| ಡಾ.ವಾಮನಾಚಾರ್ಯಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ

ಬೆಂಗಳೂರಿನ ಹಲಸೂರು ಕೆರೆ 1999ರವರೆಗೆ ಮಲೀನವಾಗಿರಲಿಲ್ಲ. ನಂತರ ಕೆರೆಗೆ ಕೊಳಚೆ ನೀರು ಹಾಗೂ ಇತರ ತ್ಯಾಜ್ಯ ಸೇರ್ಪಡೆಯಿಂದಾಗಿ ಮಲೀನವಾಗುವುದನ್ನು ಕಂಡು ಸಹಿಸಲಾಗದೆ, ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ ಸಂರಕ್ಷಣೆಗೆ ಮೊದಲ ಹೆಜ್ಜೆ ಇರಿಸಲಾಯಿತು. ನಂತರ ಮಹಾತ್ಮ ಗಾಂಧಿ ರಸ್ತೆಯಲ್ಲಿ ಹಲವು ಗೆಳೆಯರು ಸೇರಿ ‘ಕಾಗದಕಟ್ಟೆ ವೇದಿಕೆ’ ರೂಪಿಸಿಕೊಂಡು ಎಲ್ಲ ಕಚೇರಿಗಳಿಗೆ ತೆರಳಿ ಒಂದು ಕಾಗದದ ಎರಡೂ ಬದಿಗೆ ಮುದ್ರಣ ಮಾಡುವಂತೆ ಸೂಚಿಸಲಾಯಿತು. ಕೆಲವು ದಿನಗಳ ನಂತರ ಎಲ್ಲ ಕಚೇರಿಗಳಿಗೆ ಪರಿಶೀಲನೆಗೆ ತೆರಳಿದ್ದಾಗ ಶೇಕಡ 85ಕ್ಕೂ ಅಧಿಕ ಸಿಬ್ಬಂದಿ ಎರಡೂ ಬದಿಯಲ್ಲಿ ಮುದ್ರಣ ಮಾಡುತ್ತಿದ್ದರು. 2001ರಲ್ಲಿ ಸೆಂಟರ್ ಫಾರ್ ಎನ್ವಿರಾನ್​ವೆುಂಟ್ ಎಜುಕೇಷನ್(ಎಸ್​ಎಫ್​ಇಇ) ವತಿಯಿಂದ ಎಚ್​ಬಿಆರ್ ಮತ್ತು ಎಚ್​ಆರ್​ಬಿಆರ್ ಬಡಾವಣೆಗಳಲ್ಲಿ ಕಸವನ್ನು ಪ್ರತ್ಯೇಕಿಸುವ (ಹಸಿ, ಒಣ) ಬಗ್ಗೆ ಅರಿವು ಮೂಡಿಸಿ ಪ್ರಾಯೋಗಿಕವಾಗಿ ವಿಭಜಿತ ಕಸ ನೀಡಲು ಪ್ರೇರಣೆ ನೀಡಲಾಯಿತು. ಅದು ಈಗಲೂ ಮುಂದುವರಿದಿದೆ. 2009ರಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ ‘ಕರಾವಳಿ ನಿಯಂತ್ರಣ ವಲಯ’ ಅಧಿಸೂಚನೆ ಅನ್ವಯ 500 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ವ್ಯಾಪಾರ-ವಹಿವಾಟು ಮತ್ತು ಉದ್ಯಮ ನಿಷೇಧಿಸಲಾಗಿತ್ತು. ಈ ನಿಟ್ಟಿನಲ್ಲಿ ರಾಜ್ಯದ 324 ಕಿ.ಮೀ. ತೀರಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ಚಿಂತನೆ ಬಂತು. ಕರಾವಳಿ ತೀರದ 30 ಕಿ.ಮೀ. ವ್ಯಾಪ್ತಿಯಲ್ಲಿ ನಡೆದುಕೊಂಡು ಸಂಚಾರ ಮಾಡಿ ಸ್ವಚ್ಛತೆ ಕೊರತೆ ಮತ್ತು ಸರ್ಕಾರದ ನಿಯಮಗಳ ಉಲ್ಲಂಘನೆ ಆಗಿರುವ ಬಗ್ಗೆ ವರದಿ ತಯಾರಿಸಿ ನ್ಯಾಯಾಲಯದ ಮೊರೆ ಹೋಗಲಾಯಿತು. ಆಗ, ಎಲ್ಲ ಉದ್ಯಮ ತೆರವುಗೊಳಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಲಾಯಿತು.

| ಡಾ.ಎಚ್.ಎಂ. ಲಕ್ಷ್ಮೀಕಾಂತಪರಿಸರ ಸಂಶೋಧಕ
ಪರಿಸರ ಮಾಲಿನ್ಯ ತಡೆಗೆ ವೈಯಕ್ತಿಕ, ಸಾಂಸ್ಥಿಕ ಪ್ರಯತ್ನ ಅಗತ್ಯ

ವಾಯುಮಾಲಿನ್ಯದಿಂದ ಹೆಚ್ಚಿದ ಸಾವು: ಸಾಮಾನ್ಯ ಗಾತ್ರದ ಒಂದು ಮರ ವಾರ್ಷಿಕವಾಗಿ 6 ಕೆ.ಜಿ. ಕಾರ್ಬನ್ ಹೀರಿಕೊಂಡು ಮನುಷ್ಯರ ಉಸಿರಾಟಕ್ಕೆ ಆಮ್ಲಜನಕ ನೀಡುತ್ತದೆ. ವಾರ್ಷಿಕವಾಗಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದ ಹವಾಮಾನ ವೈಪರೀತ್ಯ ಕಂಡುಬರುತ್ತಿದೆ. ಬೆಂಗಳೂರಿನಲ್ಲಿ 1989ರಲ್ಲಿ 1 ಲಕ್ಷ ವಾಹನಗಳಿದ್ದವು. 2020ರಲ್ಲಿ 68 ಲಕ್ಷಕ್ಕೆ ಏರಿಕೆಯಾಗಿದ್ದು, ಮುಂದಿನ 2030ಕ್ಕೆ 1.30 ಕೋಟಿ ವಾಹನಗಳಾಗುವ ಸಾಧ್ಯತೆಯಿದೆ. ಕಾರ್ಖಾನೆಗಳಿಗಿಂತ ವಾಹನಗಳಿಂದಲೇ ಅತ್ಯಧಿಕ ವಾಯುಮಾಲಿನ್ಯ ಸಂಭವಿಸುತ್ತಿದೆ. ಇದರಿಂದ ಲಕ್ಷಾಂತರ ಮಕ್ಕಳು ಅಸ್ತಮಾ ರೋಗದಿಂದ ಸಾವನ್ನಪು್ಪತ್ತಿದ್ದಾರೆ.

ತ್ಯಾಜ್ಯ ನಿರ್ವಹಣೆಯ ಸವಾಲು: ತ್ಯಾಜ್ಯ ನಿರ್ವಹಣೆ ಕುರಿತಂತೆ ಬಿಬಿಎಂಪಿ ಅಥವಾ ಸರ್ಕಾರ ನಡೆಸುವ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುತ್ತೇವೆ. 2021-22ನೇ ಆರ್ಥಿಕ ಸಾಲಿನಲ್ಲಿ ತ್ಯಾಜ್ಯ ನಿರ್ವಹಣೆಗೆ 1,622 ಕೋಟಿ ರೂ. ಮೀಸಲಿಡಲಾಗಿದೆ. ಈ ಹಣದಿಂದ 1,622 ಹಳ್ಳಿಗಳನ್ನು ಉದ್ಧಾರ ಮಾಡಬಹುದು. ಆದರೂ, ಸಮರ್ಪಕ ತ್ಯಾಜ್ಯ ವಿಲೇವಾರಿ ಮಾಡಲು ಪಾಲಿಕೆಗೆ ಸಾಧ್ಯವಾಗುತ್ತಿಲ್ಲ.

ವೈಯಕ್ತಿಕ ಪ್ರಯತ್ನ ಅಗತ್ಯ: ನನ್ನೊಬ್ಬನಿಂದ ಏನಾಗುತ್ತದೆ ಎಂಬ ನಿರ್ಲಕ್ಷ್ಯ ಭಾವನೆಯಿಂದ ಪರಿಸರ ಮಾಲಿನ್ಯ ತಡೆಯಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಪ್ರತಿನಿತ್ಯ ಹಾಲಿನ 30 ಸಾವಿರ ಹಾಗೂ ಮೊಸರಿನ 20 ಸಾವಿರ ಪ್ಯಾಕೆಟ್​ಗಳ ಸಣ್ಣ ತುಂಡು ಕಸಕ್ಕೆ ಹೋಗುತ್ತವೆ. ಅವು ಮಣ್ಣಿನಲ್ಲಿ ಸೇರಿ ಮೈಕ್ರೋಪ್ಲಾಸ್ಟಿಕ್ ರೂಪ ತಳೆಯುತ್ತೀವೆ. ಇದರಿಂದ ನಾವು ತಿನ್ನುತ್ತಿರುವ ಪ್ರತಿ ಬ್ರಾ್ಯಂಡ್ ಉಪ್ಪಿನಲ್ಲೂ ಮೈಕ್ರೋ ಪ್ಲಾಸ್ಟಿಕ್ ಸೇರಿದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಹಾಗಾಗಿ ಇಂತಹ ಪ್ಯಾಕೆಟ್​ಗಳ ಸಣ್ಣ ತುಂಡು ಪ್ರತ್ಯೇಕಗೊಳಿಸದೆ, ಇಡೀ ಪ್ಯಾಕೇಟ್ ಉಳಿಯುವ ರೀತಿಯಲ್ಲಿ ಕತ್ತರಿಸಬಹುದು. ಒಬ್ಬರ ಈ ಕ್ರಮದಿಂದ ಒಂದು ಲಕ್ಷ ಪ್ಲಾಸ್ಟಿಕ್ ಕವರ್​ಗಳ ತುಂಡುಗಳ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪರಿಸರ ಮಾಲಿನ್ಯ ತಡೆಯುವುದು ನಮ್ಮ ಕರ್ತವ್ಯ ಎಂದು ಭಾವಿಸಬೇಕಿದೆ. ಮಾರುಕಟ್ಟೆಗೆ ಹೋಗುವಾದ ಮನೆಯಿಂದಲೇ ಬ್ಯಾಗ್ ಕೊಂಡೊಯ್ಯುವುದು, ಮನೆಯಿಂದಲೇ ಕುಡಿಯುವ ನೀರಿನ ಬಾಟಲ್... ಹೀಗೆ ಮನೆಯ ಮಟ್ಟದಲ್ಲಿ ಮಾಡುವ ಈ ಪ್ರಯತ್ನಗಳಿಂದಲೇ ಬಹಳಷ್ಟು ಮಾಲಿನ್ಯ ತಡೆಯಬಹುದಾಗಿದೆ.

ನಾವು ವಾಸಿಸುವ ಪ್ರದೇಶ ಹಾಗೂ ಸುತ್ತಲಿನ ವಾತಾವರಣದಲ್ಲಿ ಉಂಟಾಗುತ್ತಿರುವ ಮಾಲಿನ್ಯವನ್ನು ತಡೆಗಟ್ಟಲು ಪ್ರತಿಯೊಬ್ಬರೂ ವೈಯಕ್ತಿಕವಾಗಿ ಮತ್ತು ಸಾಂಸ್ಥಿಕವಾಗಿ ಕೆಲಸ ಮಾಡುವುದು ಅಗತ್ಯವಾಗಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡುವುದಕ್ಕಾಗಿ ಪರಿಸರ ಸಂರಕ್ಷಣೆ ಮತ್ತು ಉಳಿಸಿ ಬೆಳೆಸುವ ಕಾರ್ಯದಲ್ಲಿ ಎಲ್ಲರೂ ಕಡ್ಡಾಯವಾಗಿ ಪಾಲ್ಗೊಳ್ಳಬೇಕು.

ಶೂನ್ಯತ್ಯಾಜ್ಯದ ಹಸಿರು ಅಡುಗೆಮನೆ: ಇಂಧನ ಕುರಿತಾದ ಹೊಸ ಆಯ್ಕೆಗಳ ಬಗ್ಗೆಯೂ ಗಂಭೀರವಾಗಿ ಚಿಂತನೆ ಮಾಡಬೇಕಾದ ಸಮಯ ಈಗ ಬಂದಿದೆ. ಪಳೆಯುಳಿಕೆ ರಹಿತ ಇಂಧನ ನಮ್ಮ ಆದ್ಯತೆಯನ್ನಾಗಿಸಿಕೊಳ್ಳುವ ಚಿಂತನೆ ಬೆಳೆಯಬೇಕಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಪ್ರತಿದಿನ ಊಟ ಸರಬರಾಜು ಮಾಡುವ ನಿಟ್ಟಿನಲಿ ಅದಮ್ಯ ಚೇತನದ ‘ಅನ್ನಪೂರ್ಣ’ ಅಡುಗೆಮನೆಯಲ್ಲಿ ಮೊದಲ ದಿನವೇ (2003) 10 ಸಾವಿರ ವಿದ್ಯಾರ್ಥಿಗಳಿಗೆ ಊಟ ತಯಾರಾದಾಗ, 15 ಎಲ್​ಪಿಜಿ ಸಿಲಿಂಡರ್ ಖಾಲಿಯಾದವು. 50 ಸಾವಿರ ಮಕ್ಕಳಿಗೆ ಊಟ ತಯಾರಿಸುವಾಗ ಬೇಕಾಗಿದ್ದು 45 ಸಿಲಿಂಡರ್. ಆಗ ಪರ್ಯಾಯವನ್ನು ಏಕೆ ಶೋಧಿಸಬಾರದು ಎಂಬ ಪ್ರಶ್ನೆಗೆ ಉತ್ತರ ಶೋಧಿಸುತ್ತ ಹೊರಟಾಗ ದಾರಿಯೂ ಸ್ಪಷ್ಟಗೊಂಡಿತು. ಕಸದಿಂದ ತಯಾರು ಮಾಡಿದ ಬ್ರಿಕೆಟ್ಸ್ ಮೂಲಕವೇ ಅಡುಗೆ ತಯಾರಿಸಲಾಗುತ್ತಿದ್ದು, ಶಾಖ ಮತ್ತು ಹೊಗೆ ಹೊರಗಡೆ ಹೋಗದಂತೆ ಎಚ್ಚರಿಕೆ ವಹಿಸಲಾಗಿದೆ. ಒಲೆಗೆ ತೆಂಗಿನ ಚಿಪು್ಪ ಬಳಸಿ ದಿನವೂ ಕ್ವಿಂಟಲ್​ಗಟ್ಟಲೇ ಮಸಾಲೆ ಹುರಿಯಲಾಗುತ್ತಿದೆ. ಕಳೆದ 12 ವರ್ಷಗಳಿಂದ ಒಂದೂ ಸಿಲಿಂಡರ್ ಬಳಸದೆ ಕಸದಿಂದ ತಯಾರಾಗಿರುವ ಹಸಿರು ಇಂಧನವನ್ನೇ (ಬ್ರಿಕೆಟ್ಸ್, ಪೆಲೆಟ್ಸ್, ಬಯೋಗ್ಯಾಸ್) ಬಳಸುತ್ತಿರುವುದು ಹೆಮ್ಮೆಯ ಸಂಗತಿ.

ಪರ್ಯಾಯ ಇಂಧನದ ಬಳಕೆಯ ಸಣ್ಣ ಸಾಧ್ಯತೆಯನ್ನು ಅದಮ್ಯ ಚೇತನ ದೇಶದ ಮುಂದೆ ಇರಿಸಿದೆ. ಅಷ್ಟೇ ಅಲ್ಲ, ಅಕ್ಕಿ ತೊಳೆದ ನೀರನ್ನು ಗಿಡಗಳಿಗೆ ಹಾಯಿಸಲಾಗುತ್ತದೆ. ಅನ್ನದ ಗಂಜಿಯನ್ನು ಸಾಂಬರ್​ಗೆ ಹಾಕಲಾಗುತ್ತದೆ. ಕೆಲವು ಕೊಳೆಯುವ ತರಕಾರಿ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಮಾಡಿ ಕೈ ತೋಟಗಳಿಗೆ ಬಳಸಲಾಗುತ್ತದೆ. ಹೀಗೆ ‘ಶೂನ್ಯ ತ್ಯಾಜ್ಯದ ಅಡುಗೆಮನೆ’ಯಾಗಿ ಮಾರ್ಪಾಡು ಮಾಡಲಾಗಿದೆ. ಅದಮ್ಯ ಚೇತನ ಅಡುಗೆಮನೆ ಹಾಗೂ ನಮ್ಮ ವಾಸದ ಮನೆಯಿಂದ ಬಿಬಿಎಂಪಿ ಕಸದ ವಾಹನಕ್ಕೆ ಒಂದು ಹಿಡಿ ಕಸವನ್ನೂ ಕೊಡುವುದಿಲ್ಲ. ಎಲ್ಲರೂ ಇದೇ ಕ್ರಮ ಅನುಸರಿಸಿದಲ್ಲಿ ಶೂನ್ಯ ತ್ಯಾಜ್ಯದ ಮನೆ, ಮುಖ್ಯವಾಗಿ ‘ಹಸಿರು ಅಡುಗೆಮನೆ’ಯನ್ನು ರೂಪಿಸಿಕೊಳ್ಳಬಹುದು.

| ಡಾ. ತೇಜಸ್ವಿನಿ ಅನಂತಕುಮಾರ್ ಮುಖ್ಯಸ್ಥರು, ಅದಮ್ಯ ಚೇತನ ಸಂಸ್ಥೆಹಸಿರು ಭಾನುವಾರ ಯೋಜನೆ: ಅದಮ್ಯ ಚೇತನ ವತಿಯಿಂದ ಕೈಗೊಂಡಿರುವ ಹಸಿರು ಭಾನುವಾರ ಗಿಡ ನೆಡುವ ಕಾರ್ಯಕ್ರಮ ಪ್ರತಿ ವಾರ ವ್ಯವಸ್ಥಿತವಾಗಿ ನಡೆಯುತ್ತಿದ್ದು, 309 ವಾರಗಳನ್ನು ಪೂರ್ಣಗೊಳಿಸಿದೆ. ಒಂದು ಗಿಡ ವರ್ಷಕ್ಕೆ 100 ಕೆ.ಜಿ. ಆಮ್ಲಜನಕ ನೀಡುತ್ತದೆ. ಅದರಂತೆ ಲೆಕ್ಕ ಹಾಕಿದರೆ ಒಬ್ಬರಿಗೆ ವರ್ಷಕ್ಕೆ 7 ಮರ ಬೇಕು. ಆದರೆ ಬೆಂಗಳೂರಿನಲ್ಲಿ 14 ಲಕ್ಷ ಮರಗಳು ಮಾತ್ರ ಇದೆ. ಇಲ್ಲಿನ ಜನಸಂಖ್ಯೆಗೆ ಹೋಲಿಸಿದರೆ 7 ಕೋಟಿ ಮರಗಳು ಇರಬೇಕಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ 7 ಜನರಿಗೆ ಒಂದು ಮರವಿದೆ. ಹಾಗಾಗಿ 7 ದಿನಕ್ಕೊಮ್ಮೆ ಗಿಡ ನೆಡುವ ಕಾರ್ಯಕ್ರಮ ಆರಂಭಿಸಲಾಯಿತು. ಇದಕ್ಕೆ ಜನರ ಉತ್ತಮ ಸಹಕಾರ ದೊರೆತಿದೆ. ಅವರು ಗಿಡವನ್ನು ಪೋಷಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ. ನೆಡುವಾಗಲೇ ಎತ್ತರದ ಸಸಿಗಳನ್ನು ಹಾಕಲಾಗುತ್ತಿದೆ. ಬೆಂಗಳೂರು ಮಾತ್ರವಲ್ಲದೆ ರಾಯಚೂರು, ಬಳ್ಳಾರಿ ಸೇರಿ ಬೇರೆ ಬೇರೆ ಭಾಗಗಳಲ್ಲಿ ಹಸಿರು ಭಾನುವಾರ ಕಾರ್ಯಕ್ರಮ ನಡೆಯುತ್ತಿದೆ. ರಾಯಚೂರಿನಲ್ಲಿ 290 ಭಾನುವಾರ ಮಾಡಿದ್ದಾರೆ. 60 ಸಾವಿರಕ್ಕಿಂತ ಹೆಚ್ಚು ಗಿಡಗಳನ್ನು ಹಾಕಿದ್ದಾರೆ. ಭಾನುವಾರ ಬೆಳಗ್ಗೆ ಒಂದಿಷ್ಟು ಸಮಯವನ್ನು ಪರಿಸರಕ್ಕಾಗಿ ಮೀಸಲಿಡುತ್ತೇವೆ. ಇದರಿಂದ ಪರಿಸರ ಕಾಳಜಿಯೊಂದಿಗೆ ಜನರಿಗೆ ಸಂದೇಶ ನೀಡಲು ನೆರವಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net