ಕೋಡಿ ಬೀದಿ, ಇಂದಿರಾ ಕಾಲನಿ ಮನೆಗಳಿಗೆ ನುಗ್ಗಿದ ಕಲುಷಿತ ನೀರು

11-KGL-1,,,,,
ಕೊಳ್ಳೇಗಾಲದ ದೇವಾಂಗ ಪೇಟೆಯ ಕೋಡಿ ಬೀದಿಗೆ ಕೊಳಚೆ ನೀರು ನುಗ್ಗಿರುವುದನ್ನು ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಭೇಟಿ ನೀಡಿರುವುದು. ಎ.ಪಿ.ಶಂಕರ್, ಚೇತನ್, ರಮೇಶ್ ಇತರರು ಇದ್ದರು.
Published on

ಕೊಳ್ಳೇಗಾಲ: ಕಳೆದ ಎರಡ್ಮೂರು ದಿನಗಳಿಂದ ಸುರಿದ ಮಳೆಗೆ ಪಟ್ಟಣದ 13ನೇ ವಾರ್ಡ್ ದೇವಾಂಗ ಪೇಟೆ ಬಡಾವಣೆಯ ಕೋಡಿ ಬೀದಿ ಹಾಗೂ 11ನೇ ವಾರ್ಡ್ ವ್ಯಾಪ್ತಿಯ ಇಂದಿರಾ ಕಾಲನಿ ರಸ್ತೆ ಮತ್ತು ಕೆಲ ಮನೆಗಳಗೆ ಕಲುಷಿತ ನೀರು ನುಗ್ಗಿ ಜಲ ಅವಾಂತರ ಸೃಷ್ಟಿಸಿದ ಹಿನ್ನೆಲೆಯಲ್ಲಿ ಶನಿವಾರ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಅವರು ನಗರಸಭೆ ಅಧಿಕಾರಿಗಳೊಟ್ಟಿಗೆ ಸ್ಥಳಕ್ಕೆ ಭೇಟಿ ನೀಡಿ ನಿವಾಸಿಗಳ ಸಮಸ್ಯೆ ಆಲಿಸಿದರು.

ಎರಡು ದಿನಗಳಿಂದ ರಾತ್ರಿಯಿಡೀ ಸುರಿದ ಮಳೆಯಿಂದ ಸರ್ಕಾಟನ್ ಕಾಲುವೆ ತುಂಬಿ ಹರಿದು ಕೊಂಗಳಕೆರೆ ಸೇರಿ ಕುಪ್ಪಮ್ಮ ಕಾಲುವೆ ಮೂಲಕ ಉಕ್ಕಿ ಹರಿಯುತ್ತಿದ್ದು. ಈ ನೀರು ಕೋಡಿ ಬೀದಿ ಹಾಗೂ ಇಂದಿರಾ ಕಾಲನಿಗೆ ನುಗ್ಗಿ ಜನರ ನೆಮ್ಮದಿ ಕೆಡಿಸಿದೆ. ತ್ಯಾಜ್ಯ ಮತ್ತು ಕಲುಷಿತ ಮಿಶ್ರಿತ ನೀರು ಇದಾಗಿರುವುದರಿಂದ ಗಬ್ಬು ನಾರುತ್ತಿದ್ದು ನಿವಾಸಿಗಳು ನಗರಸಭೆ ವಿರುದ್ಧ ಅಕ್ರೋಶ ಹೊರ ಹಾಕುತ್ತಿದ್ದರು.

ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ಹೆಚ್ಚಿನ ನೀರು ಈ ಕಾಲನಿಗೆ ಹರಿಯಲಾರಂಭಿಸಿತು. ಹಾಗಾಗಿ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎ.ಪಿ ಶಂಕರ್, ಸದಸ್ಯೆ ಪವಿತ್ರಾ ರಮೇಶ್, ನಗರಸಭೆ ಪ್ರಭಾರ ಪೌರಾಯುಕ್ತ ನಟರಾಜ್, ಹೆಲ್ತ್ ಇನ್‌ಸ್ಪೆಕ್ಟರ್ ಚೇತನ್ ಖುದ್ದು ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದರು.

ಈ ವೇಳೆ ನಗರಸಭೆ ನಾಮನಿರ್ದೇಶಿತ ಸದಸ್ಯ ಮಧುಚಂದ್ರ ಮಾತನಾಡಿ, ಕಳೆದ ಬಾರಿಯೂ ಕೋಡಿ ಬೀದಿಗೆ ನೀರು ನುಗ್ಗಿ ಸಮಸ್ಯೆಯಾದಾಗ ನಗರಸಭೆ ಪೌರಾಯುಕ್ತರೊಟ್ಟಿಗೆ ಅಧ್ಯಕ್ಷರಾದ ನೀವು ಬಂದಿದ್ದೀರಿ. ನಂತರ ಯಾವುದೇ ಕ್ರಮವಾಗಲಿಲ್ಲ. ಪ್ರತಿ ವರ್ಷ ಇದೇ ತೊಂದರೆ ಎದುರಿಸುವಂತಾಗಿದೆ ಎಂದರು.

ಬಳಿಕ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಮಾತನಾಡಿ, ಮಳೆ ನೀರು ಬಡಾವಣೆಗೆ ನುಗ್ಗಿರುವ ವಿಚಾರವಾಗಿ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ದೂರವಾಣಿ ಮೂಲಕ ತಿಳಿಸಲಾಗಿದ್ದು. ಅವರು ಕೂಡ ಸ್ಥಳ ಪರಿಶೀಲಿಸಿ ಸಮಸ್ಯೆ ಸರಿಪಡಿಸುವಂತೆ ಸೂಚನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ವಿಶೇಷ ಅನುದಾನದಲ್ಲಿ ಕುಪ್ಪಮ್ಮ ಕಾಲುವೆ ನೀರು ಬಡಾವಣೆಗೆ ನುಗ್ಗದ ರೀತಿಯಲ್ಲಿ ಶಾಶ್ವತ ತಡೆ ಗೋಡೆ ನಿರ್ಮಿಸಲು 10 ಲಕ್ಷ ರೂ. ಅನುದಾನವನ್ನು ಶಾಸಕರು ನೀಡುವುದಾಗಿ ಹೇಳಿದ್ದಾರೆ. ಬಡಾವಣೆಗೆ ನುಗ್ಗು ತ್ತಿರುವ ನೀರಿಗೆ ಅಡ್ಡಲಾಗಿ ಜೆಸಿಬಿ ಮೂಲಕ ಮಣ್ಣು ಹಾಕಿಸಿ ನೀರು ಬಾರದಂತೆ ಕ್ರಮವಹಿಸಲಾಗುತ್ತದೆ ಎಂದರು.

ಈ ವೇಳೆ ಬಡಾವಣೆಯ ಮುಖಂಡರಾದ ಮಾಜಿ ನಗರಸಭೆ ಅದ್ಯಕ್ಷ ರಮೇಶ್, ವಿಜಯ್, ರಮೇಶ್, ಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net