ಮತಗಟ್ಟೆ ಸಿಸಿಟಿವಿ ದೃಶ್ಯ ನೀಡಲಾಗದು

election
Published on

ನವದೆಹಲಿ: ಮತಗಟ್ಟೆಗಳ ವಿಡಿಯೋ ಫೂಟೇಜ್ ಹಂಚಿಕೊಳ್ಳುವುದರಿಂದ ಮತದಾರರ ಗೋಪ್ಯತೆಯ ಉಲ್ಲಂಘನೆಯಾಗುತ್ತದೆ. ಅವರ ಗುರುತು ಪತ್ತೆಗೆ ಸುಲಭವಾಗಲಿದ್ದು ಅವರು ಸಮಾಜಘಾತುಕ ಶಕ್ತಿಗಳಿಂದ ತೊಂದರೆಗೆ ಒಳಗಾಗಬಹುದು ಎಂದು ಹೇಳಿರುವ ಭಾರತ ಚುನಾವಣಾ ಆಯೋಗ, ಅಂಥ ಫೂಟೇಜ್​ಗಳನ್ನು ಒದಗಿಸಬೇಕೆಂಬ ಕಾಂಗ್ರೆಸ್ ನಾಯಕ ನಾಯಕ ರಾಹುಲ್ ಗಾಂಧಿಯವರ ಮನವಿಯನ್ನು ತಿರಸ್ಕರಿಸಿದೆ.

ಕಳೆದ ವರ್ಷ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸಮಯದ ಮತಗಟ್ಟೆಗಳ ವೆಬ್​ಕಾಸ್ಟಿಂಗ್​ನ ವಿಡಿಯೋ ಫೂಟೇಜ್​ಗಳನ್ನು ಒದಗಿಸುವಂತೆ ಗಾಂಧಿ ಮನವಿ ಮಾಡಿದ್ದರು. ಗೋಪ್ಯತೆ ರಕ್ಷಣೆ ಮತ್ತು ಕೆಲವು ಕಾನೂನು ಅಡಚಣೆಗಳ ಕಾರಣದಿಂದ ಅವುಗಳನ್ನು ನೀಡಲಾಗದು ಎಂದು ಆಯೋಗ ಪ್ರತಿಪಾದಿಸಿದೆ. ಮಹಾರಾಷ್ಟ್ರ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ಗಾಂಧಿ ಪದೇ ಪದೇ ಹೇಳಿರುವುದರ ನಡುವೆ ಆಯೋಗದ ಅಧಿಕಾರಿಗಳು ಈ ಸ್ಪಷ್ಟನೆ ನೀಡಿದ್ದಾರೆ. ಆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಕೂಟ ಅಧಿಕಾರಕ್ಕೆ ಬಂದಿತ್ತು.

ರಾಜಿ ಪ್ರಶ್ನೆಯೇ ಇಲ್ಲ: ಮತದಾರರ ಖಾಸಗಿತನ ಮತ್ತು ಗೋಪ್ಯತೆಯೊಂದಿಗೆ ರಾಜಿ ಮಾಡಿಕೊಳ್ಳಲಾಗದು ಎಂದು ಆಯೋಗ ಹೇಳಿದೆ. ಜನತಾ ಪ್ರಾತಿನಿಧ್ಯ ಕಾನೂನು ಮತ್ತು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವ ಇಂಥ ಮೂಲಭೂತ ತತ್ವಗಳೊಂದಿಗೆ ಯಾವತ್ತೂ ರಾಜಿ ಮಾಡಿಕೊಂಡಿಲ್ಲವೆಂದು ಸ್ಪಷ್ಟಪಡಿಸಿದೆ.

ಸಾಕ್ಷ್ಯ ನಾಶ ರಾಹುಲ್ ಗಾಂಧಿ ಆರೋಪ

ಆಯೋಗದ ಕ್ರಮಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಗಾಂಧಿ, ತಮ್ಮ ಪ್ರಶ್ನೆಗಳಿಗೆ ಉತ್ತರ ನೀಡಬೇಕಿದ್ದ ಆಯೋಗ ‘ಸಾಕ್ಷ್ಯ ನಾಶ ಮಾಡಿದೆ’ ಎಂದು ಆರೋಪಿಸಿದ್ದಾರೆ. ‘ಮ್ಯಾಚ್ ಫಿಕ್ಸ್ ಆಗಿರುವುದು ಖಚಿತವಾಗಿದೆ. ಈ ರೀತಿ ಫಿಕ್ಸ್ ಆದ ಚುನಾವಣೆ ಪ್ರಜಾಪ್ರಭುತ್ವಕ್ಕೆ ವಿಷಕಾರಕವಾಗಿದೆ’ ಎಂದು ಎಕ್ಸ್ ಪೋಸ್ಟ್​ನಲ್ಲಿ ಗಾಂಧಿ ಹೇಳಿದ್ದಾರೆ. ಆಯೋಗ ಉತ್ತರ ನೀಡುವ ಬದಲಿಗೆ ಸಿಸಿಟಿವಿ, ವೆಬ್​ಕಾಸ್ಟಿಂಗ್ ಮತ್ತು ವಿಡಿಯೋ ಫೂಟೇಜ್​ಗಳನ್ನು ಚುನಾವಣೆಯ 45 ದಿನಗಳ ನಂತರ ನಾಶಪಡಿಸುವಂತೆ ತನ್ನ ಅಧಿಕಾರಿಗಳಿಗೆ ನಿರ್ದೇಶಿಸಿದೆ ಎಂದು ಆಪಾದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net