

ಬೆಂಗಳೂರು: ತಿರುಪತಿ ಲಡ್ಡುಗೆ ಕೆಎಂಎಫ್ ತುಪ್ಪ ಸರಬರಾಜು ನಿಂತು ಹೋಗಿರುವ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಟಾಪಟಿ ನಡೆದಿದ್ದು, ಈ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡಿದ್ದಾರೆ.
"ಆಂಧ್ರಪ್ರದೇಶದ ತಿರುಪತಿಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತಗೊಂಡಿರುವುದು ಇಂದು, ನಿನ್ನೆಯ ವಿಚಾರವಲ್ಲ. ಕಳೆದ ಒಂದೂವರೆ ವರ್ಷದ ಹಿಂದೆಯೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಿರುಪತಿಗೆ ತುಪ್ಪ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಂಸದ ಕಟೀಲ್ ಅವರೇ ಈಗ ಹೇಳಿ, ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಹಿಂದೂ ಧಾರ್ಮಿಕ ಶ್ರದ್ಧಾ ಭಕ್ತಿಯ ವಿರೋಧಿಯೋ? ಅಥವಾ ಮುಖ್ಯಮಂತ್ರಿಯಾಗಿದ್ದ ಬೊಮ್ಮಾಯಿ ಮಾತ್ರ ಹಿಂದೂ ವಿರೋಧಿಯೋ? ಎಂದು ಪ್ರಶ್ನೆ ಮಾಡಿ ಕುಟುಕಿದ್ದಾರೆ.
ನಮಗೆ ಜನರ ಧಾರ್ಮಿಕ ನಂಬಿಕೆಯ ಜತೆಗೆ ಹೈನುಗಾರರ ಬದುಕು ಮುಖ್ಯ. ಹೀಗಾಗಿ ನಾಡಿನ ರೈತರ ಹಿತದೃಷ್ಟಿಯಿಂದ ನಾವು ಕೇಳುವ ದರ ನೀಡಲು ತಿರುಪತಿ ದೇವಾಲಯದವರು ಒಪ್ಪುವುದಾದರೆ ತುಪ್ಪ ಪೂರೈಸಲು ನಮಗೆ ಯಾವ ಸಮಸ್ಯೆಗಳಿಲ್ಲ ಎಂದಿದ್ದಾರೆ.
ಈ ಮುನ್ನ ರಾಜ್ಯ ಬಿಜೆಪಿ ಸರ್ಕಾರವನ್ನು ಟೀಕಿಸಿತ್ತು.
ಚುನಾವಣೆಗೂ ಮುನ್ನ ನಂದಿನಿಯನ್ನು ದುರುಪಯೋಗ ಪಡಿಸಿಕೊಂಡ ಕಾಂಗ್ರೆಸ್ ಇಂದು ನಂದಿನಿಯ ಅಸ್ತಿತ್ವಕ್ಕೆ ಧಕ್ಕೆ ತರುತ್ತಿದೆ. ನಂದಿನಿಗೆ ರಾಜಕೀಯ ಸ್ಪರ್ಶ ನೀಡಿದ ಪರಿಣಾಮ ಕೇರಳ ಮಾರುಕಟ್ಟೆಯನ್ನು ನಂದಿನಿ ಈಗಾಗಲೇ ಕಳೆದುಕೊಂಡಿದೆ ಎಂದು ಬಿಜೆಪಿ ಆರೋಪಿಸಿತ್ತು.
ಇದೀಗ ತಿರುಪತಿ ಲಡ್ಡುವಿಗೆ ನಂದಿನಿ ತುಪ್ಪ ಸರಬರಾಜು ನಿಲ್ಲಿಸುವ ಮೂಲಕ 50 ವರ್ಷಗಳ ಪರಂಪರೆಗೆ ಎಳ್ಳು ನೀರು ಬಿಡಲಾಗಿದೆ. ದೇವಸ್ಥಾನ ಹಾಗೂ ಹಿಂದೂಗಳ ಶ್ರದ್ಧೆ-ಭಕ್ತಿಯ ವಿಚಾರಕ್ಕೆ ಬಂದಾಗ ಲಾಭ-ನಷ್ಟದ ಲೆಕ್ಕ ಹೇಳುವ ಕಾಂಗ್ರೆಸ್ ಇದೇ ಸೂತ್ರವನ್ನು ಇತರ ಧರ್ಮಗಳಿಗೆ ಅನ್ವಯಿಸಲು ಒಪ್ಪುವುದಿಲ್ಲ. ಹಿಂದೂಗಳೆಡೆಗೆ ತಾತ್ಸಾರ ತಮ್ಮ ಜಾತ್ಯತೀತ ಸೂತ್ರ ಎಂಬುದನ್ನು ಸಿದ್ದರಾಮಯ್ಯ ಅವರು ಈಗ ಮತ್ತೆ ರುಜುವಾತು ಮಾಡಿದ್ದಾರೆ ಎಂದು ಬಿಜೆಪಿ ಟೀಕಿಸಿತ್ತು.