ಬಿಜೆಪಿಗೆ ರಾಜನೀತಿ- ರಾಷ್ಟ್ರನೀತಿ ಬೇರೆ ಬೇರೆಯಲ್ಲ; ತೇಜಸ್ವಿ ಸೂರ್ಯ

IMG-20240419-WA0026
Published on

ಬೆಂಗಳೂರು:  ಬಿಜೆಪಿಗೆ ರಾಜನೀತಿ ಮತ್ತು ರಾಷ್ಟ್ರನೀತಿ ಬೇರೆಬೇರೆಯಲ್ಲ. ರಾಜನೈತಿಕವಾಗಿ ತೆಗೆದುಕೊಳ್ಳುವ ಪ್ರತೀ ನಿರ್ಧಾರವೂ ರಾಷ್ಟ್ರನೀತಿಯಿಂದ ಹೊರತಾಗಿರುವುದಿಲ್ಲ.  ದೇಶವೇ ನನ್ನ ಕುಟುಂಬ ಎಂದು ಸ್ವೀಕರಿಸಿರುವ ಪ್ರಧಾನಿ ನರೇಂದ್ರ ಮೋದಿಯವರು,  ಜನರ ಕಲ್ಯಾಣ, ದೇಶದ ಭವಿಷ್ಯಕ್ಕೆ ತಮ್ಮ ಇಡೀ ಜೀವನವನ್ನು ಸೇವಕನ ರೀತಿ ಸಮರ್ಪಿಸಿಕೊಂಡಿದ್ದಾರೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಬೆಂಗಳೂರಿನ ವಿಜಯನಗರ ಬಡಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ರೊಂದಿಗೆ ಶುಕ್ರವಾರ ಭವ್ಯ ರೋಡ್‌ ಶೋ ನಡೆಸಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಲ್ಲಿ ದೇಶದ ಜನರ ಆಕಾಂಕ್ಷೆಗಳನ್ನು ಈಡೇರಿಸಲು, ದೇಶದ ಭವಿಷ್ಯಕ್ಕೆ ಹಗಲಿರಳು ಮೋದಿ ದುಡಿಯುತ್ತಿದ್ದಾರೆ.

ಆದರೆ ಕಾಂಗ್ರೆಸ್ಸಿಗರು ತಮ್ಮ ಮಕ್ಕಳು ಮೊಮ್ಮಕ್ಕಳಿಗೋಸ್ಕರ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿ, ಮೋದಿಯವರಿಗೆ ದೇಶ ಮೊದಲು ಆಗಿದ್ದರೆ, ಕಾಂಗ್ರೆಸ್ಸಿಗರಿಗೆ ಕುಟುಂಬ ಮೊದಲು ಆಗಿದೆ. ವಂಶಾಡಳಿತ ಪಕ್ಷಗಳಿಗೆ ಸ್ವಜನಪಕ್ಷಪಾತ, ಭ್ರಷ್ಟಾಚಾರವೇ ಮುಖ್ಯವಾಗಿರುತ್ತದೆ. ದೇಶದ ಭವಿಷ್ಯ, ಜನರ ಕಲ್ಯಾಣ ಗೌಣವಾಗುತ್ತದೆ ಎಂದು ವಾಗ್ದಾಳಿ ಮಾಡಿದರು.

ಕ್ಷೇತ್ರದಲ್ಲಿ ಪಕ್ಷದ ಚುನಾವಣಾ ಪ್ರಚಾರ ಬಿರುಸಿನಿಂದ ಸಾಗಿದ್ದು, ಕಾರ್ಯಕರ್ತರು ಮತ್ತು ಮುಖಂಡರು ಬಿಸಿಲನ್ನು ಲೆಕ್ಕಿಸದೆ ಮನೆಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ನರೇಂದ್ರಮೋದಿಯವರನ್ನು ಮತ್ತೆ ಆಯ್ಕೆ ಮಾಡಲು ಮತದಾರರು ಕಾತರದಿಂದ ಮತದಾನ ದಿನವನ್ನು ಕಾಯುತ್ತಿದ್ದಾರೆ ಎಂದು ತೇಜಸ್ವಿ ಸೂರ್ಯ ಹುರಿದುಂಬಿಸಿದರು.

ವಿಶ್ವ ಕೇಂದ್ರಿತ ಭಾರತ

ಇದೇ ಸಂದರ್ಭದಲ್ಲಿ ಮಾತನಾಡಿದ ವಿಜಯೇಂದ್ರ, ಭಾರತ ಮತ್ತೆ ವಿಶ್ವಗುರುವಿನ ಪ್ರಧಾನ ಪಾತ್ರ ವಹಿಸುವತ್ತ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಅಳವಡಿಸಿಕೊಂಡ ನೀತಿಗಳು ಮತ್ತು ಕ್ರಮಗಳು ಕೇಂದ್ರೀಕೃತವಾಗಿವೆ ಎಂದು ಹೇಳಿದರು.

ಕಳೆದ ಹತ್ತು ವರ್ಷಗಳಲ್ಲಿ ನರೇಂದ್ರಮೋದಿ ಸರ್ಕಾರ ಭಾರತವನ್ನು ಜ್ಞಾನದ ಕೇಂದ್ರವಾಗಿಸಲು, ಪ್ರಬಲ ಆರ್ಥಿಕ ಶಕ್ತಿಯನ್ನಾಗಿಸಲು ಅವಿರತ ಶ್ರಮಿಸುತ್ತಿದೆ. “ಭಾರತ ಮೊದಲು” ಎಂಬುದು ನರೇಂದ್ರಮೋದಿ ನೇತೃತ್ವದ ಸರ್ಕಾರದ ವಿದೇಶಾಂಗ ನೀತಿಯ ಪ್ರಮುಖ ಅಂಶವಾಗಿದ್ದು, ದೇಶದ ಕಾರ್ಯತಂತ್ರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಹೆಚ್ಚಿನ ಆರ್ಥಿಕಾಭಿವೃದ್ಧಿಯನ್ನು ಸಾಧಿಸುವ ಉದ್ದೇಶವನ್ನು ಇದು ಹೊಂದಿದೆ  ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಸಂಬಂಧಗಳ ನಿರ್ವಹಣೆಯಲ್ಲಿ ಹಿಂದಿನ ಸರ್ಕಾರಗಳಿಗಿಂತಲೂ ಮೋದಿ ಸರ್ಕಾರ ಹೆಚ್ಚು ಯಶಸ್ವಿಯಾಗಿದೆ. ಪ್ರಪಂಚದ ಯಾವುದೇ ಭಾಗದಲ್ಲಿರುವ ಭಾರತೀಯರ ಸುರಕ್ಷತೆಗೆ ನರೇಂದ್ರಮೋದಿ ಸರ್ಕಾರ ಪ್ರಾಮುಖ್ಯತೆ ನೀಡಿದೆ ಎಂದು ವಿಜಯೇಂದ್ರ ಹೇಳಿದರು.

ರೋಡ್ ಶೋ ಹಾಗೂ ಬಹಿರಂಗ ಸಭೆಯಲ್ಲಿ ಶಾಸಕ ಸಿ ಕೆ ರಾಮಮೂರ್ತಿ, ಮುಖಂಡರಾದ ಹೆಚ್ ರವೀಂದ್ರ, ಟಿ ವಿ ಕೃಷ್ಣ, ಅರುಣ್ ಸೋಮಣ್ಣ ಸೇರಿ ಜೆಡಿಎಸ್ ಮುಖಂಡರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net