

ರಾಮನಗರ : ತಾಲೂಕು ಮತ್ತು ಜಿಪಂ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗಿದ್ದು, ಆಕಾಂಕ್ಷಿಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರುವಂತೆ ಮಾಡಿದೆ.
ಜು.1ರಂದು ಸರ್ಕಾರ ಮೀಸಲಾತಿ ಕರಡು ಪ್ರಕಟ ಮಾಡಿ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿದೆ. ಆದರೆ ಈಗ ಪ್ರಕಟ ಮಾಡಿರುವ ಕರಡು ಪ್ರತಿ ಕೆಲವರನ್ನು ಹಿರಿಹಿರಿ ಹಿಗ್ಗುವಂತೆ ಮಾಡಿದ್ದರೆ ಹೆಚ್ಚಿನ ಮಂದಿಗೆ ನಡುಕ ಹುಟ್ಟಿಸಿದೆ.
ನಾವು ಈಗಾಗಲೇ ನಮ್ಮ ನಾಯಕರೊಂದಿಗೆ ಮಾತನಾಡಿದ್ದೇವೆ, ನಾವು ಕೋರಿಕೊಂಡಂತೆ ಮೀಸಲಾತಿ ಪ್ರಕಟ ಆಗುತ್ತದೆ ಎಂದು ನಂಬಿಕೆ ಇಟ್ಟುಕೊಂಡಿದ್ದವರಿಗೆ ಕರಡು ಮೀಸಲಾತಿ ಆಘಾತ ನೀಡಿದ್ದು, ಇದೀಗ ಇದನ್ನು ಸರಿಪಡಿಸುವ ಕಸರತ್ತು ಆರಂಭಿಸುವಂತೆ ಮಾಡಿದೆ.
ಇನ್ನೂ ಕೆಲವರಿಗೆ ಮೀಸಲಾತಿ ನಮ್ಮ ಪರವಾಗಿ ಬಂದರೆ ನೋಡೋಣ. ಆಗ ಬೇಕಾದರೆ ಏನಾದರೂ ಮಾಡಿದರಾಯಿತು ಎಂದವರ ಬಾಯಿಗೆ ಲಡ್ಡು ಬಂದು ಬಿದ್ದಂತೆ ಮೀಸಲಾತಿ ಪ್ರಕಟವಾಗಿದ್ದು, ಈಗ ನಾಯಕರ ಮನೆ ಬಳಿಗೆ ಸುಳಿದು ಪ್ರಕಟಗೊಂಡಿರುವ ಮೀಸಲಾತಿಯನ್ನು ಹಾಗೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಸರತ್ತು ಆರಂಭಿಸಿದ್ದಾರೆ.
ಭಾರಿ ನಿರಾಸೆ : ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಜಿಪಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇದರ ಸಲುವಾಗಿಯೇ ಈಗಾಗಲೇ ಸಾಕಷ್ಟು ಜನ ಸೇವೆ ಮೂಲಕ ಪ್ರವರ್ಧಮಾನಕ್ಕೆ ಬರುವ ಪ್ರಯತ್ನ ಮಾಡಿ ಹಣ ಕಳೆದುಕೊಂಡಿದ್ದಾರೆ. ಆದರೆ ಹೆಚ್ಚಿನ ಮಂದಿಗೆ ಪ್ರಕಟಗೊಂಡ ಮೀಸಲಾತಿ ಬಗ್ಗೆ ಬೇಸರವಾಗಿದ್ದು, ಬಹುತೇಕ ಆಕ್ಷೇಪಣೆ ಸಲ್ಲಿಸುವ ಮೂಲಕ ತಮಗೆ ಬೇಕಾದಂತೆ ಮೀಸಲಾತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಹೋರಾಟ ಮಾಡುವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಇನ್ನೂ ಕೆಲವರು ಕ್ಷೇತ್ರ ಮರು ವಿಂಗಡಣೆ ವೇಳೆ ಕ್ಷೇತ್ರಗಳನ್ನು ಕಳೆದುಕೊಂಡಿದ್ದು ಹಾಗೂ ಕ್ಷೇತ್ರಗಳ ಹೆಸರುಗಳನ್ನು ಬದಲಾವಣೆ ಮಾಡಿದ್ದೂ ಸಹ ಬೇಸರಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕೆಲವರು ಇದರ ವಿರುದ್ಧವೂ ಹೋರಾಟ ನಡೆಸುತ್ತಿದ್ದಾರೆ.
ಜಿಪಂ ಕ್ಷೇತ್ರಗಳಲ್ಲಿ ಏರಿಕೆ : ಕಳೆದ ಜಿಪಂ ಚುನಾವಣೆಯಲ್ಲಿ 22 ಜಿಪಂ ಸ್ಥಾನಗಳು ಇದ್ದವು. ಆದರೆ, ಈ ಬಾರಿ ಮಾಗಡಿ ಮತ್ತು ಚನ್ನಪಟ್ಟಣ ತಾಲೂಕಿನಲ್ಲಿ ತಲಾ ಒಂದು ಸ್ಥಾನಗಳು ಹೆಚ್ಚಾಗಿದ್ದು, ಕನಕಪುರ ಮತ್ತು ರಾಮನಗರ ಸ್ಥಾನಗಳು ಯಥಾಸ್ಥಿತಿ ಇವೆ. ಮಾಗಡಿ ಮತ್ತು ಚನ್ನಪಟ್ಟಣ ತಲಾ 5 ಕ್ಷೇತ್ರಗಳಿದ್ದವು. ರಾಮನಗರ ಮತ್ತು ಕನಕಪುರದಲ್ಲಿ ಕ್ರಮವಾಗಿ 4 ಮತ್ತು 8 ಸ್ಥಾನಗಳಿದ್ದು ಇವುಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಸ್ಥಾನ ಕಳೆದುಕೊಂಡ ತಾಪಂ :
ಕ್ಷೇತ್ರ ಮರು ವಿಂಗಡಣೆ ವೇಳೆ ಜಿಲ್ಲೆಯ ನಾಲ್ಕೂ ತಾಪಂಗಳಲ್ಲಿ ಸಾಕಷ್ಟು ಸ್ಥಾನಗಳು ಖೋತಾ ಆಗಿವೆ. ಜಿಲ್ಲೆಯಲ್ಲಿ 15 ತಾಪಂ ಸ್ಥಾನಗಳು ಕ್ಷೇತ್ರ ಮರುವಿಂಗಡಣೆಯಲ್ಲಿ ಅಸ್ತಿತ್ವ ಕಳೆದುಕೊಂಡಿವೆ. ನಾಲ್ಕೂ ತಾಲೂಕುಗಳಿಂದ ಒಟ್ಟು 80 ಸ್ಥಾನಗಳಿದ್ದು, ಇವುಗಳನ್ನು 65ಕ್ಕೆ ಚುನಾವಣಾ ಆಯೋಗ ಇಳಿಸಿದೆ. ರಾಮನಗರದಲ್ಲಿ 14 ಸ್ಥಾನಗಳಲ್ಲಿ 2 ಸ್ಥಾನ, ಚನ್ನಪಟ್ಟಣದಲ್ಲಿ 19 ಸ್ಥಾನಗಳಲ್ಲಿ 4 ಸ್ಥಾನ, ಕನಕಪುರದಲ್ಲಿ 29 ಸ್ಥಾನಗಳಲ್ಲಿ 6 ಸ್ಥಾನಗಳು ಮತ್ತು ಮಾಗಡಿಯಲ್ಲಿ 18 ಸ್ಥಾನಗಳಲ್ಲಿ 3 ಸ್ಥಾನಗಳು ಕಡಿಮೆ ಆಗಿವೆ.
ವರ್ಷಾಂತ್ಯಕ್ಕೆ ಚುನಾವಣೆ? : ಕರಡು ಮೀಸಲಾತಿ ಪ್ರಕಟಗೊಂಡಿದ್ದು ಆಕ್ಷೇಪಣೆಗಳು ಸಲ್ಲಿಕೆಯಾದ ನಂತರವಷ್ಟೇ ಮೀಸಲಾತಿ ಅಂತಿಮ ಪಟ್ಟಿ ಹೊರ ಬೀಳಬೇಕು. ಅಲ್ಲದೆ, ಬಹುತೇಕ ಡಿಸೆಂಬರ್ ಅಂತ್ಯದವರೆಗೂ ಜಿಪಂ ತಾಪಂ ಚುನಾವಣೆ ನಡೆಯುವುದು ಅನುಮಾನವಾಗಿದೆ. ಇದರ ನಡುವೆ ಮೀಸಲಾತಿ ವಿರುದ್ಧ ಯಾರಾದರೂ ಕೋರ್ಟ್ ಮೊರೆ ಹೋದರೆ ಇದರ ವಿಚಾರಣೆ ನಡೆದು ತೀರ್ಪು ಬರುವವರೆಗೂ ಚುನಾವಣೆಗಾಗಿ ಕಾಯಲೇಬೇಕಿದೆ.
ಮೀಸಲಾತಿ ಬಗ್ಗೆ ಬೇಸರವಿದ್ದು, ಆಕ್ಷೇಪಣೆ ಸಲ್ಲಿಸುತ್ತೇವೆ. ನಮ್ಮ ನಾಯಕರ ಗಮನಕ್ಕೂ ತರುತ್ತೇವೆ. ಒಂದು ವೇಳೆ ನಿರೀಕ್ಷಿತ ಮೀಸಲಾತಿ ಪ್ರಕಟವಾಗದಿದ್ದರೆ ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತೇನೆ. ಹೆಸರು ಹೇಳಲು ಇಚ್ಛಿಸದ ಜೆಡಿಎಸ್ ಟಿಕೆಟ್ ಆಕಾಂಕ್ಷಿ. ನಿರೀಕ್ಷೆಯಂತೆ ಕರಡು ಮೀಸಲಾತಿ ಪ್ರಕಟಗೊಂಡಿದೆ. ಇದೇ ಉಳಿದರೆ ನಮಗೂ ಉತ್ತಮ ಅವಕಾಶ ಸಿಕ್ಕಂತೆ ಆಗುತ್ತದೆ. ಜನಸೇವೆ ಮಾಡಬೇಕು ಎನ್ನುವ ಉದ್ದೇಶ ಹೊಂದಿದ್ದು, ಕರಡು ಮೀಸಲಾತಿ ಉತ್ತಮವಾಗಿದೆ. ಲೋಕೇಶ್‌ಗೌಡ ಲಕ್ಕೋಜನಹಳ್ಳಿ, ಕೈಲಾಂಚ ಜಿಪಂ ಕ್ಷೇತದ್ರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ.