ಹೇಮಾವತಿ ಲಿಂಕ್ ಕಾಲುವೆಗೆ ರಾಜಕೀಯ ಗುದ್ದಾಟ | All party meeting urge

DKS Ashok
Published on

ಬೆಂಗಳೂರು: ಕುಣಿಗಲ್ ತಾಲೂಕಿನ ನೀರಾವರಿ, ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಉದ್ದೇಶಿತ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕಾಲುವೆ ವಿವಾದ ತೀವ್ರವಾಗಿದ್ದು, ಆಡಳಿತ-ಪ್ರತಿಪಕ್ಷಗಳು ಏಟು- ಎದಿರೇಟಿಗೆ ಇಳಿದಿವೆ.

ಈ ಕಾಲುವೆ ನಿರ್ಮಾಣದಿಂದ ತುಮಕೂರಿನ ನೀರಿನ ಬವಣೆ ಅನುಭವಿಸಲಿದೆ. ಈಗಿರುವ ನಾಲೆ ಮುಖೇನ ಸಮರ್ಪಕವಾಗಿ ನೀರು ಪೂರೈಸಲಿ ಎಂದು ಹೋರಾಟಗಾರರು ಪಟ್ಟು ಹಿಡಿದಿದ್ದಾರೆ.

ವಿವಾದ, ಚಳವಳಿಯ ಬಗ್ಗೆ ಜಲ ಸಂಪನ್ಮೂಲ ಖಾತೆ ಹೊಂದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿ, ರಾಜಕಾರಣಕ್ಕಾಗಿ ಹೇಮಾವತಿ ಲಿಂಕ್ ಕಾಲುವೆ ವಿರೋಧಿಸಲಾಗುತ್ತಿದೆ. ಹೋರಾಟಗಾರರ ಬೇಡಿಕೆ ಏನೆಂಬದು ಬಹಿರಂಗಪಡಿಸುವೆ. ಅವರದೇ ಭಾಷೆಯಲ್ಲಿ ನನಗೂ ಅದಕ್ಕಿಂತ ಹೆಚ್ಚು ಗಟ್ಟಿ ಧ್ವನಿಯಲ್ಲಿ ಮಾತನಾಡಲು ಬರುತ್ತದೆ ಎಂದರು.

ಎಚ್.ಡಿ.ಕುಮಾರಸ್ವಾಮಿ ಅವಧಿಯಲ್ಲಿ ಲಿಂಕ್ ಕಾಲುವೆಗೆ ಅನುಮೋದನೆ ನೀಡಿದ್ದರೆ, ಯಡಿಯೂರಪ್ಪ ಸಿಎಂ ಆಗಿದ್ದಾಗ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಈ ಯೋಜನೆ ತಡೆ ಹಿಡಿದಿದ್ದರು.

ಯೋಜನೆಗೆ ಅನುಮೋದನೆ ನೀಡಿದಾಗ 400 ಕೋಟಿ ರೂ. ವೆಚ್ಚ ಅಂದಾಜಿಸಲಾಗಿತ್ತು. ವಿಳಂಬದ ಕಾರಣ ಈಗ ಅದು 900 ರಿಂದ 1000 ಕೋಟಿ ರೂ.ಗೆ ಬಂದಿದೆ. ಚಾಲ್ತಿ ಕಾಲುವೆಯಡಿ ಕುಣಿಗಲ್ ಪಾಲಿನ ಮೂರು ಟಿಎಂಸಿ ಅಡಿ ನೀರು ದಶಕದಿಂದಲೂ ಪೂರೈಕೆಯಾಗದೆ ಅನ್ಯಾಯವಾಗಿದೆ ಎಂದು ಯೋಜನೆಯನ್ನು ಡಿ.ಕೆ.ಶಿವಕುಮಾರ್ ಸಮಜಾಯಿಷಿ ನೀಡಿದರು.

ಕಾನೂನು ರೀತ್ಯ ಕ್ರಮ

ತಾಂತ್ರಿಕ ತಜ್ಞರ ವರದಿ ಆಧಾರದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಗೆ ಈ ನೀರಿನ ಅವಶ್ಯಕತೆಯಿಲ್ಲ. ಹೋರಾಟಗಾರರು ಕಾನೂನು ಕೈಗೆ ತೆಗೆದುಕೊಂಡಾಗ ಕಾನೂನು ರೀತ್ಯ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎ್ಐಆರ್ ದಾಖಲು ಮಾಡಿದ್ದನ್ನು ಸಮರ್ಥಿಸಿಕೊಂಡರು.

ಕುಣಿಗಲ್ ಜನರು ತುಮಕೂರಿನ ಭಾಗದವರೇ ಆಗಿದ್ದಾರೆ. ಕೃಷ್ಣಾ ಕೊಳ್ಳದ ವ್ಯಾಪ್ತಿಯ ತುಮಕೂರು ಜಿಲ್ಲೆಗೆ ಕಾವೇರಿ ಕೊಳ್ಳದ ಎತ್ತಿನಹೊಳೆ ಯೋಜನೆ ನೀರು ಒದಗಿಸಲಾಗುತ್ತಿದೆ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೀಮಿತವಾಗಿದ್ದ ಯೋಜನೆ ತುಮಕೂರಿಗೆ ವಿಸ್ತರಿಸಿದ್ದು ತಿರುಗಿಸಿದಂತೆಯೆ ? ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

ಎಡಬಿಡಂಗಿ ನಿಲುವು

ಹೇಮಾವತಿ ಲಿಂಕ್ ಕಾಲುವೆ ಯೋಜನೆ ವಿಚಾರದಲ್ಲಿ ರಾಜ್ಯ ಸರ್ಕಾರದ ಎಡಬಿಡಂಗಿ, ಧಮ್ಕಿ ಹಾಕುವ ನಿಲುವು ಈ ಸಮಸ್ಯೆಗೆ ಮೂಲ ಕಾರಣವೆಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದರು.

ಹೋರಾಟ ಮಾಡಿದ ರೈತರ ವಿರುದ್ಧ ಪ್ರಕರಣ ದಾಖಲಿಸಿರುವುದು ಅಕ್ಷಮ್ಯ ಅಪರಾಧ. ಎರಡು ಜಿಲ್ಲೆಗಳ ರೈತರನ್ನು ಎತ್ತಿಕಟ್ಟುವ, ಬೆದರಿಕೆ ಹಾಕುವ ಬದಲು ಮನವರಿಕೆ ಮಾಡಿಕೊಡಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಈ ವಿಷಯದಲ್ಲಿ ರಾಜ್ಯ ಸರ್ಕಾರ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಷ್ಠೆ ಮಾಡಿಕೊಳ್ಳದೆ ಬಿಕ್ಕಟ್ಟಿಗೆ ಪರಿಹಾರದತ್ತ ಯೋಚಿಸಬೇಕು. ಎರಡೂ ಜಿಲ್ಲೆಗಳ ರೈತ ಪ್ರಮುಖರು, ಸರ್ವಪಕ್ಷಗಳ ಸಭೆ ಕರೆದು ಹೇಮಾವತಿ ನೀರು ಹಂಚಿಕೆ ಬಗ್ಗೆ ಚರ್ಚಿಸುವುದು ಸೂಕ್ತವೆಂದು ಪ್ರತಿಪಾದಿಸಿದರು.

ಹೆದರಿಸುವ ತಂತ್ರಗಾರಿಕೆ ಅನುಸರಿಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಪರ-ವಿರೋಧ ಎರಡೂ ಕಡೆಯವರ ಧ್ವನಿಗೂ ಸರ್ಕಾರ ಕಿವಿಗೊಟ್ಟು, ದಾಖಲಿಸಿದ ಪ್ರಕರಣಗಳನ್ನು ಕೂಡಲೇ ಹಿಂಪಡೆಯಲು ಆರ್.ಅಶೋಕ್ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net