ರಾಜಕೀಯ ಆತ್ಮಾವಲೋಕನ ಅನಿವಾರ್ಯ; ವ್ಯವಸ್ಥೆಯ ಬದಲಾವಣೆ ಅಗತ್ಯ

CM
Published on

ಬೆಂಗಳೂರು: ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ ಕುರಿತು ವಿಧಾನಸಭೆಯಲ್ಲಿ ಬುಧವಾರ ಮುಂದುವರಿದ ಚರ್ಚೆಯಲ್ಲಿ ಚುನಾವಣಾ ವ್ಯವಸ್ಥೆಯಲ್ಲಿ ಹುಳುಕುಗಳು ಮೇಲೆ ಬೆಳಕುಚೆಲ್ಲುವ ಪ್ರಯತ್ನ ನಡೆಯಿತು. 10 ಗಂಟೆಗೂ ಹೆಚ್ಚು ಕಾಲ ನಡೆದ ಚರ್ಚೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ 17 ಸದಸ್ಯರು ಭಾಗವಹಿಸಿ ಚುನಾವಣಾ ಅಕ್ರಮ, ಭ್ರಷ್ಟತೆಯಲ್ಲಿ ಎಲ್ಲರೂ ಬಾಧ್ಯಸ್ಥರಾಗಿದ್ದು ರಾಜಕೀಯ ಪಕ್ಷಗಳ ಆತ್ಮಾವಲೋಕನದ ಅನಿವಾರ್ಯತೆ ಇದೆ ಎಂಬ ಒಟ್ಟು ಅಭಿಪ್ರಾಯವು ಸದನದಲ್ಲಿ ವ್ಯಕ್ತವಾಯಿತು.

ಕೇವಲ ಚುನಾವಣೆ ಶುದ್ಧೀಕರಣವಾದರೇ ದೇಶ ಸುಧಾರಿಸುವುದಿಲ್ಲ. ಶೈಕ್ಷಣಿಕ, ಸಾಂಸ್ಕೃತಿಕ ರಂಗವೂ ಶುದ್ಧವಾಗಬೇಕು. ಮೊದಲು ನಾಗರಿಕ ಸಮಾಜದ ಬಗ್ಗೆ ಭಯ ಇತ್ತು. ಈಗ ಆ ಮಟ್ಟದ ನಾಗರಿಕ ಸಮಾಜ ಈಗಿಲ್ಲ ಎಂದು ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದರು. ಚುನಾವಣಾ ವ್ಯವಸ್ಥೆ ಬದಲಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಇದರ ಸುಧಾರಣೆಯಾಗದೆ ಹೋದರೆ ಪ್ರಜಾಪ್ರಭುತ್ವ ದುರ್ಬಲವಾಗುತ್ತೆ, ಪ್ರಜಾಪ್ರಭುತ್ವ ದುರ್ಬಲವಾದರೆ ಸಮಾಜ, ದೇಶ ದುರ್ಬಲವಾಗುತ್ತದೆ ಎಂದ ಸಿದ್ದರಾಮಯ್ಯ, ರಾಜಕೀಯ ಪಕ್ಷಗಳು ಹಾಗೂ ಕಾರ್ಪೆರೇಟ್ ಸಂಸ್ಥೆಗಳ ‘ಮೈತ್ರಿ’ ಇತ್ತೀಚೆಗೆ ಆರಂಭವಾಗಿದ್ದು, ಸರ್ಕಾರವನ್ನು ನಿಯಂತ್ರಿಸುವಷ್ಟು ಪ್ರಬಲವಾಗಿ ಕಾರ್ಪೆರೇಟ್ ಸಂಸ್ಥೆಗಳು ಬೆಳೆದು ನಿಂತಿವೆ. ಅವುಗಳ ಜತೆ ಮೈತ್ರಿ ಕಡಿದುಕೊಳ್ಳದಿದ್ದರೆ ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯ ಇದೆ ಎಂದು ಕಳವಳ ವ್ಯಕ್ತಪಡಿಸಿದರು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಹಣ, ಹೆಂಡ, ಜಾತಿ, ಕುಲ, ಗೋತ್ರ್ರ ಏನೆಲ್ಲ ಆಮಿಷಗಳನ್ನು ಚುನಾವಣೆ ಸಂದರ್ಭ ಒಡ್ಡಲಿ ಮತದಾನದ ವೇಳೆ ತನಗೇನು ಸರಿ ಅನಿಸುತ್ತೊ ಅದನ್ನೇ ಮತದಾರ ಮಾಡುವುದು. ನಾವು ಎಷ್ಟೇ ಕೆಡಿಸುವ ಪ್ರಯತ್ನ ಮಾಡಿದರು ಅದು ಕೈಗೂಡುವುದಿಲ್ಲ ಎಂದರು. ಎಲ್ಲ ರಾಜಕೀಯ ಪಕ್ಷಗಳು, ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸ್ವಯಂ ಶುದ್ಧೀಕರಣ ಮಾಡದೆ ಹೋದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ಉಳಿವು ಕಷ್ಟವಾಗುತ್ತದೆ. ಪ್ರಾಮಾಣಿಕ ಜನಪರ ಕಾಳಜಿ ಇರುವ, ಆರ್ಥಿಕವಾಗಿ ದುರ್ಬಲರಾದ ನಿಷ್ಠಾವಂತ ಜನರು ರಾಜಕೀಯದಿಂದ ದೂರ ಹೋಗದಂತೆ ತಡೆಯಬೇಕು ಎಂಬ ಕಾರಣಕ್ಕೆ ರಾಜಕೀಯ ವ್ಯವಸ್ಥೆಯ ಬದಲಾವಣೆಯನ್ನು ಮಾಡಲೇಬೇಕಾಗಿದೆ ಎಂದರು. ಕಾರ್ಪೆರೇಟ್ ಡೊನೆಷನ್ 1970ರವರೆಗೆ ಇರಲಿಲ್ಲ. ಆದರೆ ಪ್ರಭಾವ ಇತ್ತು. ಬೇರೆ ಬೇರೆ ರೀತಯಲ್ಲಿ ನಿಯಂತ್ರಿಸುವ ಕೆಲಸ ಆಗಿನಿಂದಲೂ ಇದ್ದೇ ಇದೆ. ಈಗ ಅದರ ವಿಸ್ತಾರ ದೊಡ್ಡದಾಗಿದೆ. ಇದೆಲ್ಲ ನ್ಯೂನ್ಯತೆಗಳ ನಡುವೆ ವ್ಯವಸ್ಥೆಯನ್ನು ಸುಧಾರಿಸುವ ಪ್ರಯತ್ನ ಮಾಡಬೇಕು. ಪವರ್ ಪೊಲಿಟಿಕ್ಸ್​ನಲ್ಲಿ ಜನಪರ ಆಡಳಿತ ನೀಡಿದರೆ, ಜನರು ಒಳ್ಳೆಯದಕ್ಕೆ ಬೆಲೆ ಕೊಡುತ್ತಾರೆ ಎನ್ನುವ ವಿಶ್ವಾಸ ಇಟ್ಟುಕೊಂಡು. ಸ್ವಲ್ಪವಾದರೂ ಮುತ್ಸದ್ದಿಯಾಗಬೇಕು ಎಂದು ಚರ್ಚೆಗೆ ತೆರೆಎಳೆದರು.

ರಾಮನ ಲೆಕ್ಕ ಭೀಮನ ಲೆಕ್ಕ ಪಟೇಲರ ಕಚ್ಚೆಪಂಚೆ ಪುರಾಣ

ಚುನಾವಣೆ ಮುಗಿದು ತಿಂಗಳಲ್ಲಿ ಚುನಾವಣಾ ಆಯೋಗಕ್ಕೆ ಖರ್ಚು-ವೆಚ್ಚದ ಲೆಕ್ಕ ಕೊಡಬೇಕು. ಆದರೆ ರಾಮನ ಲೆಕ್ಕ ಭೀಮನ ಲೆಕ್ಕ ಕೊಡಲಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು. ಈ ವೇಳೆ ರಮೇಶ್ ಕುಮಾರ್, ವಾಡಿಕೆ ಇರುವುದು ರಾಮನ ಲೆಕ್ಕ ಕೃಷ್ಣನ ಲೆಕ್ಕ ಅಂತ. ರಾಮ ಏಕ ಪತ್ನಿವ್ರತಸ್ತ ಕೃಷ್ಣ ಹಾಗೇನು ಇಲ್ಲ. ನೀವು ಕೃಷ್ಣನ ಭಕ್ತರು. ಆ ಕಾರಣಕ್ಕಾಗಿ ಕೃಷ್ಣನ ಲೆಕ್ಕ ಅಂತಾನೇ ಹೇಳಿ, ಭೀಮನ ಲೆಕ್ಕ ಬೇಡವೆಂದು ಸಿದ್ದರಾಮಯ್ಯರ ಕಾಲೆಳೆದರು. ಆಗ ಜೆ.ಎಚ್. ಪಟೇಲ್ ಹೇಳಿದ ಪ್ರಸಂಗ ಉಲ್ಲೇಖಿಸಿದ ಸಿದ್ದರಾಮಯ್ಯ, ‘ಏನ್ರಿ ಪಟೇಲರೇ ಹಿಂದೆ ಕಚ್ಚೆ ಹಾಕ್ತಾ ಇದ್ರಿ, ಇವಾಗ ಅಡ್ಡ ಪಂಚೆ ಉಟ್ಕೊತ್ತೀದ್ದೀರಲ್ವಾ’ ಎಂದು ಕೆಲವರು ಕೇಳುತ್ತಿದ್ದರು. ಎಲ್ಲರೂ ನನಗೆ ಕಚ್ಚಕ್ರ, ಕಚ್ಚಕ್ರ ಅನ್ನುತ್ತಿದ್ದರು. ಅದಕ್ಕೆ ಕಚ್ಚೇನೆ ಬಿಟ್ಟು ಪಂಚೆ ಉಟ್ಟುಕೊಳ್ಳೋಕೆ ಶುರು ಮಾಡಿದೆ ಎಂದು ಹೇಳ್ತಾ ಇದ್ದರು ಎಂದಾಗ ಸದನ ನಗೆಗಡಲಲ್ಲಿ ತೇಲಿತು. ‘ಯು ಆರ್ ಮ್ಯಾನ್ ಆಫ್ ವುಮನ್ ಎಂದು ಹೇಳ್ತಾ ಇದ್ರು. ಅದಕ್ಕೆ ಪಟೇಲರು, ಸಮಾಜದಲ್ಲಿ ಎರಡು ವರ್ಗದ ಜನರಿದ್ದಾರೆ. ಕೆಲವರು, ರಾಮನ ವಂಶಕ್ಕೆ, ಇನ್ನು ಕೆಲವರು ಕೃಷ್ಣನ ವಂಶಕ್ಕೆ ಸೇರಿದವರು. ನಾನು ಕೃಷ್ಣನ ವಂಶಕ್ಕೆ ಸೇರಿದವನು. ರಾಮನ ವಂಶಕ್ಕೆ ಸೇರಿದವರು ಬೇರೆಯವರು ಇರಬಹುದು. ಹಾಗಂತ ಸುಳ್ಳು ಹೇಳ್ತಾರೆ. ಆದರೆ ನಾನು ಮಾತ್ರ ಧೈರ್ಯವಾಗಿ ಹೇಳುತ್ತಿದ್ದೇನೆ ಕೃಷ್ಣನ ವಂಶಕ್ಕೆ ಸೇರಿದವನು ಎಂಬ ಪಟೇಲರ ನೇರವಂತಿಕೆಯನ್ನು ಸಿದ್ದರಾಮಯ್ಯ ಸದನದಲ್ಲಿ ಪ್ರಸ್ತಾಪಿಸಿದರು.

ಚರ್ಚೆಗೆ ಗ್ರಾಸವಾದ ಮಾಂಸದೂಟ

ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಒಬ್ಬ ಎರಡು ಕೋಳಿ ನೀಡಿದ್ದ. ಮತ್ತೊಬ್ಬ ಕುರಿ ಮಾಂಸದ ಜತೆಗೆ ಸ್ವೀಟ್ ಬಾಕ್ಸ್ ನೀಡಿದ್ದ. ಏಕೆಂದರೆ, ರಮೇಶ್​ಕುಮಾರ್ ಮತ್ತು ಕಾಗೇರಿ ಅಂತವರು ಇರುತ್ತಾರೆ ಎಂದು ಅವರಿಗೆ ಸ್ವೀಟ್ ಕೊಟ್ಟಿದ್ದಾ? ಎಂದು ಗೋವಿಂದ ಕಾರಜೋಳ ಕೇಳಿದರು. ಆಗ ಸಿದ್ದರಾಮಯ್ಯ, ರಮೇಶ್​ಕುಮಾರ್ ಮಾಂಸ ತಿನ್ನುತ್ತಾನೆ ಎಂದು ಎಲ್ಲರ ಮುಂದೆ ಬಾಯಿ ಬಿಟ್ಟು ಹೇಳುತ್ತೀಯಾ ಎಂದು ಕಾಲೆಳೆದರು. ಅದಕ್ಕೆ ಕಾರಜೋಳ, ನಾವು-ನೀವು ಮಾಂಸ ತಿನ್ನುವ ಜಾತಿಯಲ್ಲಿ ಹುಟ್ಟಿದ್ದೇವೆ. ರಮೇಶ್ ಕುಮಾರ್ ರೀತಿ ಮಾಂಸ ತಿನ್ನಲು ಬರುವುದಿಲ್ಲ ನಮಗೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ನಾನೂ ರಮೇಶ್​ಕುಮಾರ್ ಜತೆ ಸಾಕಷ್ಟು ಬಾರಿ ಊಟ ಮಾಡಿದ್ದೇನೆ. ಅವನಷ್ಟು ಕ್ಲೀನಾಗಿ ಊಟ ಮಾಡಲು ನನಗೆ ಬರುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಮಾಂಸದ ಮಾತು ಸಾಕು ಚುನಾವಣೆ ಬಗ್ಗೆ ಮಾತನಾಡಿ ಎಂದು ಸ್ಪೀಕರ್ ಸಲಹೆ ನೀಡಿದರು. ಆಗ ಸಿದ್ದರಾಮಯ್ಯ, ನೋಡಿ ನಿಮಗೆ ಈ ವಿಷಯ ಕೇಳೋಕೆ ಅಸಹ್ಯ ಅನಿಸುತ್ತಿದೆ ಎಂದರು. ಆಗ ಹಾಗೇನಿಲ್ಲ ವಿಷಯಾಂತರ ಆಗುವುದು ಬೇಡ ಎಂದು ಸ್ಪೀಕರ್ ಹೇಳಿದರು.

ನಮ್ಮ ಮತ ಮಾರಾಟಕ್ಕಿಲ್ಲ

ನಮ್ಮ ಮತ ಮಾರಾಟಕ್ಕಿಲ್ಲ ಎಂದು ಹಳ್ಳಿ ಹಳ್ಳಿಯಲ್ಲಿ ಬೋರ್ಡ್ ಹಾಕಿಸಿ. ಹೊಸ ಚುನಾವಣಾ ವ್ಯವಸ್ಥೆ ತರಲು ನಾವೆಲ್ಲ ಪ್ರಯತ್ನಿಸೋಣ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು. ವಿಧಾನಸಭೆಯಲ್ಲಿ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ ಕುರಿತ ವಿಶೇಷ ಚರ್ಚೆಯಲ್ಲಿ ಮಾತನಾಡಿ, ಚುನಾವಣಾ ವ್ಯವಸ್ಥೆಯನ್ನು ನಾವೇ ಕೆಡಿಸಿದ್ದೇವೆ. ಗೆಲ್ಲಲೇಬೇಕೆಂದು ಜಿದ್ದಿಗೆ ಬಿದ್ದವರಂತೆ ಹಣ ಖರ್ಚು ಮಾಡುತ್ತಿದ್ದೇವೆ. ಪಂಚಾಯತಿ ಅಧ್ಯಕ್ಷ ಆಗಲು 1-2 ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ. ಅವರೇ ಅಷ್ಟು ಖರ್ಚು ಮಾಡುವಾಗ, ನಮ್ಮ ಚುನಾವಣೆ ಹೇಗೆ ಮಾಡಬೇಕು? ಹಣ ಕೇಳುವುದರಲ್ಲಿ ಯಾವುದೇ ಧರ್ಮ ಅಡ್ಡ ಬರುವುದಿಲ್ಲ. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂದು ಕೇಳಿದರು. ಕಾಂಗ್ರೆಸ್​ನ ಕೆ.ಆರ್.ರಮೇಶ್​ಕುಮಾರ್ ಮಾತನಾಡಿ, 10ನೇ ಷೆಡ್ಯೂಲ್​ಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ವಿಧಾನಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಕಳುಹಿಸಿದರೆ ಈ ಚರ್ಚೆಗೆ ಅರ್ಥ ಬರುತ್ತದೆ ಎಂದು ಸಲಹೆ ನೀಡಿದರು. ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಈ ಹಿಂದೆ ಉತ್ತರ ಕರ್ನಾಟಕದಲ್ಲಿ ಚುನಾವಣೆ ವೇಳೆ ತುಂಬ ಹಣ ಬೇಕಾಗಿರಲಿಲ್ಲ. ನನಗೆ ಪಕ್ಷ ಕೊಟ್ಟ ಹಣದಲ್ಲಿ ಇನ್ನಷ್ಟು ಉಳಿದಿತ್ತು. ಇಂದು ಗ್ರಾಪಂ ಸದಸ್ಯನಾಗಲು ಲಕ್ಷಾಂತರ ಹಣ ಬೇಕಾಗಿದೆ. ಗಣಿಗಾರಿಕೆ, ರಿಯಲ್​ಎಸ್ಟೇಟ್, ಜಾತಿಯಿಂದ ಚುನಾವಣಾ ವ್ಯವಸ್ಥೆಗೆ ಮೂರು ಪಿಡುಗುಗಳು ಎಂದರು.

ಮುಖ್ಯಮಂತ್ರಿ ಆಗಲು 2-3 ಸಾವಿರ ಕೋಟಿ ರೂ.!

ಸಿಎಂ ಆಗಬೇಕು ಎಂದರೆ ಏನು ಮಾಡಬೇಕೆಂಬ ಚರ್ಚೆಗಳು ಆಗುತ್ತವೆ. ಮುಖ್ಯಮಂತ್ರಿ ಆಗಬೇಕು ಅಂದರೆ 2 ಅಥವಾ 3 ಸಾವಿರ ಕೋಟಿ ರೂ. ಇಟ್ಟಿರಬೇಕು. ಮೇಲೆ ಕೊಡಬೇಕು, ಅಲ್ಲಿ ಇಲ್ಲಿ ಕೊಡಬೇಕು. ಶಾಸಕರನ್ನು ಹಿಡಿತದಲ್ಲಿ ಇಟ್ಕೊಳ್ಳಬೇಕು. ಇದನ್ನೆಲ್ಲ ಮಾಡಬೇಕೆಂದರೆ ಸಿಎಂ ಆದ ಮೇಲೆ ಲೂಟಿನೇ ಮಾಡಬೇಕಲ್ಲವೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದರು. ಸಂಪುಟ ಬದಲಾವಣೆ ಆಗುತ್ತದೆ. ನೀವು ರೆಡಿಯಾಗಿ ಎಂದು ಯತ್ನಾಳ್ ಸ್ಪೀಕರ್​ಗೆ ಹೇಳಿದರು. ಅದೂ ಇದೇಯಾ? ನನ್ನ ಮೂಗಿಗೆ ಏನು ಮೆತ್ತಿಕೊಂಡಿರಲಿಲ್ಲ. ಈಗ ಇವರೇನೋ ಮೆತ್ತಿದರು ಎಂದು ಸ್ಪೀಕರ್ ನಕ್ಕರು.

ಟೋಲ್ ಕಿರಿಕಿರಿ, ಶೀಘ್ರ ಜಂಟಿ ಸಭೆ

ರಾಜ್ಯದ ಎಲ್ಲ ಟೋಲ್​ಗಳಲ್ಲಿ ಗಣ್ಯರು ಹಾಗೂ ಅಂಬುಲೆನ್ಸ್​ಗಳ ಓಡಾಟಕ್ಕೆ ಪ್ರತ್ಯೇಕ ಸಮರ್ಪಿತ ಪಥವಿದ್ದರೂ ಕಿರಿಕಿರಿ ತಪ್ಪದಿರುವುದು ಗಮನಕ್ಕೆ ಬಂದಿದೆ. ವಿಧಾನಸಭಾಧ್ಯಕ್ಷ ಹಾಗೂ ವಿಧಾನಪರಿಷತ್ ಸಭಾಪತಿ ಅಧ್ಯಕ್ಷತೆಯಲ್ಲಿ ವಿಧಾನ ಮಂಡಲದ ಸದಸ್ಯರ ಸಭೆ ಕರೆಯಲು ನಿರ್ಧರಿಸಿರುವೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು. ಪರಿಷತ್​ನಲ್ಲಿ ಮರಿತಿಬ್ಬೇಗೌಡ ಈ ವಿಷಯ ಪ್ರಸ್ತಾಪಿಸಿ, ಎಲ್ಲ ಟೋಲ್​ಗಳ ಬಳಿ ಒಂದೇ ಬದಿಗೆ ಪ್ರತ್ಯೇಕ ಸಮರ್ಪಿತ ಪಥಗಳಿಲ್ಲ. ಅಷ್ಟೇ ಅಲ್ಲ, ಟೋಲ್​ಗಳಲ್ಲಿ ಮಾರ್ಷಲ್​ಗಳಲ್ಲ, ಬೌನ್ಸರ್ ಅಥವಾ ರೌಡಿಗಳು ಕಾವಲಿರುತ್ತಾರೆ. ಗಣ್ಯರು, ಅಂಬುಲೆನ್ಸ್​ಗಳ ಜತೆಗೆ ಜನ-ಸಾಮಾನ್ಯರಿಗೂ ಕಿರಿಕಿರಿಯಾಗುತ್ತಿದೆ ಎಂದಾಗ ಸಭಾಪತಿ ಧ್ವನಿಗೂಡಿಸಿ, ಪ್ರತಿಪಕ್ಷಗಳ ಹಲವು ಸದಸ್ಯರು ಸಹಮತ ವ್ಯಕ್ತಪಡಿಸಿದರು. ಸಿ.ಸಿ.ಪಾಟೀಲ್ ಪ್ರತಿಕ್ರಿಯಿಸಿ, ನನಗೂ ಸೇರಿ ಬಹುತೇಕರಿಗೆ ಇದೇ ಅನುಭವವಾಗಿದೆ. ಶೀಘ್ರವೇ ಜಂಟಿ ಸಭೆ ಕರೆದು, ನ್ಯೂನತೆ ಸರಿಪಡಿಸುವ ಜತೆಗೆ ಕೈಗೊಳ್ಳಬೇಕಾದ ಮಾಗೋಪಾಯಗಳ ಬಗ್ಗೆ ನಿರ್ಧಾರ ಕೈಗೊಳ್ಳೋಣ ಎಂದರು. ವಿಶಾಲ, ಬಹುಪಥ, ಉತ್ಕೃ್ಟ ದರ್ಜೆಯ ಹೆದ್ದಾರಿಗಳ ನಿರ್ವಣಕ್ಕೆ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ ಅವಶ್ಯ, ಅನಿವಾರ್ಯವಾಗಿದೆ. ಈ ವೆಚ್ಚ ಸರಿದೂಗಿಸಲು ಟೋಲ್ ನಿಗದಿಯಾಗುತ್ತದೆ ಎಂದು ಸಿ.ಸಿ.ಪಾಟೀಲ್ ಸಮರ್ಥಿಸಿಕೊಂಡರು. ಟೋಲ್ ದರ ಸಾಧ್ಯವಾದಷ್ಟು ತಗ್ಗಿಸಲು ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದೆಂಬ ಭರವಸೆ ನೀಡಿದರು.

2014ರ ಸಂಹಿತೆಗೆ ತಿದ್ದುಪಡಿ: ರಾಜ್ಯದ ಗುತ್ತಿಗೆದಾರರಿಗೆ ಹೆಚ್ಚಿನ ಅವಕಾಶಗಳನ್ನು ಅನುವು ಮಾಡಿಕೊಡಲೆಂದು ಕರ್ನಾಟಕ ಲೋಕೋಪಯೋಗಿ ಸಂಹಿತೆ 2014ಕ್ಕೆ ತಿದ್ದುಪಡಿ ಪರಿಶೀಲಿಸಲಾಗುತ್ತಿದೆ. ಹೊರ ರಾಜ್ಯದ ಗುತ್ತಿಗೆದಾರರಿಗೆ ವಿಶೇಷ ದರ್ಜೆಯಡಿ ನೋಂದಣಿ ಮಾಡುವುದು. ನಿಗದಿಪಡಿಸಿದ ಮೊತ್ತಕ್ಕೆ ಹೆಚ್ಚಿನ ಮೊತ್ತದ ಕಾಮಗಾರಿಗಳಲ್ಲಿ ಮಾತ್ರ ಹೊರ ರಾಜ್ಯದ ಗುತ್ತಿಗೆದಾರರು ಭಾಗವಹಿಸಲು ಅನುವು ಸೇರಿ ಕೆಲವು ಮಾರ್ಪಾಡುಗಳನ್ನು ತರಲು ಉದ್ದೇಶಿಸಿದೆ ಎಂದು ಸಿ.ಸಿ.ಪಾಟೀಲ್ ವಿವರಿಸಿದರು. ದೊಡ್ಡ ಕಂಪನಿಗಳು ಗುತ್ತಿಗೆ ಪಡೆದ ನಂತರ ಉಪಗುತ್ತಿಗೆ ನೀಡುತ್ತಿರುವುದು ನಿಜ. ಇದರಿಂದ ಉತ್ತಮ ಗುಣಮಟ್ಟಕ್ಕೆ ಸಮಸ್ಯೆಯಾಗದು, ಸರ್ಕಾರಕ್ಕೂ ಹೆಚ್ಚುವರಿ ಹೊರೆ ಬೀಳದು ಎಂದು ಸ್ಪಷ್ಟಪಡಿಸಿದರು.

ಅನಿರ್ದಿಷ್ಟಾವಧಿಗೆ ಮುಂದೂಡಿಕೆ: 26 ದಿನ, 119 ಗಂಟೆ ನಡೆದ ವಿಧಾನಪರಿಷತ್ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಸಭಾಪತಿ ಮುಂದೂಡಿದರು. ಪರಿಷತ್ ಬಜೆಟ್ ಕಲಾಪದ ಕೊನೆಯ ದಿನವಾದ ಬುಧವಾರ ಸಭಾಪತಿ, ಕಲಾಪದ ಸುಧೀರ್ಘ ವರದಿಯನ್ನು ಸದಸ್ಯರ ಮುಂದೆ ಮಂಡಿಸಿ ದರು. ವಿಧಾನಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಸಭಾಧ್ಯಕ್ಷರು ಮುಂದೂಡಿಕೆ ಮಾಡಿದರು.

ವಿದ್ಯಾಸಿರಿ ಅರ್ಜಿ ಸಲ್ಲಿಕೆ ಇಂದು ಕೊನೆಯ ದಿನ

ಪ್ರಸಕ್ತ ಶೈಕ್ಷಣಿಕ ಸಾಲಿನ ವಿದ್ಯಾಸಿರಿ ಯೋಜನೆಗೆ 139 ಕೋಟಿ ರೂ. ಅನುದಾನವನ್ನು ಬಜೆಟ್​ನಲ್ಲಿ ಒದಗಿಸಲಾ ಗಿದ್ದು, ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಮಾ.31ರವರೆಗೆ ಅವಕಾಶ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ವಿಧಾನಸಭೆಯಲ್ಲಿ ಬೈರತಿ ಸುರೇಶ್ ಪ್ರಶ್ನೆಗೆ ಉತ್ತರಿಸಿ, 2020-21ನೇ ಸಾಲಿನಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳ ಭೌತಿಕ ತರಗತಿಗಳು ನಡೆಯದ ಕಾರಣ ವಿದ್ಯಾಸಿರಿ ಯೋಜನೆಗೆ ಒದಗಿಸಿದ್ದ 10 ಕೋಟಿ ರೂ. ಅನುದಾವನ್ನು ವಿದ್ಯಾರ್ಥಿ ಗಳಿಗೆ ಶುಲ್ಕ ಮರುಪಾವತಿ, ವಿದ್ಯಾರ್ಥಿ ವೇತನ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗಿದೆ ಎಂದರು.

ವಸತಿಗೆ ಬ್ಯಾಂಕ್ ಸಾಲ ಸೌಲಭ್ಯ: ಪ್ರಧಾನಮಂತ್ರಿ ಗ್ರಾಮೀಣ ವಸತಿ ಯೋಜನೆ (ನಗರ)ಯಡಿ ಕೊಳೆಗೇರಿ ನಿವಾಸಿಗಳಿಗೆ ಮನೆಗಳನ್ನು ನಿರ್ವಿುಸುತ್ತಿದ್ದು, ಫಲಾನುಭವಿಗಳ ವಂತಿಕೆಗೆ ಬ್ಯಾಂಕ್ ಸಾಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ವಸತಿ ವಿ.ಸೋಮಣ್ಣ ವಿಧಾನ ಪರಿಷತ್​ಗೆ ಬುಧವಾರ ತಿಳಿಸಿದರು. ಜೆಡಿಎಸ್​ನ ಗೋವಿಂದರಾಜು ಪರವಾಗಿ ಕೆ.ಎ.ತಿಪ್ಪೇಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ಪ್ರತಿ ಮನೆಯ ವೆಚ್ಚ 5 ಲಕ್ಷ ರೂ. ಗಳು. ಇದರಲ್ಲಿ ಕೇಂದ್ರ ಸರ್ಕಾರದ ಸಬ್ಸಿಡಿ 1.50 ಲಕ್ಷ ರೂ., ರಾಜ್ಯ ಸರ್ಕಾರದ ಸಹಾಯಧನ ಪರಿಶಿಷ್ಟ ಜಾತಿ, ಪಂಗಡದವರಿಗೆ 2 ಲಕ್ಷ ರೂ. ಸಾಮಾನ್ಯ ವರ್ಗದವರಿಗೆ 1.20 ಲಕ್ಷ ರೂ. ನೀಡಲಾಗುತ್ತಿದೆ. ಉಳಿದ ಮೊತ್ತವನ್ನು ಫಲಾನುಭವಿಗಳು ವಂತಿಕೆ ರೂಪದಲ್ಲಿ ನೀಡಬೇಕಿದ್ದು, ಬ್ಯಾಂಕ್​ಗಳ ಅಧಿಕಾರಿ ವರ್ಗದ ಜತೆ ಅಭಿವೃದ್ಧಿ ಆಯುಕ್ತರು ಸಭೆ ನಡೆಸಿ, ಶೇ.7ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯದ ವ್ಯವಸ್ಥೆ ಮಾಡಿದ್ದು, 61,000 ಫಲಾನುಭವಿಗಳಿಗೆ ಈ ನೆರವು ದೊರೆತಿದೆ ಎಂದು ವಿವರಿಸಿದರು. ಕಾಂಗ್ರೆಸ್​ನ ಅರವಿಂದ ಕುಮಾರ್ ಅರಳಿ ಪ್ರಶ್ನೆಗೆ ಸೋಮಣ್ಣ ಉತ್ತರಿಸಿ, ವಿವಿಧ ಕಾರಣಗಳಿಂದ ಫಲಾನುಭವಿಗಳಿಗೆ ರದ್ದಾಗಿದ್ದ ವಸತಿ ಸೌಲಭ್ಯವನ್ನು ಮಾನವೀಯತೆ ದೃಷ್ಟಿಯಿಂದ ಅವಶ್ಯಕತೆ ಉಳ್ಳವರಿಗೆ ಮತ್ತೆ ಮಂಜೂರು ಮಾಡಲು ಸೂಚಿಸಿ ಸುತ್ತೋಲೆ ಹೊರಡಿಸಲಾಗಿದೆ ಎಂದರು.

ಸಬ್ಸಿಡಿ ಮಿತಿ ಹೆಚ್ಚಳ: ಕಾಂಗ್ರೆಸ್​ನ ಮಂಜುನಾಥ್ ಭಂಡಾರಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿವಿಧ ವಸತಿ ಯೋಜನೆಗಳಡಿ ಸಹಾಯಧನ ಮಿತಿ ಹೆಚ್ಚಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸಬ್ಸಿಡಿ 37,000 ರಿಂದ 1.20 ಲಕ್ಷ ರೂ., ಬೆಂಗಳೂರು ಹೊರತುಪಡಿಸಿ ಉಳಿದ ನಗರ-ಪಟ್ಟಣಗಳಲ್ಲಿ 87,000ರಿಂದ 2 ಲಕ್ಷ ರೂ. ಮತ್ತು ಬೆಂಗಳೂರಿನ ಫಲಾನುಭವಿಗಳಿಗೆ 3 ಲಕ್ಷ ರೂ.ಗೆ ಏರಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net