ಸೇವಾ ವಿಷಯದಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲ : ಹೈಕೋರ್ಟ್ ಅಭಿಪ್ರಾಯ

highcourt
Published on

ಬೆಂಗಳೂರು : ಸೇವಾ ವಿಷಯದಲ್ಲಿ ರಾಜಕೀಯ ಹಸ್ತಕ್ಷೇಪ ಅನಗತ್ಯವಾಗಿದ್ದು, ಅಪ್ರಸ್ತುತವಾದ ವಿಷಯಗಳಿಗೆ ಎಡೆ ಮಾಡಿಕೊಡುತ್ತಿದೆ. ಮಾತ್ರವಲ್ಲದೆ, ಸಾರ್ವಜನಿಕ ಆಡಳಿತ ಮತ್ತು ಉದ್ಯೋಗದಾತರ ಹಿತಾಸಕ್ತಿಯ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.  ವರ್ಗಾವಣೆ ತಡೆಗೆ ಸಂಸದರೊಬ್ಬರ ಶಿಫಾರಸ್ಸು  ತಂದಿದ್ದ ಉದ್ಯೋಗಿಯನ್ನು ಕಡ್ಡಾಯ ನಿವೃತ್ತಿಗೊಳಿಸಿದ್ದ ಸರ್ಕಾರದ ಆದೇಶ ಎತ್ತಿ ಹಿಡಿದಿದೆ.

ವರ್ಗಾವಣೆಗೊಂಡರೂ ವರದಿ ಮಾಡಿಕೊಳ್ಳದೆ ನ್ಯಾಯಾಲಯದ ಮೆಟ್ಟಿಲೇರಿದ್ದ ಕಿರಿಯ ಸಹಾಯಕಿಯಾಗಿದ್ದ ಎಂ.ವೀಣಾ ಅವರನ್ನು ಕಡ್ಡಾಯ ನಿವೃತ್ತಿ ಆದೇಶ ರದ್ದುಪಡಿಸಿದ್ದ ಏಕ ಸದಸ್ಯ ಪೀಠದ ಕ್ರಮ ಪ್ರಶ್ನಿಸಿ ಆಹಾರ ಮತ್ತು ನಾಗರೀಕ ಸರಬರಾಜು ಮಂಡಳಿ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ್ ಅವರ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಸರ್ಕಾರಿ ನೌಕರರ ಹಾಗೂ ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್‌ಗಳು ಉದ್ಯೋಗದಾತ ಸಕ್ಷಮ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿರುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ರಾಜಕೀಯ ಪ್ರಭಾವ ಬೀರುವುದನ್ನು ನ್ಯಾಯಾಲಯ ಗಮನಕ್ಕೆ ಬರುತ್ತಿದೆ. ರಾಜಕೀಯ ಪ್ರಭಾವವನ್ನುಂಟು ಮಾಡುವ ಸಾರ್ವಜನಿಕರ ಸೇವೆ ಮೌಲ್ಯಯುತವಾಗಿರಲೂ ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.

ಸಮಸ್ಯೆಗಳ ಪರಿಹಾರಕ್ಕೆ ನ್ಯಾಯಾಲಯದ ಮುಂದೆ ಬರುವರು ಕಳಂಕರಹಿತ ನಡವಳಿಕೆ ಹೊಂದಿರಬೇಕು. ಆದರೆ. ಇಲಾಖಾ ಶಿಸ್ತಿನ ವಿಚಾರಣೆಯಲ್ಲಿ ಅರ್ಜಿದಾರರ ವಿರುದ್ಧ ಆರೋಪವಿದೆ. ಇದೇ ಕಾರಣದಿಂದ ಇಲಾಖಾ ಮೇಲ್ಮನವಿ ಪ್ರಾಧಿಕಾರ ಅವರ ವಿರುದ್ಧ ಆದೇಶಿಸಿದೆ. ಇದೇ ಕಾರಣದಿಂದ ಮಂಡಳಿ ಕಡ್ಡಾಯ ನಿವೃತ್ತಿ ಶಿಕ್ಷೆ ನೀಡಿದೆ ಎಂದು ಪೀಠ ತಿಳಿಸಿದೆ.

ವೀಣಾರನ್ನು ಕಡ್ಡಾಯ ನಿವೃತ್ತಿ ನೀಡಿದ್ದ ಸರ್ಕಾರದ ಕ್ರಮ ರದ್ದುಗೊಳಿಸಿದ್ದ ಏಕಸದಸ್ಯ ಪೀಠದ ಆದೇಶ ದೋಷಪೂರಿತವಾಗಿದ್ದು, ರದ್ದು ಮಾಡಲಾಗುತ್ತಿದೆ. ಅಲ್ಲದೆ, ಕಡ್ಡಾಯ ನಿವೃತ್ತಿಯಿಂದ ಲಭ್ಯವಾಗುವ ಎಲ್ಲ ಸೌಲಭ್ಯಗಳನ್ನು ಮುಂದಿನ ಎಂಟು ವಾರಗಳಲ್ಲಿ ಹಸ್ತಾಂತರಿಸಬೇಕು. ವಿಳಂಬ ವಾದಲ್ಲಿ ಮಾಸಿಕ ಶೇ.2 ರಷ್ಟು ಬಡ್ಡಿಯನ್ನು ಸೇರಿಸಿ ಪಾವತಿ ಮಾಡಬೇಕು ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.

ವರ್ಗಾವಣೆಯಿಂದ ಕೆಲವು ತೊಂದರೆ

ನಿವೃತ್ತ ನ್ಯಾಯಮೂರ್ತಿ ರಾಮಾ ಜೋಯಿಸ್ ಅವರು ತಮ್ಮ ಸರ್ವೀಸಸ್ ಅಂಡರ್ ದಿ ಸ್ಟೇಟ್ ಪುಸ್ತಕದ ಮೊದಲ ಆವೃತ್ತಿಯಲ್ಲಿನ ಸಾಲುಗಳನ್ನು ಉಲ್ಲೇಖಿಸಿರುವ ಪೀಠ, ಸರ್ಕಾರಿ ನೌಕರ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ, ಒಂದು ಹುದ್ದೆಯಿಂದ ಮತ್ತೊಂದು ಹುದ್ದೆಗೆ ವರ್ಗಾವಣೆಗೆ ಹೊಣೆಗಾರರಾಗಿರುತ್ತಾನೆ.

ನೌಕರನಿಗೆ ಆ ಹುದ್ದೆಯಿಂದ ವರ್ಗಾವಣೆ ಮಾಡಬಾರದು ಎಂಬುದಾಗಿ ಒತ್ತಾಯಿಸುವ ಹಕ್ಕು ಇಲ್ಲ. ಸಾರ್ವಜನಿಕ ಹಿತಾಸಕ್ತಿಯಿಂದ ವರ್ಗಾವಣೆ ಮಾಡಿದ ಆದೇಶನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. ಎಂದು ತಿಳಿಸಿರುವುದಾಗಿ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಉದ್ಯೋಗಿಗಳ ವರ್ಗಾವಣೆ ಅವರಲ್ಲಿ ಕೆಲವು ತೊಂದರೆಗಳಿಗೆ ಕಾರಣವಾಗುತ್ತದೆ. ಆದರೆ, ಅದು ಅನಿವಾರ್ಯವಾಗಿರಲಿದೆ. ಅಂತಹ ಸಮಸ್ಯೆಗಳಿಗೆ ಉದ್ಯೋಗದಾತರು ಮಾತ್ರ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಶಿಸ್ತಿನ ಕ್ರಮ ಕೈಗೊಳ್ಳಬಹುದು....

ಸುಪ್ರೀಂಕೋರ್ಟ್‌ನ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ವರ್ಗಾವಣೆಯಾದ ಸ್ಥಳಕ್ಕೆ ತಕ್ಷಣ ವರದಿ ಮಾಡಿಕೊಕೊಂಡು ಬಳಿಕ ಸಮಸ್ಯೆಗಳ ಪರಿಹಾರಕ್ಕಾಗಿ ನ್ಯಾಯಾಲಯದ ಮೆಟ್ಟಿಲೆರಬೇಕು. ಆದರೆ ಇಲ್ಲಿ ಅದು ನಡೆದಿಲ್ಲ .ವರ್ಗಾವಣೆಗೊಂಡ ಸ್ಥಳಕ್ಕೆ ಹಲವು ದಿನಗಳ ಕಾಲ ವರದಿ ಮಾಡಿಕೊಳ್ಳದ ಅನಾರೋಗ್ಯದ ಕಾರಣ ನೀಡಿ ಗೈರು ಆಗಿದ್ದಾರೆ. ಆದರೆ, ಅಲರ್ಜಿಯಿಂದ ಕೆಲಸಕ್ಕೆ ಗೈರು ಆಗುವಂತಹ ಪರಿಸ್ಥಿತಿ ಇದ್ದಿರಲಿಲ್ಲ ಎಂಬುದಾಗಿ ವೈದ್ಯಕೀಯ ಮಂಡಳಿ ವರದಿ ನೀಡಿದೆ.

ಈ ಅಂಶ ಪರಿಗಣಿಸಿರುವ ಸಕ್ಷಮ ಪ್ರಾಧಿಕಾರ ಕಡ್ಡಾಯ ನಿವೃತ್ತಿಗೊಳಿಸಿ ಆದೇಶಿಸಿದೆ. ಅನಧಿಕೃತ ಗೈರು ಹಾಜರಿ ಉದ್ಯೋಗದಾತರನ್ನು ಸಂಕಷ್ಟಕ್ಕೆ ಸಿಲುಕಿಸುವುದರ ಜತೆಗೆ, ಸಿಬ್ಬಂದಿಯಲ್ಲಿನ ಅಶಿಸ್ತಿಗೆ ಕಾರಣವಾಗಲಿದೆ. ರಜೆ ಮಂಜೂರಾತಿಗಾಗಿ ಕೋರಿದ್ದ ಮನವಿಯನ್ನು ತಿರಸ್ಕರಿಸಿದ ಬಳಿಕವೂ ಗೈರಾಗಿರುವುದು ಒಪ್ಪುವಂತದಲ್ಲ. ಸಿಬ್ಬಂದಿಯ ಈ ರೀತಿಯ ವರ್ತನೆಗೆ ಇಂಕ್ರಿಮೆಂಟ್ ಕಡಿತದಿಂದ ಸೇವೆಯಿಂದ ವಜಾಗೊಳಿಸುವಂತೆ ಶಿಸ್ತಿನ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಪೀಠ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net