ಅನುದಾನ ಕಲ್ಪಿಸಲು ರಾಜಕೀಯ ತಾರತಮ್ಯ

3ckm1- ward wach-2
ಎರಡನೇ ವಾರ್ಡ್‌ನ ರಸ್ತೆ ದುಸ್ಥಿತಿ.
Published on

ಚಿಕ್ಕಮಗಳೂರು: ನಗರದ 2ನೇ ವಾರ್ಡಿನಲ್ಲಿ ಮೂಲ ಸೌಕರ್ಯ ಕೊರತೆಯಿಂದ ತೀವ್ರ ಸಮಸ್ಯೆ ಎದುರಾಗಿದೆ. ಒಳಚರಂಡಿ, ರಸ್ತೆ, ನೀರು, ಶುದ್ಧ ನೀರಿನ ಘಟಕ ಹೀಗೆ ಯಾವ ಸೌಲಭ್ಯಗಳೂ ಸರಿಯಿಲ್ಲ. ಪಟ್ಟಿ ಮಾಡಿದರೆ ಸಮಸ್ಯೆಗಳ ಸರಮಾಲೆಯೇ ಇಲ್ಲಿದೆ.
ಕಲ್ಯಾಣ ನಗರದಲ್ಲಿ 1200ಕ್ಕೂ ಹೆಚ್ಚು ಮನೆಗಳಿದ್ದು, 4000ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಬಡಾವಣೆಯು ನಗರಸಭೆ ವ್ಯಾಪ್ತಿಗೆ ಸೇರಿ ಸುಮಾರು ವರ್ಷಗಳೇ ಕಳೆದಿವೆ. ಆದರೆ ಸ್ಥಳೀಯರಿಗೆ ಈವರೆಗೂ ಸಮರ್ಪಕ ಮೂಲ ಸೌಲಭ್ಯಗಳು ದೊರೆತಿಲ್ಲ.
ವಾರ್ಡ್‌ನ ಡಿಸಿ ಲೇಔಟ್‌ಗೆ ದೊಡ್ಡ ಇತಿಹಾಸವಿದೆ. ಎರಡು ದಶಕಗಳ ಹಿಂದೆ ಅಂದಿನ ಜಿಲ್ಲಾಧಿಕಾರಿ ಬಡಾವಣೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರಿಂದ ಅದೇ ಹೆಸರನ್ನು ನಾಮಕರಣ ಮಾಡಲಾಗಿದೆ. ಬಡಾವಣೆಗೆ ಇನ್ನೇನು ಎಲ್ಲ ರೀತಿಯ ಸೌಲಭ್ಯ ದೊರೆಯುತ್ತವೆ ಎಂಬ ನಿರೀಕ್ಷೆ ನಿವಾಸಿಗಳದಾಗಿತ್ತು.
ಚಿಕ್ಕಮಗಳೂರು-ಕಡೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ 2ನೇ ವಾರ್ಡಿನಲ್ಲಿ ಅಂಗನವಾಡಿ ಕೇಂದ್ರ, ಶಾಲಾ ಕಾಲೇಜು, ವಿದ್ಯಾರ್ಥಿ ನಿಲಯ, ಅಂತಾರಾಷ್ಟ್ರೀಯ ಯೋಗ ಮಂದಿರವೂ ಇದೆ. ಇದರ ಸುತ್ತಮುತ್ತ ಇರುವ ಖಾಲಿ ನಿವೇಶನಗಳಲ್ಲಿ ಕೆಲ ಪುಂಡರು ರಾತ್ರಿ ಮದ್ಯ ಸೇವನೆ ಮಾಡಿ ಗಲಾಟೆ ಮಾಡುತ್ತಿದ್ದಾರೆ. ಇದರಿಂದ ನಿವಾಸಿಗಳಿಗೆ ಕಿರಿಕಿರಿ ಉಂಟಾಗುತ್ತಿದೆ.
ಒಂದು ಕಾಲದಲ್ಲಿ ಬಿಜೆಪಿ ತೆಕ್ಕೆಯಲ್ಲಿದ್ದ ವಾರ್ಡ್‌ನಲ್ಲಿ ಇದೀಗ ಕಾಂಗ್ರೆಸ್‌ನ ಸದಸ್ಯೆ ಇದ್ದಾರೆ. ಬಡಾವಣೆ ಅಭಿವೃದ್ಧಿಗಾಗಿ ಅನುದಾನ ನೀಡುವಂತೆ ನಗರಸಭೆಗೆ ಹಲವು ಬಾರಿ ಒತ್ತಾಯಿಸಿದ್ದರೂ ಬಿಜೆಪಿ ಸದಸ್ಯರು ಇರುವ ವಾರ್ಡಿಗೆ ಸಿಕ್ಕಿರುವ ಅನುದಾನದಲ್ಲಿ ಅರ್ಧದಷ್ಟೂ ಸಿಕ್ಕಿಲ್ಲ. ರಾಜಕೀಯ ತಾರತಮ್ಯದಿಂದ ವಾರ್ಡ್ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ನಗರದಲ್ಲಿನ ಇತರೆ ವಾರ್ಡ್‌ಗಳಿಗೆ ಹೋಲಿಕೆ ಮಾಡಿದರೆ 2ನೇ ವಾರ್ಡ್‌ನಲ್ಲಿ ಸಮಸ್ಯೆಗಳು ಗಂಭೀರವಾಗಿವೆ. ನಗರೋತ್ಥಾನ, 15ನೇ ಹಣಕಾಸು, ವಿಶೇಷ ಅನುದಾನದಡಿ ಬೇರೆ ವಾರ್ಡ್‌ಗಳಿಗೆ ಅಗತ್ಯ ಮೀರಿ ಶುದ್ಧ ನೀರಿನ ಘಟಕಗಳನ್ನು ಮಂಜೂರು ಮಾಡಲಾಗಿದೆ. ಆದರೆ ಈ ವಾರ್ಡ್‌ಗೆ ಮಂಜೂರು ಮಾಡಲಾಗುವುದು ಎಂದು ಭರವಸೆಯಷ್ಟೇ ಸಿಕ್ಕಿದೆ.
ವಾರ್ಡಿನಲ್ಲಿರುವ ಜನಸಂಖ್ಯೆಗೆ ತಕ್ಕಂತೆ ಪೌರಕಾರ್ಮಿಕರಿಲ್ಲ. ಆದರೂ ಪ್ರತಿ ಮನೆಗೆ ಹೋಗಿ ಕಸ ಸಂಗ್ರಹ ಮಾಡುವ ಕೆಲಸ ಮಾಡುತ್ತಾರೆ. ಪೌರಕಾರ್ಮಿಕರ ನಿಯೋಜನೆಯಲ್ಲೂ ರಾಜಕೀಯ ಮಾಡಲಾಗುತ್ತಿದೆ. ಇಲ್ಲಿನ ಜನರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net