

| ರಾಘವ ಶರ್ಮ ನಿಡ್ಲೆ ನವದೆಹಲಿ
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವರ್ಷ 2022ರ ವೇಳೆಗೆ ರೈತರ ಆದಾಯ ದುಪ್ಪಟ್ಟುಗೊಳಿಸುವುದು ನಮ್ಮ ಉದ್ದೇಶ ಎಂದು ಪದೇಪದೆ ಹೆಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ಮೂರು ಮಹತ್ವದ ಕೃಷಿ ಕಾನೂನುಗಳ ಜಾರಿ ಮೂಲಕ ಇದನ್ನು ಸಾಧಿಸಬೇಕೆಂಬ ಉದ್ದೇಶ ಹೊಂದಿದ್ದರು. ಆದರೆ, ಅನಿವಾರ್ಯ ರಾಜಕೀಯ ಪರಿಸ್ಥಿತಿಗಳು ಮತ್ತು ರೈತರ ಒಂದು ವರ್ಗ ಪಟ್ಟು ಸಡಿಲಿಸದ ಕಾರಣ ಈ ಕಾನೂನುಗಳನ್ನು ಹಿಂಪಡೆಯಲು ಕೇಂದ್ರ ಮುಂದಾಗಿದೆ.
ರಾಜಕೀಯ ಬದುಕಿನುದ್ದಕ್ಕೂ ಮೋದಿ ಸೋಲನ್ನು ಸುಲಭದಲ್ಲಿ ಒಪ್ಪಿಕೊಂಡವರಲ್ಲ. ದಿಟ್ಟತನದಿಂದ ಎಲ್ಲಾ ಎದುರಾಳಿಗಳನ್ನು ಎದುರಿಸಿದರು. ಆದರೆ, ಕೃಷಿ ಕಾಯ್ದೆ ವಿಷಯದಲ್ಲಿ ಮಾತ್ರ ಕೊನೆಗೂ ‘ರೈತ ಹೋರಾಟ’ಕ್ಕೆ ಮಣಿದಿದ್ದಾರೆ. ವಿಪಕ್ಷಗಳು ತಮ್ಮನ್ನು ರೈತವಿರೋಧಿ ಮತ್ತು ಉದ್ಯಮಿಗಳ ಪ್ರಿಯ ಎಂದು ಬಿಂಬಿಸುತ್ತಿದ್ದದ್ದು ಕೂಡ ಇದಕ್ಕೆ ಕಾರಣವಿದ್ದಿರಬಹುದು. ಮೇಲಾಗಿ, ಕೃಷಿ ಕಾನೂನುಗಳನ್ನು ಬಲವಾಗಿ ವಿರೋಧಿಸುತ್ತಿದ್ದವರು ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ರೈತರು. ಮುಂಬರುವ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಪಂಜಾಬ್, ಉತ್ತರ ಪ್ರದೇಶ ಚುನಾವಣೆ ಬಿಜೆಪಿ ಪಾಲಿಗೆ ಮಹತ್ವದ್ದಾಗಿವೆ. ಪಂಜಾಬ್ನಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ದೂರದ ಮಾತಾಗಿದ್ದರೂ, ಕಾಂಗ್ರೆಸ್ಸನ್ನು ಅಧಿಕಾರದಿಂದ ದೂರವಿಡಬೇಕು ಎನ್ನುವುದು ಬಿಜೆಪಿ ಕಾರ್ಯತಂತ್ರವಾಗಿದೆ. ಈ ನಿಟ್ಟಿನಲ್ಲಿ, ಕಾಂಗ್ರೆಸ್ ತೊರೆದಿರುವ ಪಂಜಾಬ್ನ ಮಾಜಿ ಸಿಎಂ ಕ್ಯಾ. ಅಮರಿಂದರ್ ಸಿಂಗ್ ಜತೆಗೆ ಮೈತ್ರಿ ಮಾಡಿಕೊಳ್ಳುತ್ತಿದೆ. ಕೃಷಿ ಕಾನೂನು ರದ್ದುಗೊಳಿಸಿದರೆ ಮೈತ್ರಿ ಮಾಡಿಕೊಳ್ಳುವುದಾಗಿ ಕ್ಯಾಪ್ಟನ್ ಹೇಳಿದ್ದರು ಮತ್ತು 2-3 ಬಾರಿ ಗೃಹ ಸಚಿವ ಅಮಿತ್ ಷಾರನ್ನು ಭೇಟಿ ಮಾಡಿದ್ದರು. ಪಂಜಾಬ್ ಸಿಎಂ ಚರಣ್ಜಿತ್ ಚನ್ನಿ-ನವಜೋತ್ ಸಿಂಗ್ ಸಿಧು ನಡುವಣ ರಾಜಕೀಯ ಸಮರದ ಲಾಭಗಳಿಸಬೇಕೆಂದರೆ, ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎನ್ನುವುದು ಕ್ಯಾಪ್ಟನ್ ಪ್ರತಿಪಾದನೆಯಾಗಿತ್ತು ಎನ್ನಲಾಗಿದೆ. ಮುಂದಿನ ಚುನಾವಣೆಯಲ್ಲಿ ಈ ವಿಷಯವನ್ನೇ ಜನರ ಮುಂದಿಟ್ಟು ಕೃಷಿಕರ ಮತಗಳನ್ನು ಸೆಳೆದು ಕಾಂಗ್ರೆಸ್ಗೆ ಹಾನಿ ಮಾಡುವುದು ಕ್ಯಾಪ್ಟನ್ ಕಾರ್ಯತಂತ್ರವಾಗಿರಲಿದೆ.
ಕಬ್ಬು ಬೆಳೆಗಾರರು ಹೆಚ್ಚಾಗಿರುವ ಪಶ್ಚಿಮ ಉತ್ತರ ಪ್ರದೇಶದ ರೈತರು ಉತ್ತರ ಪ್ರದೇಶ-ದೆಹಲಿಯ ಗಾಜಿಪುರ ಗಡಿಯಲ್ಲಿ ಪ್ರತಿಭಟನೆಗೆ ಕುಳಿತಿದ್ದರು. ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಈ ಭಾಗದ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದರು. ಈ ಬಾರಿ ಕೃಷಿ ಕಾಯ್ದೆ ವಿರೋಧಿಸುವ ರೈತರನ್ನು ಒಗ್ಗೂಡಿಸಿದ್ದ ರಾಷ್ಟ್ರೀಯ ಲೋಕದಳ ಪಕ್ಷದ ನಾಯಕ ದಿವಂಗತ ಅಜಿತ್ ಸಿಂಗ್ ಪುತ್ರ ಜಯಂತ್ ಚೌಧುರಿ ಪಕ್ಷದ ಪುನರುಜ್ಜೀವನಕ್ಕೆ ಕೈ ಹಾಕಿದ್ದಾರೆ ಮತ್ತು ಆರ್ಎಲ್ಡಿ ಲಾಭವಾಗಲಿದೆ ಎಂಬ ವರದಿಗಳಿವೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ ಬಿಜೆಪಿ ಪ್ರಬಲ ಪ್ರತಿಸ್ಪರ್ಧಿಯಾಗುವ ಲಕ್ಷಣಗಳು ಗೋಚರಿಸಿದ್ದು, ಮಾಜಿ ಸಿಎಂ ಅಖಿಲೇಶ್ ಯಾದವ್ ಬಿಜೆಪಿಯನ್ನು ರೈತವಿರೋಧಿ ಎಂದೇ ಗುರಿ ಮಾಡುತ್ತಿದ್ದಾರೆ. ಈಚೆಗೆ ಅಖಿಲೇಶ್ ಕೈಗೊಂಡಿದ್ದ ಪ್ರಚಾರ ಸಭೆಗೆ ಭಾರೀ ಜನಸ್ಪಂದನೆ ಸಿಕ್ಕಿರುವುದೂ ಬಿಜೆಪಿ ನಾಯಕರ ನಿದ್ದೆಗೆಡಿಸಿದೆ. ಲಖಿಂಪುರ ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕೇಂದ್ರ ಸಚಿವರ ಪುತ್ರನಿದ್ದನೆನ್ನಲಾದ ವಾಹನ ಹರಿದ ಘಟನೆಯಂತೂ ಬಿಜೆಪಿಗೆ ರಾಜಕೀಯವಾಗಿ ಭಾರೀ ಹಾನಿ ಮಾಡಿದೆ. ಹೀಗಾಗಿ, ರೈತರನ್ನು ತಕ್ಕ ಮಟ್ಟಿಗೆ ಸಮಾಧಾನಗೊಳಿಸಬೇಕೆಂದರೆ ಕೃಷಿ ಕಾನೂನು ಹಿಂಪಡೆಯುವುದೇ ಪರಿಹಾರ ಎಂದು ಉತ್ತರ ಪ್ರದೇಶ ಬಿಜೆಪಿ ನಾಯಕರು ಸಲಹೆ ನೀಡಿದ್ದರು ಎಂದು ಹೇಳಲಾಗಿದೆ.
ಕೃಷಿ ಸುಧಾರಣಾ ಮಸೂದೆ ಸಂಸತ್ತಿನಲ್ಲಿ ಮಂಡನೆಯಾದ ಬಳಿಕ ಹಲವು ರಾಜ್ಯಗಳಲ್ಲಿ ಚುನಾವಣೆ ನಡೆದಿದ್ದು, ಇದರ ನೇರ ಪರಿಣಾಮವೇನೂ ಬಿಜೆಪಿ ಮೇಲಾದಂತಿಲ್ಲ. ಆದರೆ, ಪ್ರತಿ ಚುನಾವಣೆಯಲ್ಲೂ ಇದು ಚರ್ಚಾ ವಿಷಯವಾಗಿದ್ದು, ವಿಪಕ್ಷಗಳು, ರೈತ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಭಟನಾ ನಿರತ ರೈತರೊಂದಿಗೆ ಮಾತನಾಡುವ ಕನಿಷ್ಠ ಕಾಳಜಿಯನ್ನೂ ವ್ಯಕ್ತಪಡಿಸಲಿಲ್ಲ, ಅವರೊಬ್ಬ ಉದ್ಯಮಿಗಳ ಪ್ರಿಯ ನಾಯಕ ಎಂಬ ನಿರೂಪಣೆಯನ್ನೇ ತೇಲಿಬಿಡುತ್ತಿವೆ. ಬಹುಶಃ ಇದನ್ನು ಬದಲಾಯಿಸಬೇಕು ಎನ್ನುವುದು ಮೋದಿ ಮನಸ್ಸಿನಲ್ಲಿದ್ದಂತಿದ್ದು, ರೈತರ ಸಮಸ್ಯೆಗೆ ಸ್ಪಂದಿಸುವ ರೈತಪರ ಸರ್ಕಾರ ಎಂಬುದನ್ನೇ ಪ್ರಚಾರ ವಸ್ತುವನ್ನಾಗಿಸುವ ಉದ್ದೇಶ ಹೊಂದಿರುವಂತಿದೆ. ಅನೇಕ ಆಯಾಮಗಳ ಬಗ್ಗೆ ಅವಲೋಕಿಸಿಯೇ ಕೃಷಿ ಕಾಯ್ದೆ ಹಿಂಪಡೆಯುವ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ವಿಶ್ಲೇಷಣೆಗಳಿವೆ.
ಜನವರಿ 26ರಂದು ರೈತರು ಟ್ರಾ್ಯಕ್ಟರ್ ರ‍್ಯಾಲಿ ಮೂಲಕ ಕೆಂಪುಕೋಟೆಗೆ ಮುತ್ತಿಗೆ ಹಾಕಿದ್ದು, ಪೊಲೀಸರ ಮೇಲೆ ಟ್ರಾ್ಯಕ್ಟರ್ ಚಲಾಯಿಸಿದ್ದು ಸೇರಿ ಅನೇಕ ದುರ್ಘಟನೆಗಳು ಈ ಹೋರಾಟವನ್ನೇ ಪ್ರಶ್ನಿಸುವಂತಿದ್ದವು. ಈ ಮಧ್ಯೆಯೂ ರೈತರು ಗಡಿಗಳಲ್ಲಿ ಮತ್ತೆ ‘ಹೋರಾಟ’ ಮುಂದುವರಿಸಿದರು. ರೈತರ ವಿರುದ್ಧ ಏನೇ ಕ್ರಮ ಕೈಗೊಂಡರೂ ಪರಿಣಾಮ ರಾಷ್ಟ್ರೀಯ ಮಟ್ಟದಲ್ಲಿರುತ್ತದೆ ಎಂದೇ ಬಿಜೆಪಿ ಕೂಡ ಎಚ್ಚರಿಕೆ ಹೆಜ್ಜೆ ಇಟ್ಟಿತು. ಅಂತಿಮವಾಗಿ, ಚುನಾವಣೆ ಹೊಸ್ತಿಲಲ್ಲಿ ರಾಜಕೀಯ ನಷ್ಟ ಅರಗಿಸಿಕೊಳ್ಳಲು ಸಾಧ್ಯವಿಲ್ಲವೆಂದೇ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.
ಲಾಭವಿಲ್ಲ ನಷ್ಟವೇ: ಕಾಯ್ದೆ ಹಿಂಪಡೆಯುವುದರಿಂದ ಬಿಜೆಪಿಗೆ ಉತ್ತರ ಪ್ರದೇಶ, ಪಂಜಾಬ್ನಲ್ಲಿ ರಾಜಕೀಯ ಲಾಭವಾಗದು. ಪ್ರತಿಭಟನೆ ತಾರಕಕ್ಕೇರಿದ್ದ ಸಂದರ್ಭದಲ್ಲಿ ಕೇಂದ್ರ ಏನೂ ಮಾಡಲಿಲ್ಲ. ಈಗ ಚುನಾವಣೆ ಹೊಸ್ತಿಲಲ್ಲಿ ಕಾನೂನು ಹಿಂಪಡೆಯಲು ಮುಂದಾಗಿರುವುದು ವಿಪರ್ಯಾಸ. ರೈತರ ಸಮಸ್ಯೆಗಳೇನೇ ಇದ್ದರೂ ಅದನ್ನು ಸರಿಪಡಿಸಲು ಇತರ ಪೂರಕ ಕೃಷಿ ನೀತಿಗಳನ್ನು ಪ್ರಕಟಿಸಬಹುದಿತ್ತು.ಎಂದು ಕೃಷಿ ಕಾನೂನು ಪರಾಮರ್ಶೆಗೆ ಸುಪ್ರೀಂಕೋರ್ಟ್ ರಚಿಸಿದ ತಜ್ಞರ ಸಮಿತಿ ಸದಸ್ಯ, ಶೇತ್ಕರಿ ಸಂಘಟನೆ ಸದಸ್ಯ ಅನಿಲ್ ಘನ್ವಾಟ್ ಬೇಸರ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮುಖಂಡರಲ್ಲಿ ಬೇಸರ, ಅತೃಪ್ತಿ: ‘ರೈತರ ಸುಧಾರಣೆಗೆಂದೇ ಸದುದ್ದೇಶದಿಂದ ಈ ಕಾಯ್ದೆ ತರಲಾಗಿದೆ ಎಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾಷಣ ಮಾಡಿದೆ, ರೈತರ ಮನವೊಲಿಸಿದೆ. ಈಗ ಯಾವ ಮುಖ ಹೊತ್ತುಕೊಂಡು ನಿಮ್ಮ ಒಳಿತಿಗಾಗಿ ಕಾನೂನು ಹಿಂಪಡೆಯುತ್ತಿದ್ದೇವೆ ಎಂದು ಹೇಳಲಿ’ ಎಂದು ರಾಜ್ಯ ಬಿಜೆಪಿ ಮುಖಂಡರೊಬ್ಬರು ವಿಜಯವಾಣಿ ಜತೆ ಮಾತನಾಡುತ್ತಾ ಬೇಸರ ಹೊರಹಾಕಿದರು. ಒಳ್ಳೆಯ ಉದ್ದೇಶ ಇದೆ ಎನ್ನುವುದಾದರೆ ಭಯವೇಕೆ? ಚುನಾವಣೆ ಸೋಲಿಗಿಂತ ರೈತರ ಹಿತ ಮುಖ್ಯ ಎಂಬ ಸಂದೇಶ ರವಾನಿಸುವ ಯತ್ನ ಮಾಡಬಹುದಿತ್ತು ಎನ್ನುತ್ತಾರೆ ಅವರು. ಕೃಷಿ ಕಾಯ್ದೆ ಹಿಂಪಡೆಯುವ ನಿರ್ಧಾರ ಬಿಜೆಪಿ ಬೆಂಬಲಿಸುವ ಅನೇಕರಿಗೆ ಸಮಾಧಾನ ತಂದಂತಿಲ್ಲ. ಸಾಮಾಜಿಕ ಜಾಲತಾಣದಲ್ಲೂ ಅನೇಕರು ಅತೃಪ್ತಿ ಹೊರಹಾಕಿದ್ದು, ಪೌರತ್ವ ತಿದ್ದುಪಡಿ ಕಾನೂನು, ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ನಿಷ್ಕ್ರಿಯಗೊಳಿಸುವ ಸಂವಿಧಾನದ ಆರ್ಟಿಕಲ್ 370 ರದ್ದತಿ ಸೇರಿ ಎಲ್ಲಾ ನಿರ್ಧಾರಗಳನ್ನು ಇದೇ ರೀತಿ ಹಿಂಪಡೆಯುತ್ತೀರಾ ಎಂದು ಬಿಜೆಪಿ ಮುಖಂಡರನ್ನು ಪ್ರಶ್ನಿಸಲಾಗುತ್ತಿದೆ.
ಸಂವಿಧಾನಕ್ಕೆ ಜಯ: ಕೃಷಿ ಕಾನೂನುಗಳನ್ನು ಹಿಂಪಡೆದಿರುವುದು ದೇಶದ ಸಂವಿಧಾನಕ್ಕೆ ಸಿಕ್ಕ ಜಯ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಬಣ್ಣಿಸಿದ್ದಾರೆ. ದಿಲ್ಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪ್ರಾಣ ಕಳೆದುಕೊಂಡ ನೂರಾರು ರೈತರ ಪರವಾಗಿ ಶುಕ್ರವಾರ ಸಂಜೆ ಅವರು ಕ್ಯಾಂಡಲ್ ಮಾರ್ಚ್ ನಡೆಸಿದರು. ಪ್ರತಿಭಟನಾನಿರತ ರೈತರಿಗೆ ಊಟದ ವ್ಯವಸ್ಥೆ ಮಾಡಲೆಂದು ಅವರು ಯೂತ್ ಕಾಂಗ್ರೆಸ್ ಮೂಲಕ ಭೋಜನಗೃಹ ತೆರೆದಿದ್ದರು.
ಸುಪ್ರೀಂ ಸಮಿತಿ ವರದಿ ಮುಂದಿನವಾರ ಪ್ರಕಟ?: ಮೂರು ಕೃಷಿ ಕಾನೂನುಗಳ ಅಧ್ಯಯನ ನಡೆಸಿ ಶಿಫಾರಸು ನೀಡುವಂತೆ ಸುಪ್ರೀಂ ಕೋರ್ಟ್ ರಚಿಸಿದ್ದ ಸಮಿತಿಯ ವರದಿಯನ್ನು ಪ್ರಕಟಿಸಬೇಕು. ಈ ವರದಿಯನ್ನು ಸಮಿತಿಯು ಮಾರ್ಚ್ 19ಕ್ಕೇ ಸುಪ್ರೀಂಕೋರ್ಟ್ಗೆ ಸಲ್ಲಿಸಿದೆ. ಅದು ಕೃಷಿಕರ ಪರವಾಗಿದೆ. ಮುಂದಿನವಾರ ಇದನ್ನು ಬಿಡುಗಡೆ ಮಾಡುವುದಾಗಿ ಶೇತಕರಿ ಸಂಘಟನೆ ಮುಖ್ಯಸ್ಥ ಅನಿಲ್ ಜೆ ಘನಾವಟ್ ಹೇಳಿದ್ದಾರೆ.
ಮೋದಿ ನಿರ್ಧಾರ ಸ್ವಾಗತಿಸಿದ ದೇವೇಗೌಡ: ಕೃಷಿ ಕಾಯ್ದೆ ವಿರುದ್ಧ ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋರಾಟ ನಡೆಸಿದ ರೈತಸಮೂಹಕ್ಕೆ ಮಾಜಿ ಪ್ರಧಾನಿ ದೇವೇಗೌಡ ಸೆಲ್ಯೂಟ್ ಹೊಡೆದಿದ್ದಾರೆ. ಯಾವುದೇ ಒತ್ತಡಕ್ಕೂ ಮಣಿಯದೆ ಹೋರಾಟ ನಡೆಸಿದ ರೈತಬಾಂಧವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಪ್ರಧಾನಿ ಮೋದಿಯವರ ನಿರ್ಧಾರವನ್ನು ಸ್ವಾಗತಿಸಿದ್ದಾರೆ. 2020ರಲ್ಲಿ ತಾವು ಕೃಷಿ ಕಾಯ್ದೆ ವಿರುದ್ಧ ರಾಜ್ಯಸಭೆಯಲ್ಲಿ ಭಾಷಣ ಮಾಡಿದ್ದನ್ನೂ ದೇವೇಗೌಡರು ನೆನಪಿಸಿದ್ದಾರೆ.
ಪ್ರತಿ ಹಳ್ಳಿಗೆ ಹೊರಟಿದ್ದ ರೈತರು: ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರದ ಹಿಂದೆ ರೈತರು ಮೂರು ರಾಜ್ಯಗಳ ಚುನಾವಣೆಗೆ ಬಿಜೆಪಿ ವಿರುದ್ಧ ರೂಪಿಸಿದ್ದ ಹೋರಾಟ ಕಾರಣವಾಯಿತೇ? ರೈತ ಸಂಘಟನೆಗಳು ಪಂಜಾಬ್, ಉತ್ತರ ಪ್ರದೇಶ, ಹರಿಯಾಣದಲ್ಲಿ ಬಿಜೆಪಿ ವಿರುದ್ಧ ಹಳ್ಳಿಹಳ್ಳಿಗಳಲ್ಲಿ ಪ್ರಚಾರ ನಡೆಸಲು ನಿರ್ಧಾರ ಮಾಡಿದ್ದವು. ಆ ನಿರ್ಧಾರ ಕೇಂದ್ರದ ಕಿವಿಗೂ ತಲುಪಿತ್ತು ಎಂಬುದು ರೈತ ಸಂಘಟನೆಗಳ ಮೂಲಗಳೇ ಹೇಳುತ್ತವೆ. ಇಡೀ ರಾಜ್ಯದ ರೈತರನ್ನು ಸೇರಿಸಿಕೊಂಡು ಮೂರು ರಾಜ್ಯಗಳಲ್ಲಿ ಪ್ರತಿ ಹಳ್ಳಿಗೆ ತಲಾ 25 ಜನ ಹೋಗಿ ಅಲ್ಲಿನ ರೈತರನ್ನು ಮನವೊಲಿಸಬೇಕೆಂದು ನಿರ್ಧಾರ ಮಾಡಲಾಗಿತ್ತು. ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಕೃಷಿ ಕಾನೂನುಗಳ ವಿಚಾರ ಸಾಕಷ್ಟು ಪರಿಣಾಮ ಬೀರಿತ್ತು. ಅದೇ ಪರಿಣಾಮ ಉತ್ತರಪ್ರದೇಶ ಹಾಗೂ ಇತರ ರಾಜ್ಯಗಳ ಮೇಲೂ ಆಗಬಹುದೆಂಬುದು ಬಿಜೆಪಿಗಿದ್ದ ಆತಂಕವೆಂದು ಮೂಲಗಳು ಹೇಳುತ್ತವೆ.
ಜಿಲೇಬಿ ಹಂಚಿ ಸಂಭ್ರಮ: ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆದ ವಿಚಾರ ಘೋಷಿಸಿದ ಕೂಡಲೇ ಗಾಝಿಪುರದ ಪ್ರತಿಭಟನಾ ಸ್ಥಳದಲ್ಲಿ ಮತ್ತು ದೇಶದ ಹಲವೆಡೆ ಪ್ರತಿಭಟನಾಕಾರರು ಮತ್ತು ಅವರ ಬೆಂಬಲಿಗರು ಜಿಲೇಬಿ ಮತ್ತು ಇತರ ಸಿಹಿಹಂಚಿ ಸಂಭ್ರಮ ವ್ಯಕ್ತಪಡಿಸಿದರು.
ದೇಶದ 62 ಕೋಟಿ ಕೃಷಿಕರಿಗೆ ಸಿಕ್ಕ ಜಯ ಇದು. 12 ತಿಂಗಳ ಕಾಲ ಶಾಂತಿಯುತವಾಗಿ ನಡೆದ ಗಾಂಧಿ ಚಳವಳಿ ಇದಾಗಿತ್ತು. 700ಕ್ಕೂ ಹೆಚ್ಚು ರೈತರು ಈ ಚಳವಳಿಗೆ ತಮ್ಮ ಜೀವ ಬಲಿದಾನ ಮಾಡಿದ್ದಾರೆ. ಅವರಿಗೆ ಸಿಕ್ಕ ಜಯ ಇದು. ಸತ್ಯಕ್ಕೆ, ನ್ಯಾಯಕ್ಕೆ ಮತ್ತು ಅಹಿಂಸೆಗೆ ಗೆಲುವಾಗಿದೆ.
| ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆ
ಕೃಷಿ ಕಾನೂನು ಹಿಂಪಡೆದ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮವು ರಾಜಕೀಯ ಮುತ್ಸದಿತನದ ನಡೆಯಾಗಿದೆ. ಪ್ರಧಾನಿಯವರು ಅವರ ಭಾಷಣದಲ್ಲಿ ಸೂಚಿಸಿದಂತೆ ನಮ್ಮ ಸರ್ಕಾರವು ಕೃಷಿಕರ ಸೇವೆಯನ್ನು ಮುಂದುವರಿಸಲಿದೆ, ಅವರ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸುವ ಕೆಲಸವನ್ನೂ ಮುಂದುರಿಸಲಿದೆ.
| ಅಮಿತ್ ಷಾ ಕೇಂದ್ರ ಗೃಹ ಸಚಿವ
ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಸಂಸದೀಯ ನಡಾವಳಿ ಶುರುವಾಗುತ್ತಿದ್ದಂತೆ ಪ್ರತಿಭಟನೆಯನ್ನು ಹಿಂಪಡೆಯುತ್ತೇವೆ. ಮೊಂಡುತನವನ್ನು, ಅಹಂಕಾರವನ್ನು ಪ್ರದರ್ಶಿಸುತ್ತಿದ್ದ ಸರ್ಕಾರವನ್ನು ದೇಶದ ಅನ್ನದಾತರು ಸತ್ಯಾಗ್ರಹದ ಮೂಲಕವೇ ಮಣಿಯುವಂತೆ ಮಾಡಿದ್ದಾರೆ.
| ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ
ಸಂಸತ್ತಿನಲ್ಲಿ ಕಾನೂನು ಹಿಂಪಡೆಯುವ ತನಕ ನಾವು ಪ್ರತಿಭಟನೆ ಮುಂದುವರಿ ಸುತ್ತೇವೆ. ಅದರ ಜತೆಗೆ ಕನಿಷ್ಠ ಬೆಂಬಲ ಬೆಲೆ ಸೇರಿ ಇತರ ಕೃಷಿ ವಿಷಯಗಳನ್ನು ರೈತರ ಜತೆಗೆ ಸರ್ಕಾರ ರ್ಚಚಿಸಬೇಕು.
| ರಾಕೇಶ್ ಟಿಕಾಯತ್ ಭಾರತೀಯ ಕಿಸಾನ್ ಯೂನಿಯನ್ ನಾಯಕ
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಜಾಪ್ರಭುತ್ವವಾದಿ ಆಗಿರುವುದರಿಂದಲೇ ಮಸೂದೆ ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಕೃಷಿ ಕಾಯ್ದೆಯನ್ನು ವಿರೋಧಿಸಿರುವ ಜನರೇ ಮುಂದೆ ಪರವಾಗಿ ಮಾತನಾಡುವ ದಿನ ಬರುತ್ತದೆ.
| ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ