

ಬೆಂಗಳೂರು: ನಗರದಲ್ಲಿ ಅಪರಾಧ ನಿಯಂತ್ರಣಕ್ಕಾಗಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಶನಿವಾರ ಸಾರ್ವಜನಿಕರ ಜತೆ ಟ್ವಿಟರ್ ಸಂವಾದ ನಡೆಸಿದ್ದು, ಈ ವೇಳೆ ಸಾರ್ವಜನಿಕರಿಂದ ದೂರುಗಳ ಸುರಿಮಳೆ ಹರಿದು ಬಂದಿತು.
ಶನಿವಾರ ಮಧ್ಯಾಹ್ನ 12 ಗಂಟೆಯಿಂದ 1 ಗಂಟೆವರೆಗೆ ಸಾರ್ವಜನಿಕರ ಜತೆ ಸಂವಾದ ನಡೆಸಿದರು. ಈ ವೇಳೆ ಕೆಲ ಸಾರ್ವಜನಿಕರು ಬೈಕ್ ವ್ಹೀಲಿಂಗ್ ಹಾವಳಿಗೆ ಬ್ರೇಕ್ ಹಾಕಬೇಕು, ಮಹಿಳೆಯರ ರಕ್ಷಣೆಗೆ ಆದ್ಯತೆ ನೀಡಬೇಕು. ಹಾಗೆಯೇ ಬಿಎಂಟಿಸಿ ಬಸ್‌ಗಳಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಠಾಣೆಯಲ್ಲಿ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣ ಸಂಬಂಧ ದೂರು ನೀಡಿದರೆ, ರಾಜಿ ಮಾಡಿಕೊಳ್ಳುವಂತೆ ಪೊಲೀಸರೇ ಸಲಹೆ ನೀಡುತ್ತಾರೆ. ಈ ಬಗ್ಗೆ ಕ್ರಮಕೈಗೊಳ್ಳಿ, ಆಟೋ ಮತ್ತು ಬೈಕ್ ಸವಾರರು ಸಂಚಾರ ನಿಯಮ ಉಲ್ಲಂಘಿಸುವ ಮೂಲಕ ಇತರೆ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ಕವಿತಾ ರೆಡ್ಡಿ ಎಂಬವರು ಕೌಟುಂಬಿಕ ದೌರ್ಜನ್ಯ ಪ್ರಕರಣಗಳನ್ನು ಹೆಚ್ಚಿನ ಪೊಲೀಸರು ಅರ್ಥವೇ ಮಾಡಿಕೊಳ್ಳುವುದಿಲ್ಲ. ಯಾವಾಗಲೂ ಪತಿಯೊಂದಿಗೆ ಹೊಂದಾಣಿಕೆ ಅಥವಾ ರಾಜಿ ಮಾಡಿಕೊಳ್ಳುವಂತೆ ಹೇಳುವ ಯತ್ನ ಮಾಡುತ್ತಾರೆ ಎಂದರು.
ಕೌಟುಂಬಿಕ ದೌರ್ಜನ್ಯವನ್ನು ಏಕೆ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ? ಅಲ್ಲದೆ, ನಗರದಲ್ಲಿ ಕಾನೂನುಬಾಹಿರ ಪಿಜಿಗಳು ಕಾರ್ಯನಿರ್ವಹಿಸುತ್ತಿವೆ. ಪಿಜಿಗಳನ್ನು ಸ್ಥಾಪಿಸಲು ಪೊಲೀಸ್ ಇಲಾಖೆಯು ಮಾರ್ಗಸೂಚಿಗಳನ್ನು ಯಾವಾಗ ತರುತ್ತದೆ? ಇದರಿಂದ ಪಿಜಿಗಳಲ್ಲಿ ವಾಸವಾಗುವವರಿಗೆ ಹಾಗೂ ಆ ಪ್ರದೇಶದಲ್ಲಿ ವಾಸಿಸುವ ಜನರಿಗೆ ಸುರಕ್ಷತೆ ಒದಗಿಸಬಹುದು ಅಲ್ಲವೇ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಪೊಲೀಸ್ ಆಯುಕ್ತರು, ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ನಮ್ಮ ಪ್ರಮುಖ ಆದ್ಯತೆ, ನೀವು ಹೇಳಿದ ಅಂಶಗಳು ಪ್ರಮುಖವಾಗಿವೆ. ಅದಕ್ಕಾಗಿಯೇ ಮೊದಲ ಹಂತದಲ್ಲಿ ಕೌಟುಂಬಿಕ ದೌರ್ಜನ್ಯ ನಡೆದಾಗ ಸಂತ್ರಸ್ತರನ್ನು ತರಬೇತಿ ಪಡೆದ ಕೌನ್ಸಿಲರ್‌ಗಳ ಜತೆ ಮಾತನಾಡಿಸುತ್ತೇವೆ. ಈ ಉದ್ದೇಶಕ್ಕಾಗಿಯೇ ನಾವು ಮಕ್ಕಳ ಸಹಾಯ ವಾಣಿ ಎನ್‌ಜಿಒ ಹೊಂದಿದ್ದೇವೆ. ಸಮಾಲೋಚನೆ ವಿಫಲವಾದಾಗ ಮಾತ್ರ ನಾವು ಕ್ರಿಮಿನಲ್ ಪ್ರಕರಣವನ್ನು ಕೈಗೆತ್ತಿಕೊಳ್ಳುತ್ತೇವೆ ಮತ್ತು ತನಿಖೆ ನಡೆಸುತ್ತೇವೆ.
ಇನ್ನು ಬೆಂಗಳೂರಿನಲ್ಲಿ ನೆಲೆಸಿರುವ ಪ್ರತಿಯೊಬ್ಬ ನಾಗರಿಕನ ಸುರಕ್ಷತೆ ಹಾಗೂ ಕಾಳಜಿ ನಮ್ಮ ಆದ್ಯತೆಯಾಗಿದೆ. ನೀವು ಎತ್ತಿರುವ ಸಮಸ್ಯೆಯನ್ನು ನಾವು ಪರಿಶೀಲಿಸುತ್ತೇವೆ ಮತ್ತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಶ್ರೀಕಾಂತ್ ಎಂಬುವರು ನಗರದಲ್ಲಿ ಅನೇಕ ಆಟೋ ಚಾಲಕರು ಮತ್ತು ಬೈಕ್ ಸವಾರರು ಸಂಚಾರ ಶಿಸ್ತನ್ನು ಅನುಸರಿಸುವುದಿಲ್ಲ. ಈ ಬಗ್ಗೆ ಅವರನ್ನು ಪ್ರಶ್ನೆ ಮಾಡಿದಾಗ ಅವರು ಅಸಭ್ಯವಾಗಿ ವರ್ತಿಸುತ್ತಾರೆ. ಜಗಳಕ್ಕೆ ಬರುತ್ತಾರೆ. ಈ ಬಗ್ಗೆ ನಿಮ್ಮ ಆಲೋಚನೆಗಳು? ನಿಮ್ಮ ಕ್ರಮ ಏನು?
ಇದಕ್ಕೆ ಆಯುಕ್ತರು ಉತ್ತರಿಸಿ, ಇದು ಅವರ ನಡವಳಿಕೆಯ ವಿಷಯವಾಗಿದೆ. ದುರದೃಷ್ಟವಶಾತ್ ನಮ್ಮ ರಸ್ತೆ ಬಳಕೆದಾರರು ಲೇನ್ ಶಿಸ್ತಿನ ಪ್ರಾಮುಖ್ಯತೆಯನ್ನು ಇನ್ನೂ ಅರ್ಥಮಾಡಿಕೊಂಡಿಲ್ಲ. ನಾವು ಅವರಿಗೆ ಈ ಬಗ್ಗೆ ಅರಿವು ಮೂಡಿಸಬೇಕಿದೆ. ಇಂತಹ ಉಲ್ಲಂಘನೆಗಳಿಗೆ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಅದನ್ನು ನಾವು ಮಾಡುತ್ತಿದ್ದೇವೆ ಎಂದು ಹೇಳಿದರು.
ನವನೀತ್ ಸಿಂಗ್‌ಎಂಬುವರು ನಗರದಲ್ಲಿ ದಿನದಿಂದ ದಿನಕ್ಕೆ ರೋಡ್ ರೇಜ್ ಘಟನೆಗಳು ಹೆಚ್ಚುತ್ತಿವೆ. ಇಂತಹ ಘಟನೆಗಳು ಸಂಭವಿಸಿದಾಗ ಯಾರಾದರೂ ಸರಿ ಭಯಭೀತರಾಗುತ್ತಾರೆ ಮತ್ತು ಆಘಾತಕ್ಕೊಳಗಾಗುತ್ತಾರೆ. ಇಂತಹ ಸಂದರ್ಭಗಳಲ್ಲಿ ನಾಗರಿಕರಿಗೆ ನಿಮ್ಮ ಸಲಹೆಗಳೇನು? ಘಟನೆ ಸಂಭವಿಸಿದಾಗ ನಾವು ಏನನ್ನು ಮಾಡಬೇಕು? ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಸಿದ ಪೊಲೀಸ್ ಆಯುಕ್ತರು, ರೋಡ್ ರೇಜ್ ಘಟನೆಗಳನ್ನು ನಾವು ಅತ್ಯಂತ ಗಂಭೀರ ಸ್ವರೂಪದ ಪ್ರಕರಣ ಎಂದು ಪರಿಗಣಿಸುತ್ತೇವೆ. ಇಂತಹ ಘಟನೆಗಳು ವರದಿಯಾದಗಲ್ಲೆಲ್ಲಾ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಅಲ್ಲದೇ, ಅಂತಹ ಪುಂಡ ಪೋಕರಿಗಳ ಮೇಲೆ ನಿಗಾ ಇಡಲು ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ರೌಡಿಶೀಟರ್ ತೆರೆಯಲಾಗುತ್ತಿದೆ ಎಂದು ತಿಳಿಸಿದರು.
ಕುಮಾರ್ ಸಂಪತ್ ಸೇಠ್ ಎಂಬುವರು, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಾತ್ಮಕ ಪೋಸ್ಟ್, ಸುಳ್ಳು ಸುದ್ದಿಯನ್ನು ವ್ಯಾಪಕವಾಗಿ ಹರಡಿಸಲಾಗುತ್ತಿದೆ. ಅಂತಹ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಾತ್ಮಕ ಪೋಸ್ಟ್ ಮಾಡಿದವರ ಮೇಲೆ ಯಾವ ರೀತಿ ಕಾನೂನು ಕ್ರಮ ಕೈಗೊಳ್ಳುವಿರಿ? ಸಾರ್ವಜನಿಕರು ಅಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂದರು.
ಪೊಲೀಸ್ ಆಯುಕ್ತರು, ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲು ಪೊಲೀಸ್ ಇಲಾಖೆಯಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ ಮತ್ತು ಅವರಿಗೆ ಅವಶ್ಯ ತರಬೇತಿಯನ್ನು ನೀಡಲಾಗಿದೆ. ಪ್ರಚೋದನಾತ್ಮಕ ಅಥವಾ ಸುಳ್ಳು ಸುದ್ದಿ ಹಬ್ಬಿಸುವವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.