

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣ ಸಂಬಂಧ ಪೊಲೀಸರು ವಶಪಡಿಸಿಕೊಂಡಿರುವ ಹಣದ ಬಗ್ಗೆ ಆದಾಯ ತೆರಿಗೆ (ಐ.ಟಿ.) ಇಲಾಖೆಗೆ ಪತ್ರ ಬರೆದು ಮಾಹಿತಿ ನೀಡಿದ್ದು, ಆರೋಪಿ ನಟ ದರ್ಶನ್‌ಗೆ ಐ.ಟಿ. ಸಂಕಷ್ಟ ಶುರುವಾಗಲಿದೆ.
ರೇಣುಕಸ್ವಾಮಿಯ ಶವ ವಿಲೇವಾರಿಗೆ ನಟ ದರ್ಶನ್ ೩೦ ಲಕ್ಷ ರೂ. ಡೀಲ್ ಕೊಟ್ಟಿದ್ದರು ಎಂಬ ಆರೋಪವಿದೆ. ಅಲ್ಲದೆ, ಪೊಲೀಸರು ಆರೋಪಿಗಳ ಮನೆಯಲ್ಲಿ ಲಕ್ಷಾಂತರ ರೂ.ನಗದು ವಶಪಡಿಸಿಕೊಂಡಿದ್ದರು. ಈ ಹಣದ ಮೂಲದ ಬಗ್ಗೆ ತನಿಖೆ ಮಾಡುವಂತೆ ಪೊಲೀಸರು ಐ.ಟಿ. ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ನಿಯಮದ ಪ್ರಕಾರ ಒಬ್ಬ ವ್ಯಕ್ತಿ ೨ ಲಕ್ಷ ರೂ. ನಗದು ಹೊಂದಲು ಮಾತ್ರ ಅವಕಾಶವಿದೆ. ಅಲ್ಲದೆ, ಯಾವುದೇ ಅಪರಾಧ ಪ್ರಕರಣದಲ್ಲಿ ೧೦ ಲಕ್ಷಕ್ಕೂ ಹೆಚ್ಚು ನಗದು ಜಪ್ತಿ ಮಾಡಿದರೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕೆಂಬ ನಿಯಮವಿದೆ. ಹೀಗಾಗಿ, ಪೊಲೀಸರು ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದು ಹಣ ವಶಪಡಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಆರ್.ಆರ್.ನಗರದ ದರ್ಶನ್ ಮನೆಯಲ್ಲಿ ಜೂ.೧೯ರಂದು ಶೋಧ ನಡೆಸಿ ೩೭.೪೦ ಲಕ್ಷ ರೂ. ವಶಪಡಿಸಿಕೊಂಡಿದ್ದರು. ದರ್ಶನ್‌ರ ಪತ್ನಿ ವಿಜಯಲಕ್ಷ್ಮಿ ಅವರು ೩ ಲಕ್ಷ ರೂ.ಗಳನ್ನು ಪೊಲೀಸರ ವಶಕ್ಕೆ ನೀಡಿದ್ದರು. ಕೊಲೆ ನಡೆದ ಬಳಿಕ ೩ ಲಕ್ಷ ರೂ. ಹಣವನ್ನು ದರ್ಶನ್, ಪತ್ನಿ ವಿಜಯಲಕ್ಷ್ಮಿ ಅವರಿಗೆ ಕೊಡುವಂತೆ ತಮ್ಮ ಸಹಾಯಕರ ಮೂಲಕ ಕಳುಹಿಸಿದ್ದರು. ಆ ಹಣವನ್ನು ವಿಜಯಲಕ್ಷ್ಮಿ ಅವರು ವಿಚಾರಣೆ ವೇಳೆ ತನಿಖಾಧಿಕಾರಿಗಳ ವಶಕ್ಕೆ ಒಪ್ಪಿಸಿದ್ದರು. ಇತರೆ ಆರೋಪಿಗಳ ಮನೆಯಲ್ಲಿ ಉಳಿದ ಹಣ ಜಪ್ತಿಯಾಗಿತ್ತು. ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಗದು ವಹಿವಾಟು ನಡೆದಿರುವ ಹಿನ್ನೆಲೆಯಲ್ಲಿ ಐಟಿ ಎಂಟ್ರಿ ಕೊಟ್ಟು ಹಣದ ಮೂಲದ ಬಗ್ಗೆ ತನಿಖೆ ನಡೆಸಲಿದೆ.
ಇನ್‌ಸ್ಟಾಗ್ರಾಂ ನೆರವು ಕೋರಿದ ಖಾಕಿ:
ಕೊಲೆ ಪ್ರಕರಣ ಸಂಬಂಧ ಈವರೆಗೆ ೧೬೦ಕ್ಕೂ ಹೆಚ್ಚು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಮತ್ತಷ್ಟು ಸಾಕ್ಷ್ಯ ಕಲೆಹಾಕಲು ಆರೋಪಿಗಳ ಮೊಬೈಲ್ಗಳನ್ನು ಪರಿಶೀಲಿಸಲಾಗುತ್ತಿದೆ. ಆದರೆ, ಇದಕ್ಕೆ ಕೆಲ ಅಡೆತಡೆ ಎದುರಾಗಿವೆ. ಮೃತ ರೇಣುಕಸ್ವಾಮಿ ಮತ್ತು ಆರೋಪಿ ರಾಘು ಮೊಬೈಲ್ ಅನ್ನು ನಾಶಪಡಿಸಲಾಗಿದೆ. ಪವಿತ್ರಾ, ದರ್ಶನ್, ಪ್ರದೋಷ್, ವಿನಯ್ ಸೇರಿದಂತೆ ಕೆಲ ಆರೋಪಿಗಳು ತಮ್ಮ ಮೊಬೈಲ್ಗಳಲ್ಲಿನ ದತ್ತಾಂಶವನ್ನು ಅಳಿಸಿ ಹಾಕಿದ್ದಾರೆ. ಹೀಗಾಗಿ, ಪೊಲೀಸರು ಕೆಲ ಸಂಸ್ಥೆಗಳ ತಾಂತ್ರಿಕ ನೆರವು ಕೋರಿ ಪತ್ರ ಬರೆದಿದ್ದಾರೆ. ರೇಣುಕಸ್ವಾಮಿ, ಪವಿತ್ರಾಗೌಡರಿಗೆ ಕಳುಹಿಸಿದ್ದ ಅಶ್ಲೀಲ ಸಂದೇಶವೇ ಕೊಲೆಗೆ ಪ್ರಮುಖ ಕಾರಣವೆಂದು ಗೊತ್ತಾಗಿದೆ. ಆದರೆ, ರೇಣುಕಸ್ವಾಮಿಯ ಮೊಬೈಲ್ ನಾಶವಾಗಿರುವ ಕಾರಣ ಆತ ಪವಿತ್ರಾಗೌಡಗೆ ಏನು ಸಂದೇಶ ಕಳುಹಿಸಿದ್ದ ಎಂಬುದು ತಿಳಿದುಬಂದಿಲ್ಲ. ಈ ಕಾರಣಕ್ಕೆ ಪೊಲೀಸರು ಇನ್‌ಸ್ಟಾಗ್ರಾಂ ಸಂಸ್ಥೆಗೆ ಪತ್ರ ಬರೆದು, ತನಿಖೆಗೆ ನೆರವು ಕೇಳಿದ್ದಾರೆ. ರೇಣುಕಾಸ್ವಾಮಿ ಇನ್‌ಸ್ಟಾಗ್ರಾಂ ಮೂಲಕವೇ ಸಂದೇಶ ಕಳುಹಿಸಿದ್ದು, ಆ ಸಂದೇಶ ಏನೆಂದು ತಿಳಿಸುವಂತೆ ಪೊಲೀಸರು ಇನ್‌ಸ್ಟಾಗ್ರಾಂ ಸಂಸ್ಥೆಯನ್ನು ಕೋರಿದ್ದಾರೆ.
ಮಹಿಳಾ ಎಸ್‌ಐಗೆ ನೋಟಿಸ್:
ಆರೋಪಿ ಪವಿತ್ರಾಗೌಡಗೆ ಪೊಲೀಸ್ ಕಸ್ಟಡಿಯಲ್ಲಿದ್ದ ವೇಳೆ ಮೇಕ್‌ಅಪ್ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಿ ಕರ್ತವ್ಯ ಲೋಪ ತೋರಿದ ವಿಜಯನಗರ ಠಾಣೆಯ ಮಹಿಳಾ ಸಬ್ ಇನ್‌ಸ್ಪೆಕ್ಟರ್‌ಗೆ ನೋಟಿಸ್ ಜಾರಿ ಮಾಡಲಾಗಿದೆ.
ಜೂ.೧೫ರಂದು ಪವಿತ್ರಾಗೌಡರನ್ನು ಪ್ರಕರಣ ಸಂಬಂಧ ಸ್ಥಳ ಮಹಜರಿಗಾಗಿ ಆರ್.ಆರ್.ನಗರದಲ್ಲಿನ ಅವರ ಮನೆಗೆ ಕರೆದೊಯ್ಯಲಾಗಿತ್ತು. ಮಹಜರು ಪ್ರಕ್ರಿಯೆ ನಡುವೆ ಪವಿತ್ರಾ ಅವರು ಲಿಪ್‌ಸ್ಟಿಕ್ ಹಚ್ಚಿಕೊಂಡು ಮೇಕ್‌ಅಪ್ ಮಾಡಿಕೊಂಡಿದ್ದರು. ಇದಕ್ಕೆ ಮಹಿಳಾ ಸಬ್‌ಇನ್‌ಸ್ಪೆಕ್ಟರ್ ಅವಕಾಶ ನೀಡಿದ್ದರು.
ಮಹಜರು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಪವಿತ್ರಾ ಅವರು ಲಿಪ್‌ಸ್ಟಿಕ್ ಹಾಕಿಕೊಂಡು ಹಸನ್ಮುಖಿಯಾಗಿ ನಗುತ್ತಾ ಮನೆಯಿಂದ ಹೊರಬಂದಿದ್ದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಆರೋಪಿ ಪವಿತ್ರಾ ಮೊಗದಲ್ಲಿ ತಪ್ಪಿತಸ್ಥ ಭಾವನೆ ತೋರದಿದ್ದದ್ದು ಚರ್ಚೆಗೆ ಕಾರಣವಾಗಿತ್ತು. ಜತೆಗೆ, ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್, ಕರ್ತವ್ಯ ನಿರ್ಲಕ್ಷ್ಯ ತೋರಿದ ಮಹಿಳಾ ಸಬ್ ಇನ್‌ಸ್ಪೆಕ್ಟರ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ.
ಆರೋಪಿ ಪವಿತ್ರಾಗೌಡ ಅವರನ್ನು ವಿಚಾರಣೆ ನಡೆಸಿದ ನಂತರ ಪ್ರತಿರಾತ್ರಿ ಮಡಿವಾಳದಲ್ಲಿರುವ ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ಇರಿಸಲಾಗುತ್ತಿತ್ತು. ಅಲ್ಲಿ ಅವರು ಮೇಕಪ್ ಬ್ಯಾಗ್ ಅನ್ನು ಇಟ್ಟುಕೊಂಡಿದ್ದರು. ಮಹಿಳಾ ಪಿಎಸ್‌ಐಯೊಬ್ಬರು ಪ್ರತಿದಿನ ಅವರನ್ನು ಕರೆದುಕೊಂಡು ಎ.ಪಿ ನಗರ ಠಾಣೆ ಕರೆದುಕೊಂಡು ಬರುತ್ತಿದ್ದರು. ಈ ಮೇಕಪ್ ಮಾಡಿಕೊಳ್ಳುವುದನ್ನು ತಡೆಯದೇ ಮತ್ತು ನಿರ್ಲಕ್ಷ್ಯ ತೋರಿರುವ ಆರೋಪದ ಹಿನ್ನೆಲೆಯಲ್ಲಿ ಮಹಿಳಾ ಪಿಎಸ್‌ಐಗೆ ನೋಟಿಸ್ ನೀಡಿ ವಿವರಣೆ ಕೇಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ಪಿಸ್ತೂಲ್ ಜಪ್ತಿ:
ಆರೋಪಿಗಳಾದ ನಟ ದರ್ಶನ್ ಮತ್ತು ಪ್ರದೂಷ್ ಬಳಿ ಲೈಸೆನ್ಸ್ ಇರುವ ಎರಡು ಪಿಸ್ತೂಲ್ಗಳು ಇದ್ದು ಲೋಕಾಸಭಾ ಚುನಾವಣೆಯ ವೇಳೆ ಅದನ್ನು ಠಾಣೆಗೆ ಒಪ್ಪಿಸದೇ ವಿನಾಯಿತಿ ಪಡೆದಿರುವುದು ಬೆಳಕಿಗೆ ಬಂದಿದೆ. ಈ ಎರಡು ಪಿಸ್ತೂಲ್ಗಳನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.