

ಬೆಂಗಳೂರು: ರಾಜಕೀಯ ದ್ವೇಷ ಸಾಧಿಸಲು ಪೊಲೀಸರನ್ನು ಕಾಂಗ್ರೆಸ್ ಸರ್ಕಾರ ಬಳಸಿಕೊಳ್ಳುತ್ತಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷದ ಕಚೇರಿಗಳಾಗಿ ಪೊಲೀಸ್ ಠಾಣೆಗಳು ಪರಿವರ್ತನೆಯಾಗಿವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.
ಬೆಂಗಳೂರಿನ ಬಿ.ಆರ್.ಅಂಬೇಡ್ಕರ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಈ ಘಟನೆ ನಮ್ಮ ಕಾರ್ಯಕರ್ತರಿಗೆ ನೋವು ತಂದಿದೆ ಎಂದರು.
ವಿನಯ್ ಒಳ್ಳೆಯ ವಿದ್ಯಾವಂತ, ಪತ್ನಿ ಸಾಫ್ಟ್‌ವೇರ್ ಇಂಜಿನಿಯರ್. 2-3 ತಿಂಗಳಿಂದ ಎಸ್ಪಿ ಮೂಲಕ ಕಾಂಗ್ರೆಸ್ ಶಾಸಕರು, ಶಾಸಕರ ಆಪ್ತ ತೆನ್ನೀರ ಮಹಿನಾ ಕಿರುಕುಳ ನೀಡಿದ್ದಾರೆ. ಶಾಸಕ ಧಮ್ಕಿ ಹಾಕಿದ್ದನ್ನು ಡೆತ್ ನೋಟ್ನಲ್ಲಿ ಉಲ್ಲೇಖ ಮಾಡಿದ್ದಾರೆ. ವಿನಯ್ ಮಡಿಕೇರಿ ಬಿಟ್ಟು ಬೆಂಗಳೂರಿನ ಮನೆಗೆ ಬಂದರೂ ಪೊಲೀಸರು ಕಿರುಕುಳ ಕೊಟ್ಟಿದ್ದಾರೆ ಎಂದು ಆರ್.ಅಶೋಕ್ ದೂರಿದರು.
ಪೊಲಿಷರನ್ನು ರಾಜಕೀಯ ದ್ವೇಷ ತೀರಿಸಿಕೊಳ್ಳಲು ಬಳಸಿಕೊಳುತ್ತಿದ್ದಾರೆ. ಸಿಎಂ ಪದಕ ಲಭಿಸಿದ ಪೊಲೀಸ್ ಮೇಲೆ ಲೋಕಾಯುಕ್ತ ದಾಳಿ ಆಗಿದೆ. ಬಡ್ತಿ, ವರ್ಗಾವಣೆ ಇತ್ಯಾದಿ ಕಾರಣಗಳಿಗಾಗಿ ಪೊಲೀಸರು ಕಾಂಗ್ರೆಸ್ ಪಕ್ಷದ ಆಣತಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದರು.
ವಿನಯ್ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕ್ರಮ ಆಗಬೇಕು, ಅದಕ್ಕಾಗಿ ಸೂಕ್ತ ತನಿಖೆ ಆಗಬೇಕು. ಕೊಡಗು ಎಸ್ಪಿ ಅಮಾನತು ಆಗಬೇಕು. ನಾಳೆ ನಮ್ಮ ಹೋರಾಟದ ಬಗ್ಗೆ ತೀರ್ಮಾನ ಪಡೆಯುತ್ತೇವೆ. ತೆನ್ನೀರಾ, ಪೊನ್ನಣ್ಣ, ಮಂತರ್ ಗೌಡ ವಿರುದ್ಧ ದೂರು ನೀಡಿದ್ದೇವೆ ಎಂದು ಆರ್.ಅಶೋಕ್ ಹೇಳಿದರು.