

ಮಂಡ್ಯ: ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡಲು ಹಗಲಿರುಳು ಕಾರ್ಯನಿರ್ವಹಿಸುವ ಪೊಲೀಸರ ಕಾರ್ಯದೊತ್ತಡ ಕಡಿಮೆಯಾಗಲು ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸಹಕಾರಿ ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿದರು.
ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಮಾತನಾಡಿದರು. ಉತ್ತಮ ಸಮಾಜದ ಅಭ್ಯುದಯಕ್ಕಾಗಿ ಪೊಲೀಸರು ಶ್ರಮಿಸುತ್ತಾರೆ. ಸಭೆ, ಸಮಾರಂಭ, ಮುಷ್ಕರ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳ ರಕ್ಷಣೆಗಾಗಿ ಹಬ್ಬ-ಹರಿದಿನಗಳಲ್ಲೂ ಕುಟುಂಬವನ್ನು ಬಿಟ್ಟು ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಕಾರ್ಯ ನಿರ್ವಹಿಸುತ್ತಾರೆ. ಇಂತಹವರಿಗೆ ಪ್ರತಿ ವರ್ಷ ವಾರ್ಷಿಕ ಕ್ರೀಡಾಕೂಟ ಆಯೋಜನೆ ಮಾಡುವುದು ಶ್ಲಾಘನೀಯ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ಸೋಲು-ಗೆಲುವಿಗೆ ಧೃತಿಗೆಡದೆ ಹುಮ್ಮಸ್ಸು ವೃದ್ಧಿಗೆ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ರೀಡಾ ಉದ್ಘಾಟಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಜಿ.ರಮಾ ಮಾತನಾಡಿ, ಕಾನೂನಿನ ನಿರ್ವಹಣೆ ಹಾಗೂ ಹೊಣೆಗಾರಿಕೆಯ ಶ್ರಮ ಕಾನೂನು ಮತ್ತು ಪೊಲೀಸ್ ಇಲಾಖೆಯ ಮೇಲಿರುತ್ತದೆ. ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಹೊಣೆಗಾರಿಕೆಯೂ ಒಮ್ಮೊಮ್ಮೆ ನಮ್ಮದಾಗುತ್ತದೆ. ಹಗಲಿರುಲೆನ್ನದೆ, ಸಂಭ್ರಮ ಸಡಗರದಲ್ಲಿ ಪಾಲ್ಗೊಳ್ಳದೆ ಅಪರಾಧ ಚಟುವಟಿಕೆ ನಿಯಂತ್ರಣ ಹಾಗೂ ಆರೋಪಿಗಳ ಪ್ರಕರಣ ದಾಖಲಿಸಲು ಕಾರ್ಯ ನಿರ್ವಹಿಸುವ ಹೊಣೆಗಾರಿಕೆ ನಮ್ಮದಾಗಿದೆ ಎಂದರು.
ಕಾನೂನು ಇಲಾಖೆಯ ನನ್ನ 26 ವರ್ಷಗಳ ಸೇವೆಯಲ್ಲಿ ಇಂತಹ ಒತ್ತಡಗಳನ್ನು ಕಂಡಿದ್ದೇನೆ. ಒತ್ತಡವನ್ನು ಸರಿದೂಗಿಸುವ ಸದುದ್ದೇಶದಿಂದ ಕ್ರೀಡೆ ಆಯೋಜನೆ ಸೂಕ್ತವಾಗಿದೆ. ದೈಹಿಕ ಹಾಗೂ ಮಾನಸಿಕ ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿ. ಶಿಸ್ತು ಮೈಗೂಡಬೇಕಾದರೆ ಪ್ರತಿಯೊಬ್ಬರಿಗೂ ಕ್ರೀಡೆ ಅವಶ್ಯಕವಾಗಿದ್ದು, ಸೋಲನ್ನು ಗೆಲುವಿನಂತೆ ಸಂಭ್ರಮಿಸುವ ಅಭಿರುಚಿ ಬೆಳೆಸಿಕೊಳ್ಳೋಣ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಪೊಲೀಸ್ ವರಿಷ್ಠಾಧಿಕಾರಿ ವೇಣುಗೋಪಾಲ್ ಇದ್ದರು.