

ಲಖನೌ: ಚಪ್ಪಲಿಯಿಂದ ಸುಟ್ಟುಕರಲಾದ ಮೃತದೇಹದ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ ಘಟನೆ ಉತ್ತರಪ್ರದೇಶದ ಲಖನೌದಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ದುರ್ಗೇಶ್ ಎಂಬ ಆರೋಪಿಯನ್ನು ಬಂಧಿಸಲಾಗಿದ್ದು, ಸನ್ನಿ(32) ಎಂಬಾತಣೇ ಮೃತ ದುರ್ದೈವಿಯಾಗಿದ್ದಾನೆ. ಸನ್ನಿ ಬ್ಯಾಂಕ್‌ವೊಂದಕ್ಕೆ 1 ಲಕ್ಷ ರೂ. ಠೇವಣಿ ಇಡಲು ತೆರಳಿದ್ದ. ಆದರೆ ಸಂಜೆಯಾದರೂ ಮನೆಗೆ ಹಿಂತಿರುಗಿರಲಿಲ್ಲ. ತಡವಾಗಿಯಾದರೂ ಮನೆಗೆ ಬಾರದಿದ್ದಾಗ ಆತನಿಗಾಗಿ ಹುಡುಕಾಟ ನಡೆಸಿದ ಆತನ ತಂದೆ ಅವಧೇಶ್ ಸಿಂಗ್ ಹಾಗೂ ಕುಟುಂಬಸ್ಥರು ದಿಕ್ಕು ತೋಚದೆ ಸುಮ್ಮನಾಗಿದ್ದರು. ಈ ವೇಳೆ ಗ್ರಾಮದ ಹೊರವಲಯದ ಬಳಿ ಆತ ಬೈಕ್ ಬಿಟ್ಟು ಹೋಗಿರುವುದಾಗಿ ತಿಳಿದು ಬಂದಿದೆ.
ಕೂಡಲೇ ಕುಟುಂಬಸ್ಥರು ಏನಾದರೂ ಅನಾಹುತ ಸಂಭವಿಸಿದೆ ಎಂದು ಹೆದರಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಈ ಕುರಿತು ತನಿಖೆ ನಡೆಸಿದ್ದು, ತಡರಾತ್ರಿ ಬಿಜ್ನೋರ್ ರಸ್ತೆಯ ಕಾಡಿನಲ್ಲಿ ಭಾಗಶಃ ಸುಟ್ಟ ಸ್ಥಿತಿಯಲ್ಲಿ ಶವವೊಂದನ್ನು ಪತ್ತೆ ಹಚ್ಚಿದ್ದರು. ಅದಲ್ಲದೇ ಮೃತದೇಹದ ಬಳಿ ಬಿದ್ದಿದ್ದ ಚಪ್ಪಲಿಗಳನ್ನು ಸಹ ವಶಕ್ಕೆ ತೆಗೆದುಕೊಂಡಿದ್ದರು. ಬಳಿಕ ಮನೆಗಯವರಿಗೆ ಈ ಕುರಿತು ಸುದ್ದಿ ಮುಟ್ಟಿಸಿದಾಗ, ಮೃತದೇಹ ಸನ್ನಿಯದೇ ಎಂದು ತಿಳಿದು ಬಂದಿದೆ.
ಘಟನೆ ಹಿನ್ನೆಲೆ:
ಸನ್ನಿ ಆಗಸ್ಟ್ 9ರಂದು ಮನೆಯಿಂದ ಹೊರಟಿದ್ದು ದಾರಿ ಮಧ್ಯೆ ತನ್ನ ಸ್ನೇಹಿತ ದುರ್ಗೇಶ್‌ನನ್ನು ಬ್ಯಾಂಕ್ಗೆ ಕರೆದುಕೊಂಡು ಹೋಗಿದ್ದ. ಇಡೀ ದಿನ ಇಬ್ಬರೂ ಒಟ್ಟಿಗೆ ಇದ್ದು, ಮಧ್ಯಾಹ್ನದ ವೇಳೆಗೆ ಸನ್ನಿ ಹಾಗೂ ಆರೋಪಿಯು ಮದ್ಯ ಸೇವಿಸಿ ಧಾಬಾದಲ್ಲಿ ಊಟ ಮಾಡಿದ್ದರು. ಈ ವೇಳೆ ದುರ್ಗೇಶ್ನ ಕಣ್ಣು ಸ್ನೇಹಿತನ ಹಣದ ಮೇಲೆ ಬಿದ್ದಿದ್ದು, ದುರಾಸೆಗೆ ಒಳಗಾಗಿ ಆತನನ್ನು ಕೊಂದಿದ್ದಾನೆ.
ಬಳಿಕ ಸನ್ನಿ ಗುರುತು ಮರೆಮಾಚಲು ಆರೋಪಿಯು ಬೈಕ್ನಲ್ಲಿದ್ದ ಪೆಟ್ರೋಲ್ ತೆಗೆದುಕೊಂಡು ಸನ್ನಿಯ ಮೈಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ಆತನ ಬಳಿಯಿದ್ದ ಹಣವನ್ನು ಕದ್ದು ಪರಾರಿಯಾಗಿದ್ದಾನೆ. ಸ್ಥಳದಲ್ಲಿ ಸಿಕ್ಕ ಚಪ್ಪಲಿಯಿಂದ ಸನ್ನಿಯನ್ನು ಗುರುತಿಸಿದ ಪೊಲೀಸರು ನಂತರ ದುರ್ಗೇಶ್‌ನನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್)