ಉದಯನಿಧಿ ಸ್ಟಾಲಿನ್ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬೇಕಿತ್ತು : ಮದ್ರಾಸ್​ ಹೈಕೋರ್ಟ್

madras high court
Published on

ಚೆನ್ನೈ: ಸನಾತನ ನಿರ್ಮೂಲನಾ ಸಮಾವೇಶದಲ್ಲಿ ಸಚಿವರಾದ ಉದಯನಿಧಿ ಸ್ಟಾಲಿನ್ ಮತ್ತು ಶೇಖರ್ ಬಾಬು ಆಡಿದ ಧರ್ಮ ನಿರ್ಮೂಲನೆ ಮಾತುಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕಿತ್ತು ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿತು.

ತಿರುವೆಕಾಡುವಿನ ಮಹೇಶ್ ಕಾರ್ತಿಕೇಯನ್ ಎಂಬುವರು ದ್ರಾವಿಡ ತತ್ವದ ವಿರುದ್ಧ ಸಭೆ ನಡೆಸಲು ಅನುಮತಿ ಕೋರಿ ಮದ್ರಾಸ್ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಚಂದ್ರ ಅವರು, ಸನಾತನ ನಿರ್ಮೂಲನಾ ಸಮಾವೇಶದಲ್ಲಿ ತಮಿಳುನಾಡು ಸಚಿವರು ಭಾಗವಹಿಸಿದ್ದರಿಂದ ದ್ರಾವಿಡ ತತ್ವಕ್ಕೆ ವಿರುದ್ಧವಾಗಿ ಸಭೆ ನಡೆಸಲು ಅನುಮತಿ ಕೋರಿ ಈಗ ಮೊಕದ್ದಮೆ ಹೂಡಲು ಸಾಧ್ಯವಾಗಿದೆ.

ಸನಾತನ ಧರ್ಮ ನಿರ್ಮೂಲನಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ತಮಿಳುನಾಡು ಸಚಿವರ ವಿರುದ್ಧ ಕ್ರಮ ಕೈಗೊಳ್ಳದಿರುವುದು ಪೊಲೀಸರು ಕರ್ತವ್ಯ ನಿರ್ಲಕ್ಷಿಸಿದಂತೆ ಎಂದು ಅಭಿಪ್ರಾಯಪಟ್ಟ ನ್ಯಾಯಾಧೀಶರು, ಇಬ್ಬರೂ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಅಧಿಕಾರದಲ್ಲಿರುವವರು ನಿರ್ದಿಷ್ಟ ನೀತಿಯನ್ನು ರದ್ದುಗೊಳಿಸುವ ಬಗ್ಗೆ ಮಾತನಾಡುವ ಬದಲು ಮದ್ಯ ಸೇರಿದಂತೆ ಮಾದಕ ದ್ರವ್ಯಗಳನ್ನು ರದ್ದುಗೊಳಿಸುವತ್ತ ಗಮನ ಹರಿಸಬಹುದು ಎಂದು ಅವರು ಹೇಳಿದರು.

ವಿವಿಧತೆಯಲ್ಲಿ ಏಕತೆ ಭಾರತದ ಅಸ್ಮಿತೆ ಎಂದೂ ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ. ಧರ್ಮ ಅಥವಾ ಸಿದ್ಧಾಂತದ ವಿರುದ್ಧ ಮಾತನಾಡುವ ಮೂಲಕ ಕಾನೂನು ಸುವ್ಯವಸ್ಥೆ ಸಮಸ್ಯೆ ಸೃಷ್ಟಿಸಲು ನ್ಯಾಯಾಲಯ ಅವಕಾಶ ನೀಡುವುದಿಲ್ಲ ಎಂದು ಹೇಳಿದ ನ್ಯಾಯಮೂರ್ತಿ ಜಯಚಂದ್ರ, ಮಹೇಶ್ ಕಾರ್ತಿಕೇಯನ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net