ಹಲ್ದ್ವಾನಿ ಹಿಂಸಾಚಾರ: ಮಾಸ್ಟರ್ ಮೈಂಡ್ ಸೇರಿದಂತೆ 9 ಆರೋಪಿಗಳ ನಿವಾಸಗಳು ಪೊಲೀಸರ ವಶಕ್ಕೆ!

Untitled design - 2024-02-17T205552.264
Published on

ಉತ್ತರಾಖಂಡ: ಕಳೆದ ವಾರ ಉತ್ತರಾಖಂಡದ ಹಲ್ದ್ವಾನಿಯಲ್ಲಿ ಅಧಿಕಾರಿಗಳು ಅಕ್ರಮ ಮದರಸಾವನ್ನು ಧ್ವಂಸಗೊಳಿಸಿದ ಬೆನ್ನಲ್ಲೇ ಸ್ಥಳೀಯ ಪ್ರದೇಶದಲ್ಲಿ ಪೊಲೀಸರ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದರು. ಭುಗಿಲೆದ್ದ ಹಿಂಸಾಚಾರದಲ್ಲಿ 100ಕ್ಕೂ ಹೆಚ್ಚು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದರು. ಇದರ ಬೆನ್ನಲ್ಲೇ ಕಠಿಣ ಕ್ರಮ ಕೈಗೊಂಡ ಪೊಲೀಸ್ ಅಧಿಕಾರಿಗಳು ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ.

ಕೋಮುಗಲಭೆಯಲ್ಲಿ ಭಾಗಿಯಾದ ಆರೋಪಿಗಳ ಮನೆಗಳನ್ನು ಸದ್ಯ ಹಲ್ದ್ವಾನಿ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದು, ಅದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿವೆ. ಇತ್ತೀಚೆಗೆ, ಸಿವಿಲ್ ನ್ಯಾಯಾಲಯವು ಆಪಾದಿತ ಮಾಸ್ಟರ್ ಮೈಂಡ್ ಅಬ್ದುಲ್ ಮಲಿಕ್ ಸೇರಿದಂತೆ ಒಂಬತ್ತು ಜನರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಆದೇಶಿಸಿತು.

ಹಲ್ದ್ವಾನಿ ಜಿಲ್ಲಾಡಳಿತ ನಡೆಸಿದ ಅತಿಕ್ರಮಣ ಅಭಿಯಾನದಿಂದ ಫೆಬ್ರವರಿ 8ರಂದು ಜಿಲ್ಲೆಯಲ್ಲಿ ಸಂಭವಿಸಿದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಎಲ್ಲಾ ಒಂಬತ್ತು ವ್ಯಕ್ತಿಗಳನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ. ಈವರೆಗೆ 30 ಮಂದಿಯನ್ನು ಬಂಧಿಸಲಾಗಿದ್ದು, ಸಿಆರ್‌ಪಿಸಿಯ ಸೆಕ್ಷನ್ 82 ಮತ್ತು 83ರ ಅಡಿಯಲ್ಲಿ ಎಲ್ಲಾ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ಅನುಮತಿ ನೀಡಿದೆ. ಸಿವಿಲ್ ನ್ಯಾಯಾಲಯವು ಎಲ್ಲಾ ಒಂಬತ್ತು ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದೆ.

ಹಿಂಸಾಚಾರದ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದ್ದು, ಆಯುಕ್ತರು 15 ದಿನಗಳಲ್ಲಿ ತಮ್ಮ ವರದಿಯನ್ನು ಸಲ್ಲಿಸಲಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net