

ನವದೆಹಲಿ: ಫ್ಲೈಓವರ್ನ ರೈಲಿಂಗ್ ಮೇಲೆ ನಿಂತು ಆತ್ಮಹತ್ಯೆಗೆ ತಯಾರಾಗಿದ್ದ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ರಕ್ಷಿಸಿದ್ದಾರೆ. ಭಾನುವಾರ ಸಂಜೆ ನವದೆಹಲಿಯ ಆಂಡ್ರೂಸ್ ಗಂಜ್ ಫ್ಲೈಓವರ್ ಬಳಿ ಪಾಟ್ರೋಲಿಂಗ್ ಡ್ಯೂಟಿಯಲ್ಲಿದ್ದ ಪೊಲೀಸರ ಚಾಕಚಕ್ಯತೆಯ ಕಾರ್ಯಾಚರಣೆಯಿಂದಾಗಿ ದುರ್ಘಟನೆ ಸಂಭವಿಸುವುದು ತಪ್ಪಿದೆ.
ಸೆಪ್ಟೆಂಬರ್ 12 ರಂದು ಸಂಜೆ 6 ಗಂಟೆಗೆ, ಕೋತ್ಲಾ ಮುಬಾರಕ್ಪುರ್ ಪೊಲೀಸರಿಗೆ ಮಧ್ಯವಯಸ್ಕ ಪುರುಷನೊಬ್ಬ ಫ್ಲೈಓವರ್ ಮೇಲೆ ಹತ್ತಿ, ಜಿಗಿದು ಸಾಯುವುದಾಗಿ ಕೂಗಿಕೊಳ್ಳುತ್ತಿದ್ದ ಸುಳಿವು ಬಂತು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡದ ಕೆಲವು ಸದಸ್ಯರು ಫ್ಲೈಓವರ್ ಕೆಳಗಡೆ ನೆಟ್ ಹಿಡಿದು ನಿಂತರೆ, ಮತ್ತೆ ಕೆಲವರು ಅವನನ್ನು ತಡೆಯಲು ಫ್ಲೈಓವರ್ ಮೇಲಕ್ಕೆ ಹೋದರು. ತನಗೆ ಜೀವನದಲ್ಲಿ ಬೇಸರವಾಗಿದೆ ಎಂದು ಹೇಳುತ್ತಿದ್ದ ಆ ವ್ಯಕ್ತಿಯ ಮನವೊಲಿಸುತ್ತಲೇ ಪೊಲೀಸ್ ಪೇದೆಯೊಬ್ಬರು ಆತನನ್ನು ಬಿಗಿಯಾಗಿ ಹಿಡಿದುಕೊಂಡು ಕೆಳಗಿಳಿಸಿಕೊಂಡರು ಎನ್ನಲಾಗಿದೆ.
ಪೊಲೀಸರಿಂದ ರಕ್ಷಿಸಲ್ಪಟ್ಟ 42 ವರ್ಷ ವಯಸ್ಸಿನ ಪುರುಷನು, ಉತ್ತರಾಖಂಡದ ಅಲ್ಮೋರಾದ ನಿವಾಸಿ ಜಗತ್ ಸಿಂಗ್ ಬಿಷ್ಟ್ ಎಂಬುದಾಗಿ ಗುರುತಿಸಲ್ಪಟ್ಟಿದ್ದಾನೆ. ಹಾಲಿ ಹೌಜ್ ಖಾಸ್ನಲ್ಲಿ ವಾಸಿಸುತ್ತಿದ್ದ ಆತನನ್ನು ಕುಟುಂಬದವರಿಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)