ಜೆಎನ್​ಯು ಹಿಂಸಾಚಾರ|ಕ್ಯಾಂಪಸ್ ತಲುಪುವಾಗ ತಡವಾಗಿರಲಿಲ್ಲ ಎಂದು ಸಮಜಾಯಿಷಿ ನೀಡಿದ ಪೊಲೀಸ್

Randhava 6 JAN 20
Published on

ನವದೆಹಲಿ: ಜವಾಹರ ಲಾಲ್ ನೆಹರು ಯೂನಿವರ್ಸಿಟಿ ಕ್ಯಾಂಪಸ್​​ನಲ್ಲಿ ಹಿಂಸಾಚಾರ ನಡೆದ ಸಂದರ್ಭದಲ್ಲಿ ಸ್ಥಳಕ್ಕೆ ಪೊಲೀಸರು ತಲುಪುವಾಗ ತಡವಾಗಿತ್ತು ಎಂಬ ಆರೋಪವನ್ನು ದೆಹಲಿ ಪೊಲೀಸರು ನಿರಾಕರಿಸಿದ್ದಾರೆ.

ಕ್ಯಾಂಪಸ್​ನಲ್ಲಿ ಹಿಂಸಾಚಾರ ಭುಗಿಲೇಳುತ್ತಿದ್ದಂತೆ ವಿದ್ಯಾರ್ಥಿ ಸಂಘಟನೆಗಳು, ಅನೇಕ ವಿದ್ಯಾರ್ಥಿಗಳು ಪೊಲೀಸರಿಗೆ ಕರೆ ಮಾಡಿದ್ದರು.ಆದರೆ ಪೊಲೀಸರು ನಿರ್ಲಕ್ಷಿಸಿದ್ದಲ್ಲದೆ, ಸ್ಥಳಕ್ಕೆ ತಲುಪುವಲ್ಲಿ ವಿಳಂಬ ಮಾಡಿದರು ಎಂಬ ಆರೋಪ ವ್ಯಾಪಕವಾಗಿ ಕೇಳುತ್ತಿರುವ ಕಾರಣ ದೆಹಲಿ ಪೊಲೀಶರು ಸೋಮವಾರ ಸ್ಪಷ್ಟೀಕರಣ ನೀಡಿದ್ದಾರೆ.

ಈ ಸಂಬಂಧ ದೆಹಲಿ ಪೊಲೀಸ್​ ವಕ್ತಾರ ಮನ್​ದೀಪ್​ ಸಿಂಗ್ ರಾಂಧವ ಸುದ್ದಿಗೋಷ್ಠಿ ನಡೆಸಿದ್ದು, ಜೆಎನ್​ಯುನ ಆಂತರಿಕ ಸುರಕ್ಷತೆ ವಿವಿಯ ಆಡಳಿತದ ಹಿಡಿತದಲ್ಲಿಯೇ ಇರುತ್ತದೆ. ನಾವು ಪಿಸಿಆರ್ ಕರೆಗೆ ಸ್ಪಂದಿಸಿದ್ದು, ತಕ್ಷಣವೇ ಅಲ್ಲಿಗೆ ಹೋಗಿ ವೃತ್ತಿಪರ ಮಾದರಿಯಲ್ಲಿ ಕ್ಯಾಂಪಸ್​ನಲ್ಲಿ ನಡೆಯುತ್ತಿದ್ದ ಹಿಂಸಾಚಾರವನ್ನು ಹತೋಟಿಗೆ ತಂದಿದ್ದೇವೆ ಎಂದು ಸಮಜಾಯಿಷಿ ನೀಡಿದ್ದಾರೆ.

ಅದೇ ರೀತಿ, ಭಾನುವಾರ ಕ್ಯಾಂಪಸ್​ನಲ್ಲಿ ಮುಖಮರೆಮಾಚಿಕೊಂಡು ಹಲ್ಲೆ ನಡೆಸಿದವರ ಗುರುತು ಪತ್ತೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ತನಿಖೆಯೂ ಮುಂದುವರಿದಿದೆ ಎಂದು ರಾಂಧವ ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net