

Actor Darshan: ಚಿತ್ರದುರ್ಗದ ರೇಣುಕಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಜಾಮೀನು ಪಡೆದು ಹೊರಬಂದಿರುವ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 7 ಆರೋಪಿಗಳಿಗೆ ಇದೀಗ ಮತ್ತೆ ಕಂಟಕ ಎದುರಾಗಿದೆ.
ದರ್ಶನ್ ಪರ ಹೈಕೋರ್ಟ್ನಲ್ಲಿ ಪ್ರಬಲ ವಾದ ಮಂಡಿಸಿ ಜಾಮೀನು ಕೊಡಿಸಿದ ವಕೀಲ ಸಿ.ವಿ. ನಾಗೇಶ್, ದರ್ಶನ್ ಬೆನ್ನು ಸರ್ಜರಿಗೆ ಒಳಗಾಗಬೇಕು ಎಂದು ಬಿಜಿಎಸ್ ಆಸ್ಪತ್ರೆಗೆ ರವಾನಿಸಿ, ನಂತರ ಅವರನ್ನು ಅಲ್ಲಿಂದ ಹೊರಗೆ ಕರೆತಂದರು. ಸದ್ಯ ಜೈಲುವಾಸದಿಂದ ಮುಕ್ತಿ ಪಡೆದೆವು ಎಂದು ಹೊಸ ವರ್ಷದ ಸಂಭ್ರಮಕ್ಕೆ ಎದುರುನೋಡುತ್ತಿದ್ದ ದರ್ಶನ್ಗೆ ಮತ್ತೆ ಸಂಕಷ್ಟ ಬೆಂಬಿಡದೆ ಕಾಡಿದೆ.
ದರ್ಶನ್ಗೆ ನೀಡಲಾದ ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದ ಖಾಕಿ ಪಡೆಗೆ ಗೃಹ ಇಲಾಖೆಯಿಂದ ಅನುಮತಿ ಪತ್ರ ಸಿಕ್ಕಿರಲಿಲ್ಲ. ಹೀಗಾಗಿ ಕೆಲವು ದಿನಗಳಿಂದ ಪತ್ರಕ್ಕಾಗಿ ಕಾಯುತ್ತಿದ್ದ ಪೊಲೀಸರಿಗೆ ಇದೀಗ ಗೃಹ ಇಲಾಖೆಯಿಂದ ಅನುಮತಿ ಕಡತ ಹಸ್ತಾಂತರವಾಗಿದೆ. ಕೈಗೆ ಪತ್ರ ಬರುತ್ತಿದ್ದಂತೆ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ಸದ್ಯ ಖಾಕಿ ಪಡೆ ಸಜ್ಜಾಗಿದೆ.
ವರದಿಯ ಪ್ರಕಾರ, ಇದೇ ಡಿಸೆಂಬರ್ 31 ಅಥವಾ ಹೊಸ ವರ್ಷದ ಮೊದಲ ದಿನದಂದು ದರ್ಶನ್ ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್ಗೆ ಅಧಿಕಾರಿಗಳು ಅರ್ಜಿ ಸಲ್ಲಿಸುವ ಸಾಧ್ಯತೆ ಹೆಚ್ಚಿದೆ.