ವಿವಾಹೇತರ ಸಂಬಂಧ ಬೆಳೆಸಿದ ಪೊಲೀಸ್​​ಗೆ ಇನ್​ಕ್ರಿಮೆಂಟ್ ಕಟ್ !

police
Published on

ಮುಂಬೈ : ವಿವಾಹೇತರ ಸಂಬಂಧ ಹೊಂದಿದ ಕಾರಣಕ್ಕೆ ಪೊಲೀಸ್ ಅಧಿಕಾರಿಯೊಬ್ಬರ ಇನ್​ಕ್ರಿಮೆಂಟ್​ಅನ್ನು ಒಂದು ವರ್ಷದ ಮಟ್ಟಿಗೆ ಸಸ್ಪೆಂಡ್​ ಮಾಡಲಾಗಿದೆ. ಮುಂಬೈ ನಗರದ ನಾಗಪಡ ಪೊಲೀಸ್​ ಠಾಣೆಯಲ್ಲಿ ಸಹಾಯಕ ಪೊಲೀಸ್​ ಇನ್ಸ್​ಪೆಕ್ಟರ್​(ಎಪಿಐ) ಆಗಿರುವ ಧನರಾಜ್​ ಪ್ರಭಾಲೆ ಎಂಬುವರು ಈ ಶಿಕ್ಷೆಗೆ ಒಳಗಾದ ಅಧಿಕಾರಿ.

ಮುಂಬೈ ಹೆಚ್ಚುವರಿ ಪೊಲೀಸ್​ ಕಮಿಷನರ್​ ಧ್ಯಾನೇಶ್ವರ್ ಚವನ್ ಹೊರಡಿಸಿರುವ ಆದೇಶದಲ್ಲಿ, ಕಳೆದ ಫೆಬ್ರವರಿಯಲ್ಲಿ, ವಿವಾಹಿತನಾದ ಎಪಿಐ ಪ್ರಭಾಲೆ ಫೇಸ್​ಬುಕ್​ನಲ್ಲಿ ಒಬ್ಬ ಮಹಿಳೆಯೊಂದಿಗೆ ಪರಿಚಯ ಬೆಳೆಸಿಕೊಂಡು, ತದನಂತರ ಅವಳೊಂದಿಗೆ ಅನೈತಿಕ ಸಂಬಂಧ ಬೆಳೆಸಿದ ಎಂದು ತಿಳಿಸಲಾಗಿದೆ.

ಮಹಿಳೆಯು ಫೇಸ್​ಬುಕ್​ನಲ್ಲಿ ತನ್ನ ಕೇಟರಿಂಗ್ ಬಿಸಿನೆಸ್ ಬಗ್ಗೆ ಜಾಹೀರಾತು ಪ್ರಕಟಿಸಿದ್ದಳು. ಪ್ರಭಾಲೆ ಅವಳಿಗೆ ಬಿಸಿನೆಸ್​ ಸೆಟ್​ ಮಾಡಲು ಸಹಾಯ ಮಾಡುವುದಾಗಿ ತಿಳಿಸಿದ. ಇಬ್ಬರೂ ಭೇಟಿಯಾಗಲು ಆರಂಭಿಸಿದರು. ಈ ರೀತಿ ಬೆಳೆದ ಅವರ ಸಂಬಂಧ ಸ್ವಲ್ಪ ಸಮಯದ ನಂತರ ಕೆಟ್ಟಿದ್ದು, ಆ ಮಹಿಳೆ ಮೇಲಧಿಕಾರಿಗಳಿಗೆ ತನ್ನನ್ನು ಶೋಷಿಸಲಾಗಿದೆ ಎಂದು ದೂರು ನೀಡಿದಳು ಎನ್ನಲಾಗಿದೆ.

ಇಲಾಖಾ ತನಿಖೆಯಲ್ಲಿ, ಎಪಿಐ ಪ್ರಭಾಲೆ ಅಶಿಸ್ತಿನಿಂದ ವರ್ತಿಸಿದ್ದು, ಪೊಲೀಸ್ ಇಲಾಖೆಯ ವರ್ಚಸ್ಸನ್ನು ಹಾಳು ಮಾಡುವಂತೆ ನಡೆದುಕೊಂಡಿದ್ದಾನೆಂದು ನಿರ್ಣಯ ಮಾಡಲಾಗಿದೆ. ಇದಕ್ಕೆ ಶಿಕ್ಷೆಯಾಗಿ ಒಂದು ವರ್ಷ ಆತನ ಇನ್​ಕ್ರಿಮೆಂಟ್​ಅನ್ನು ಸಸ್ಪೆಂಡ್ ಮಾಡಲಾಗಿದೆ. ಪೊಲೀಸ್​ ಮೂಲಗಳ ಪ್ರಕಾರ, ಈ ರೀತಿಯ ಶಿಕ್ಷೆಯು ಪೊಲೀಸ್ ಸಿಬ್ಬಂದಿಯ ಬಡ್ತಿ ಮತ್ತು ಪದಕಗಳನ್ನು ಪಡೆಯುವ ಅರ್ಹತೆಯ ಮೇಲೆ ಪ್ರಭಾವ ಬೀರುವುದರಿಂದ ಭಾರೀ ಪ್ರಮಾಣದ್ದಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net