ಬ್ಲ್ಯಾಕ್ ಫಂಗಸ್​ ಔಷಧಿ ಸೋಗಿನಲ್ಲಿ ಸೈಬರ್​ ಖದೀಮರ ಆಟ ಶುರು

cyber
Published on

ಬೆಂಗಳೂರು : ಕರೊನಾ ಉಲ್ಬಣದ ಹಿನ್ನೆಲೆಯಲ್ಲಿ ರೆಮ್​ಡೆಸಿವಿರ್ ಚುಚ್ಚುಮದ್ದು ಮತ್ತು ಆಕ್ಸಿಜನ್ ಸಿಲಿಂಡರ್​ಗಳನ್ನು ಪೂರೈಸುವ ಸೋಗಿನಲ್ಲಿ ಜನರಿಗೆ ವಂಚನೆ ಮಾಡುತ್ತಿರುವ ಸೈಬರ್​ ಕಳ್ಳರು ಇದೀಗ ಬ್ಲ್ಯಾಕ್ ಫಂಗಸ್​ ಔಷಧದತ್ತಲೂ ಮುಖ ಮಾಡಿದ್ದಾರೆ. ಬ್ಲ್ಯಾಕ್​ ಫಂಗಸ್​ ಚಿಕಿತ್ಸೆಯಲ್ಲಿ ಬಳಸಲಾಗುವ ಮತ್ತು ಸಾಕಷ್ಟು ಪೂರೈಕೆ ಇಲ್ಲದ ಔಷಧಿಯೊಂದನ್ನು ಪೂರೈಸುವುದಾಗಿ ಹೇಳಿ ಖದೀಮನೊಬ್ಬ ಸುಮಾರು 8 ಲಕ್ಷ ರೂ. ಹಣ ಪಡೆದು ನಾಪತ್ತೆಯಾಗಿರುವ ಪ್ರಸಂಗ ವರದಿಯಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ನಿವಾಸಿಯಾದ ಗೋವಿಂದರಾಜು ಎಂಬುವರಿಂದ ಈ ಬಗ್ಗೆ ಸೈಬರ್ ಸೆಲ್ ಪೊಲೀಸರಿಗೆ ದೂರು ಬಂದಿದೆ. ಗೋವಿಂದರಾಜು ಅವರ ಮಗನಿಗೆ ಕರೊನಾ ಸೋಂಕು ತಗುಲಿದ್ದು, ತದನಂತರ ಬ್ಲ್ಯಾಕ್ ಫಂಗಸ್​ ಸೋಂಕು ತಗುಲಿತು. ಅದಕ್ಕಾಗಿ ವೈದ್ಯರು ಆ್ಯಂಫೋಟೆರಿಸಿನ್ ಬಿ ಎಂಬ ಔಷಧಿಯ ಅಗತ್ಯವಿದ್ದು, ಆಸ್ಪತ್ರೆಯಲ್ಲಿ ಸ್ಟಾಕ್ ಇಲ್ಲದ ಕಾರಣ ಹೊರಗಿಂದ ವ್ಯವಸ್ಥೆ ಮಾಡಬೇಕೆಂದು ಹೇಳಿದರು.

ಅದಕ್ಕಾಗಿ ಕುಟುಂಬದವರು ಜಾಲತಾಣದಲ್ಲೂ ಬೇಡಿಕೆಯಿಟ್ಟು ಎಲ್ಲೆಡೆ ವಿಚಾರಿಸುತ್ತಿರುವಾಗ, ಅಶೋಕ್ ಎಂಬ ವ್ಯಕ್ತಿ ಮೆಡಿಕಲ್ ರೆಪ್ರೆಸೆಂಟಿಟೀವ್ ಆಗಿ ಅವರ ಸೊಸೆಯನ್ನು ಸಂಪರ್ಕಿಸಿದ. ಔಷಧಿಗಾಗಿ 7.9 ಲಕ್ಷ ರೂ. ವರ್ಗಾಯಿಸಿದ ತಕ್ಷಣ ಔಷಧಿ ಕೊರಿಯರ್ ಮೂಲಕ ಕಳುಹಿಸುವುದಾಗಿ ಭರವಸೆ ನೀಡಿದ. ಅದರಂತೆ ಆನ್​​ಲೈನ್​ ಮೂಲಕ ಹಣ ವ​ರ್ಗಾಯಿಸಿದ ನಂತರ ಆತನ ಫೋನ್ ಸ್ವಿಚ್​ ಆಫ್ ಆಗಿದ್ದು, ಆಗಿನಿಂದ ನಾಪತ್ತೆಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಸೈಬರ್ ಕ್ರೈಂ ವಿಭಾಗದ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net