

ಜೈಪುರ: ವೃದ್ಧೆಯೊಬ್ಬಳ ತಲೆಗೆ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿ, ಆಕೆಯ ದೇಹವನ್ನು 10 ತುಂಡುಗಳಾಗಿ ಕತ್ತರಿಸಿ ಸೂಟ್ಕೇಸ್ನಲ್ಲಿ ತುಂಬಿಸಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕೊಲೆ ಮಾಡಿರುವ ಆರೋಪಿ ಅನುಜ್ ಶರ್ಮಾ, ಸೂಟ್ಕೇಸ್ ಅನ್ನು ತಳ್ಳುತ್ತಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಡೀ ದೇಶದಲ್ಲೇ ಸಂಚಲನಕ್ಕೆ ಕಾರಣವಾಗಿದ್ದಾ ಶ್ರದ್ಧಾ ಕೊಲೆ ಪ್ರಕರಣದ ಮಾದರಿಯಲ್ಲೇ ಈ ಘಟನೆಯೂ ನಡೆದಿದೆ.
ಸದ್ಯ ಪೊಲೀಸರು ಆರೋಪಿಯ ಅನುಜ್ ಶರ್ಮಾ ಎಂಬಾತನ್ನು ಬಂಧಿಸಿದ್ದಾರೆ. ಪೊಲೀಸ್ ಮಾಹಿತಿಯ ಪ್ರಕಾರ ಕೊಲೆಯಾಗಿ ಹೋಗಿರುವ ಸರೋಜ್ ಶರ್ಮಾ(60) ಅವರ ದೇಹವನ್ನು ಆರೋಪಿ 10 ತುಂಡುಗಳನ್ನಾಗಿ ಕತ್ತರಿಸಿದ್ದಾನೆ. ದೇಹದ 8 ತುಂಡುಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ.
ಆರೋಪಿ ಅನುಜ್ ಶರ್ಮಾ ತನ್ನ ಚಿಕ್ಕಮ್ಮ ಸರೋಜ್ ಶರ್ಮಾ(60) ಕುರಿತು ಡಿ.11ರಂದು ವಿದ್ಯಾಧರ್ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದ. ನಂತರ ಪೊಲೀಸರು ಬಂದು ಮನೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆಯ ಬಾತ್ರೂಮ್ನಲ್ಲಿ ರಕ್ತ ಕಲೆ ಇರುವುದು ಪತ್ತೆಯಾಗಿದೆ. ಅನುಮಾನ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಾನೇ ಕೊಲೆ ಮಾಡಿರುವುದಾ ಒಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ಪ್ಯಾರಿಷ್ ದೇಶಮುಖ್ ಹೇಳಿದ್ದಾರೆ.
ಆರೋಪಿ ಅನುಜ್ ಶರ್ಮಾ ಆರೋಪಿಯು ಬಿಟೆಕ್ ಪದವೀಧರನಾಗಿದ್ದು, ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಕಳೆದ ಎಂಟು ವರ್ಷಗಳಿಂದ ಅವನು ಸರಿಯಾದ ಉದ್ಯೋಗವಿಲ್ಲದೆ ಕೆಲವು ಧಾರ್ಮಿಕ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ. ಕೆಲಸವಿಲ್ಲದ ಕಾರಣ ಆರ್ಥಿಕವಾಗಿ ಚಿಕ್ಕಮ್ಮನಿಗೆ ಅವಲಂಬಿತವಾಗಿದ್ದ ಎಂದು ವಿದ್ಯಾನಗರ ಪೊಲೀಸರು ಹೇಳಿದ್ದಾರೆ.
ಆರೋಪಿ ಅನುಜ್ ಶರ್ಮಾ ಮೇಲೆ ಬಾಲ್ಯದಿಂದಲೂ ಪ್ರಾಬಲ್ಯ ಸಾಧಿಸುತ್ತಿದ್ದಳು. ಅಂದು ಡಿ.11ರಂದು ಅನುಜ್ ದೆಹಲಿಗೆ ತೆರಳಬೇಕಿತ್ತು. ಇದಕ್ಕೆ ಚಿಕ್ಕಮ್ಮ ನಿರಾಕರಿಸಿದ್ದಾಳೆ. ಇದು ಇಬ್ಬರ ನಡುವೆ ವಾಗ್ವಾದಕ್ಕೂ ಕಾರಣವಾಗಿದೆ. ಇದರಿಂದ ಕೋಪಗೊಂಡು ಅನುಜ್, ಚಿಕ್ಕಮ್ಮನ ತಲೆಗೆ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ.
ಚಿಕ್ಕಮ್ಮನ ದೇಹವನ್ನು ಕತ್ತರಿಸಲು ಅನುಜ್, ಸ್ಥಳೀಯ ಮಾರುಕಟ್ಟೆಯಿಂದ ಮಾರ್ಬಲ್ ಕಟರ್ ಖರೀದಿಸಿದ್ದಾನೆ. ಇದರ ಸಹಾಯದಿಂದ ದೇಹವನ್ನು ಹತ್ತು ತುಂಡುಗಳನ್ನಾಗಿ ಮಾಡಿ ದೆಹಲಿ-ಜೈಪುರ ಹೆದ್ದಾರಿ ಬಳಿಯ ಅರಣ್ಯ ಪ್ರದೇಶಗಳಲ್ಲಿ ವಿಲೇವಾರಿ ಮಾಡಿದ್ದಾನೆ ಎಂದು ಡಿಸಿಪಿ ದೇಶಮುಖ್ ತಿಳಿಸಿದ್ದಾರೆ. (ಏಜೆನ್ಸೀಸ್)