

ಬೆಂಗಳೂರು: ಬ್ಯಾಟರಾಯನಪುರದಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆಯೇ ಬಿಜೆಪಿ ಮುಖಂಡರ ಮನೆಗಳಿಗೆ ದೌಡಾಯಿಸಿದ ಪೊಲೀಸರು, ಹೊರಗೆ ಬರದಂತೆ ನೋಡಿಕೊಂಡು ಉದ್ದೇಶಿತ ಜನಾಕ್ರೋಶ ಯಾತ್ರೆಯನ್ನು ತಡೆದಿದ್ದಾರೆ.
ಪಕ್ಷದ ರಾಜ್ಯ ಕಾರ್ಯದರ್ಶಿ ತಮ್ಮೇಶಗೌಡರನ್ನು ಗೃಹಬಂಧನದಲ್ಲಿ ಇರಿಸಿದ ಪೊಲೀಸರು, ನಂತರ ಹೋರಾಟದ ಕುರಿತು ಬಿಬಿಎಂಪಿ ಕಚೇರಿಗೆ ಪತ್ರ ನೀಡಲು ತೆರಳುತ್ತಿದ್ದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಮಾರ್ಗ ಮಧ್ಯದಲ್ಲೇ ತಡೆದು ನಿಲ್ಲಿಸಿದರು.
ರಾಜ್ಯ ಸರ್ಕಾರದ ಬೆಲೆಗಳ ಏರಿಕೆ, ಭ್ರಷ್ಟಾಚಾರ, ಓಲೈಕೆ ನೀತಿ ಖಂಡಿಸಿ ಬ್ಯಾಟರಾಯನಪುರದಲ್ಲಿ ಪಕ್ಷ ಮಂಗಳವಾರ ನಡೆಸಲು ಉದ್ದೇಶಿಸಿದ್ದ ಜನಾಕ್ರೋಶ ಯಾತ್ರೆಗೆ ಬ್ರೇಕ್ ಹಾಕಿದರು.
ಪ್ರಜಾಸತ್ತಾತ್ಮಕ ಚಳವಳಿ, ಜನರ ಆಕ್ರೋಶವನ್ನು ಪೊಲೀಸ್ ಬಲ ಬಳಸಿ ಹತ್ತಿಕ್ಕಿದ ಸರ್ಕಾರದ ಧೋರಣೆಯನ್ನು ತಮ್ಮೇಶಗೌಡ ಖಂಡಿಸಿದ್ದು, ಉದ್ದೇಶಿತ ಚಳವಳಿಯನ್ನು ಕೆಲವು ಅಧಿಕಾರಿಗಳು ಹಾಗೂ ಪೊಲೀಸರು ತಡೆದಿದ್ದಾರೆ.
ಜನಾಕ್ರೋಶ ಯಾತ್ರೆ ಯಶಸ್ವಿಯಾದರೆ ಬ್ಯಾಟರಾಯನಪುರ ಕ್ಷೇತ್ರದ ಸಮಸ್ಯೆಗಳ ಗುಟ್ಟು ರಟ್ಟಾಗುತ್ತದೆ ಎಂಬ ದಿಗಿಲು ಕ್ಷೇತ್ರದ ಶಾಸಕರೂ ಆದ ಸಚಿವ ಕೃಷ್ಣಬೈರೇಗೌಡರಿಗೆ ಕಾಡುತ್ತಿರಬೇಕು. ಅದಕ್ಕಾಗಿ ಜನಾಕ್ರೋಶ ಯಾತ್ರೆಗೆ ತಡೆಯೊಡ್ಡಿ, ಸರ್ವಾಧಿಕಾರಿ ಧೋರಣೆ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಯಾತ್ರೆಗೆ ತಡೆಯೊಡ್ಡಿದ್ದೇಕೆ ? ಎಂಬ ಪ್ರಶ್ನಿಸಿದ್ದಕ್ಕಾಗಿ ನನ್ನನ್ನು ಹಾಗೂ ಬಿಜೆಪಿ ಮುಖಂಡರನ್ನು ಗೃಹಬಂಧನದಲ್ಲಿ ಇರಿಸಿದ್ದಾರೆ. ಇಂತಹ ಗೊಡ್ಡು ಬೆದರಿಕೆಗಳಿಗೆ ಬಿಜೆಪಿ ಹೆದರುವುದಿಲ್ಲ, ಹಿಂದೆ ಸರಿಯುವುದಿಲ್ಲ. ಹೀಗೆಯೇ ಮುಂದುವರಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ತಮ್ಮೇಶಗೌಡ ಎಚ್ಚರಿಸಿದ್ದಾರೆ.
ಬ್ಯಾಟರಾಯನಪುರದಲ್ಲಿ ಬಿಜೆಪಿ ಹೋರಾಟಕ್ಕೆ ಪೊಲೀಸರು ತಡೆಯೊಡ್ಡಿದ್ದಾರೆ. ಕಾಂಗ್ರೆಸ್ ಇನ್ನೂ ತುರ್ತುಪರಿಸ್ಥಿತಿಯಿಂದ ಹೊರಬಂದಿಲ್ಲ. ಚಳವಳಿಗೆ ಇವರು ಇಷ್ಟು ಹೆದರುತ್ತಾರೆ ಎಂದರೆ ಇನ್ನು ಜನ ಬೀದಿಗೆ ಇಳಿದರೆ ಗತಿ ಏನು ?. ಸರ್ಕಾರದ ವೈಲ್ಯಕ್ಕೆ ಜನ ಬಗ್ಗುಬಡಿಯುವ ದಿನಗಳು ದೂರವಿಲ್ಲ. - ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯ.