

ಬೆಂಗಳೂರು: ಬಂದೋಬಸ್ತ್ ಕರ್ತವ್ಯಗಳಿಗೆ ನಿಯೋಜಿಸುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಪಾವತಿಸುತ್ತಿರುವ ಆಹಾರ ಭತ್ಯೆಯ ದರವನ್ನು ೨೦೦ ರೂ. ನಿಂದ ೩೦೦ ರೂ. ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.
ಗುಣಮಟ್ಟದ ಆರೋಗ್ಯಕರ ಆಹಾರವನ್ನು ಪೂರೈಸುವ ದೃಷ್ಟಿಯಿಂದ ಹಬ್ಬಹರಿ ದಿನಗಳು, ವಿಶೇಷ ಹಾಗೂ ಚುನಾವಣಾ ಸಂದರ್ಭದಲ್ಲಿಗಳಲ್ಲಿ ಬಂದೋಬಸ್ತ್ ಕರ್ತವ್ಯಗಳಿಗೆ ನಿಯೋಜಿಸುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಪ್ರಸ್ತುತ ಪಾವತಿಸುತ್ತಿರುವ ಆಹಾರ ಭತ್ಯೆ ದರವನ್ನು ೨೦೦ ರೂ. ನಿಂದ ೩೦೦ ರೂ.ಗಳಿಗೆ ಹೆಚ್ಚಿಸಿ ಆದೇಶಿಸಲಾಗಿದೆ.
ಈ ಹಿಂದೆ ಭದ್ರತೆಗೆ ನಿಯೋಜನೆಗೊಂಡಿದ್ದ ವೇಳೆ ಪೊಲೀಸ್ ಸಿಬ್ಬಂದಿಗೆ ನೀಡಲಾಗಿದ್ದ ಆಹಾರದಲ್ಲಿ ಜಿರಲೆ ಮತ್ತು ಹುಳುಗಳು ಸಿಕ್ಕಿತ್ತು. ಇದರಿಂದ ಸಿಬ್ಬಂದಿ ತೀವ್ರ ಬೇಸರ ಹೊರಹಾಕಿದ್ದರು. ಇದೀಗ ಸರ್ಕಾರ ಆಹಾರ ಭತ್ಯೆಯನ್ನು ಹೆಚ್ಚಿಸಿರುವುದರಿಂದ ಇನ್ನಾದರೂ ಗುಣಮಟ್ಟದ ಆಹಾರವನ್ನು ಒದಗಿಸಬೇಕು ಎಂದು ಪೊಲೀಸ್ ಸಿಬ್ಬಂದಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.