ಯುವಕನನ್ನು ಅಪಹರಿಸಿದ್ದ ಕಳ್ಳಕೃಷ್ಣನಿಗೆ ಗುಂಡೇಟು; 5 ಲಕ್ಷ ಕೇಳಿದವನೀಗ ಆಸ್ಪತ್ರೆಯಲ್ಲಿ

IMG-20200924-WA0013-1
Published on

ಬೆಂಗಳೂರು: ನಿನ್ನೆ ರಾತ್ರಿ ಪೊಲೀಸರು ಆಟೋ ಕೃಷ್ಣ ಅಲಿಯಾಸ್​ ಕಳ್ಳಕೃಷ್ಣ (26) ಎಂಬಾತನಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಈತನ ಮೇಲೆ ಪೊಲೀಸರು ಫೈರ್​ ಮಾಡಲು ಕಾರಣವೇನು ಎಂಬುದಕ್ಕೆ ಇಂದು ಉತ್ತರ ಸಿಕ್ಕಿದೆ.
ಈ ಕಳ್ಳಕೃಷ್ಣ ಉದ್ಯಮಿಯ ಪುತ್ರನನ್ನು ಅಪಹರಿಸಿ, 5 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದ ಎಂಬ ವಿಚಾರವನ್ನು ಪೊಲೀಸರು ಇದೀಗ ತಿಳಿಸಿದ್ದಾರೆ.

ಜಾಕಿಮ್​ ಎಂಬಾತನನ್ನು ಈ ಕಳ್ಳಕೃಷ್ಣ ಅಪಹರಣ ಮಾಡಿದ್ದ. ಈತನ ತಂದೆ ಜೆಲ್ಲಿಕಲ್ಲು ಉದ್ದಿಮೆದಾರ. ತಂದೆಗೆ ಸಹಾಯ ಮಾಡುತ್ತಿದ್ದ ಜಾಕಿಮ್​ ಮೇಲೆ ಕಳ್ಳಕೃಷ್ಣನ ಗ್ಯಾಂಗ್​ ಹಲವು ದಿನಗಳಿಂದ ಗಮನ ಇಟ್ಟಿತ್ತು. ಆತನನ್ನು ಹಿಂಬಾಲಿಸಿ, ಕುಟುಂಬದ ಹಿನ್ನೆಲೆಯನ್ನೂ ತಿಳಿದುಕೊಂಡಿದ್ದರು. ಯುವಕನನ್ನು ಅಪಹರಿಸಿದರೆ ಹಣ ಸಿಗಬಹುದು ಎಂದು ಉದ್ದೇಶಿ ಸಂಚು ರೂಪಿಸಿದ್ದರು. ಸೆ.22ರಂದು ಸಂಜೆ 4 ಗಂಟೆಗೆ ಯುವಕನನ್ನು ಮೈಲಸಂದ್ರದಲ್ಲಿ ಅಪಹರಿಸಿ ನಿರ್ಜನ ಪ್ರದೇಶದಲ್ಲಿ ಬಚ್ಚಿಟ್ಟಿದ್ದರು. ಇದನ್ನೂ ಓದಿ: ರಾಹುಲ್​ ರೋರಿಂಗ್​ ಶತಕ: ಕೊಹ್ಲಿ ಪಡೆಗೆ ಬೃಹತ್​ ಗುರಿ ನೀಡಿದ ಪಂಜಾಬ್​ ಕಿಂಗ್ಸ್!

ನಂತರ ಜಾಕಿಮ್​ನಿಂದಲೇ ಆತನ ತಂದೆಗೆ ವಿಡಿಯೋ ಕರೆ ಮಾಡಿಸಿದ್ದರು. 5 ಲಕ್ಷ ರೂ. ಕೊಟ್ಟರೆ ಮಾತ್ರ ಪುತ್ರನನ್ನು ಬಿಟ್ಟು ಕಳುಹಿಸುತ್ತೇವೆ. ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ, ನಿಮ್ಮ ಪುತ್ರನನ್ನು ಜೀವಂತವಾಗಿ ಕಳುಹಿಸುವುದಿಲ್ಲ ಎಂದು ಬೆದರಿಸಿದ್ದರು. ಈ ಬಗ್ಗೆ ಯುವಕನ ತಾಯಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಅಪಹರಣ ನಡೆದ ಸ್ಥಳದಲ್ಲಿನ ಸಿಸಿ ಕ್ಯಾಮರಾ ದೃಶ್ಯ ಹಾಗೂ ಫೋನ್​​ ಕರೆಗಳ ಲೊಕೇಶನ್ ಪರಿಶೀಲಿಸಿದಾಗ ಆರೋಪಿಗಳು ಬೇಗೂರು ರಸ್ತೆಯ ನಿರ್ಜನ ಪ್ರದೇಶದಲ್ಲಿರುವ ಸುಳಿವು ಸಿಕ್ಕಿತ್ತು.

ಇದರ ಜಾಡು ಹಿಡಿದು ಇನ್‌ಸ್ಪೆಕ್ಟರ್ ಕಿಶೋರ್ ಕುಮಾರ್ ನೇತೃತ್ವದ ಪೊಲೀಸರ ತಂಡ ಬುಧವಾರ ರಾತ್ರಿ ಕಾರ್ಯಾಚರಣೆ ಕೈಗೊಂಡಿತ್ತು. ಜಾಕೀಮ್‌ನನ್ನು ರಕ್ಷಿಸಿದ್ದ ಪಿಎಸ್‌ಐ ಅಯ್ಯಪ್ಪ ಅವರು ಆರೋಪಿ ಕೃಷ್ಣನನ್ನು ಬಂಧಿಸಲು ಮುಂದಾಗಿದ್ದರು. ಈ ವೇಳೆ ಎಸ್‌ಐಗೆ ಡ್ಯಾಗರ್‌ನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದ. ಕೂಡಲೇ ಕಾರ್ಯಪ್ರವೃತ್ತರಾದ ಇನ್‌ಸ್ಪೆಕ್ಟರ್ ಕಿಶೋರ್, ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದರು. ಅವರ ಮಾತನ್ನು ಲೆಕ್ಕಿಸದೇ ಮತ್ತೇ ಹಲ್ಲೆಗೆ ಮುಂದಾಗಿದ್ದ ಕೃಷ್ಣನ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಆತನ ಸಹಚರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ. ಆರೋಪಿ ಕೃಷ್ಣ ಈ ಹಿಂದೆ ಕಳ್ಳತನ, ಸುಲಿಗೆ, ಅಪಹರಣ ಸೇರಿದಂತೆ 10ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಶ್ರೀಮಂತರ ಮಕ್ಕಳನ್ನು ಅಪಹರಿಸಿ, ದುಡ್ಡು ಮಾಡಲೆಂದೇ ಗ್ಯಾಂಗ್​ ಕಟ್ಟಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net