ಪೊಲೀಸ್ ಇ-ಬೀಟ್ ಸ್ಮಾರ್ಟ್: ಗ್ರಾಮೀಣ ಭಾಗದಲ್ಲೂ ಹೈಟೆಕ್ ವ್ಯವಸ್ಥೆ; ಪುಸ್ತಕ ಆಧಾರಿತ ಗಸ್ತು ಪದ್ಧತಿ ರದ್ದು

E Beat
Published on

| ಕೀರ್ತಿನಾರಾಯಣ ಸಿ. ಬೆಂಗಳೂರು

ಸಾರ್ವಜನಿಕರ ಭದ್ರತೆ ಹಾಗೂ ಅಪರಾಧ ಪ್ರಕರಣಗಳ ನಿಯಂತ್ರಣಕ್ಕಾಗಿ ರೂಪಿಸಿರುವ ಪೊಲೀಸ್ ಗಸ್ತು ವ್ಯವಸ್ಥೆ ಸಂಪೂರ್ಣವಾಗಿ ಸ್ಮಾರ್ಟ್ ಆಗಿದೆ. ಪುಸ್ತಕ ಆಧಾರಿತ ಗಸ್ತು ಪದ್ಧತಿಯನ್ನು ಪೂರ್ಣಪ್ರಮಾಣದಲ್ಲಿ ರದ್ದುಪಡಿಸಿ ‘ಸ್ಮಾರ್ಟ್ ಇ-ಬೀಟ್’ ಪದ್ಧತಿಯನ್ನು ರಾಜ್ಯಾದ್ಯಂತ ಜಾರಿಗೆ ತರಲಾಗಿದೆ. ಇದರೊಂದಿಗೆ ಗಸ್ತು ನಿರ್ವಹಿಸಲು ಪೊಲೀಸರು ತೋರುತ್ತಿದ್ದ ನಿರ್ಲಕ್ಷ್ಯಕ್ಕೆ ಫುಲ್​ಸ್ಟಾಪ್ ಬಿದ್ದಿದೆ.

2022ರ ಮೇ ತಿಂಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಕರ್ನಾಟಕ ಪೊಲೀಸ್ ಇಲಾಖೆ ಅಭಿವೃದ್ಧಿಪಡಿಸಿದ್ದ ಸ್ಮಾರ್ಟ್ ಇ-ಬೀಟ್ ವ್ಯವಸ್ಥೆಗೆ ಚಾಲನೆ ನೀಡಿದ್ದರು. ಮೊದಲ ಹಂತದಲ್ಲಿ ನಗರಗಳಲ್ಲಿ ಮಾತ್ರ ರಾತ್ರಿ ಗಸ್ತಿಗೆ ಸ್ಮಾರ್ಟ್ ಇ-ಬೀಟ್ ಜಾರಿಗೊಳಿಸಲಾಗಿತ್ತು. ಈಗ ಗ್ರಾಮೀಣ ಭಾಗಗಳಿಗೂ (ರೂರಲ್ ಬೀಟ್ ಅಥವಾ ಡೇ ಬೀಟ್) ವಿಸ್ತರಿಸಿ ಡಿಜಿಪಿ ಆದೇಶ ಹೊರಡಿಸಿದ್ದಾರೆ. ಹಳ್ಳಿಗಳಲ್ಲಿ ಗಸ್ತು ನಿರ್ವಹಿಸಬೇಕಾದ ಹಗಲು ಬೀಟ್ ಪಾಯಿಂಟ್​ಗಳನ್ನು ಸ್ಮಾರ್ಟ್ ಇ-ಬೀಟ್ ತಂತ್ರಾಂಶದಲ್ಲಿ ಅಳವಡಿಸಿ ಹೈಟೆಕ್ ಸ್ಪರ್ಶ ನೀಡಲಾಗಿದೆ. ಇ-ಬೀಟ್ ವ್ಯವಸ್ಥೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಗಸ್ತು ಪಾಳಿ ಕಡ್ಡಾಯ.ಕಾವಲು ಕಾಯದಿದ್ದರೂ ಗಸ್ತು ತಿರುಗಿದ್ದೇವೆ ಎಂದು ಸುಳ್ಳು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಸಹಜವಾಗಿ ಆ ಪ್ರದೇಶದಲ್ಲಿ ಕಳ್ಳತನ, ದರೋಡೆ, ಗಲಾಟೆ, ಗುಂಪು ಘರ್ಷಣೆ, ಕೋಮು ಗಲಭೆ ಇನ್ನಿತರ ಅಪರಾಧ ಪ್ರಕರಣಗಳಿಗೂ ಕಡಿವಾಣ ಬೀಳಲಿದೆ. ಜತೆಗೆ ಪೊಲೀಸರ ಸಂಚಾರದಿಂದ ಹೆಚ್ಚಿನ ಭದ್ರತೆ ಹಾಗೂ ರಕ್ಷಣೆಯ ಭರವಸೆಯನ್ನೂ ಸಾರ್ವಜನಿಕರಲ್ಲಿ ಮೂಡಿಸುತ್ತದೆ.

ನಗರಗಳಲ್ಲಿ ಠಾಣಾ ವ್ಯಾಪ್ತಿಯ ಸೂಕ್ಷ್ಮ ಪ್ರದೇಶ, ಅಪರಾಧ ಪ್ರಕರಣಗಳು ನಡೆಯುವ ಜಾಗ, ವೃದ್ಧರು ಇರುವಂತಹ ಪ್ರದೇಶಗಳಲ್ಲಿ ಪಾಯಿಂಟ್ ಗುರುತಿಸಲಾಗಿರುತ್ತದೆ. ರಾತ್ರಿಪಾಳಿಗೆ ನಿಯೋಜನೆಗೊಂಡಿರುವ ಸಿಬ್ಬಂದಿ ಅಲ್ಲಿಗೆ ತೆರಳಿ ಕ್ಯೂಆರ್ ಕೋಡ್ ಸ್ಕಾ್ಯನ್ ಮಾಡಬೇಕು. ಬೆಂಗಳೂರಿನಲ್ಲಿ ಒಂದು ಡಿಸಿಪಿ ವಲಯದಲ್ಲಿ 1,200 ರಿಂದ 1,500 ಪಾಯಿಂಟ್​ಗಳಿವೆ. ಗ್ರಾಮೀಣ ಭಾಗದಲ್ಲಿ ಆಯಾ ಠಾಣಾ ವ್ಯಾಪ್ತಿಯ ಐದಾರು ಹಳ್ಳಿಗಳನ್ನು ಸೇರಿಸಿ ಒಂದು ಪಾಯಿಂಟ್ ಎಂದು ಗುರುತಿಸಲಾಗುತ್ತದೆ. ಆ ಎಲ್ಲ ಹಳ್ಳಿಗೂ ಗಸ್ತು ಸಿಬ್ಬಂದಿ ಭೇಟಿ ಕೊಟ್ಟು ಕ್ಯೂಆರ್ ಕೋಡ್ ಸ್ಕಾ್ಯನ್ ಮಾಡುವ ಮೂಲಕ ಮಾಹಿತಿ ಅಪ್​ಲೋಡ್ ಮಾಡಬೇಕು. ಯಾವ ಹಳ್ಳಿಗೆ ಯಾವ ಸಮಯಕ್ಕೆ ಹೋಗಿದ್ದರು ಎಂಬ ಮಾಹಿತಿಯನ್ನು ಮೇಲಧಿಕಾರಿಗಳು ತಾವಿದ್ದಲ್ಲೇ ಪಡೆಯಬಹುದು. ಗಸ್ತು ತಿರುಗದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಇದರಿಂದ ಅನುಕೂಲವಾಗುತ್ತದೆ.

ಹೇಗಿರುತ್ತೆ ಇ-ಬೀಟ್?: ಕರ್ನಾಟಕ ಪೊಲೀಸ್ ಗಣಕ ವಿಭಾಗ, ಜಿಪಿಅರ್​ಎಸ್ ಟ್ರಾ್ಯಕಿಂಗ್ ಹಾಗೂ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನದಲ್ಲಿ ಇ-ಬೀಟ್ ತಂತ್ರಾಂಶ ಅಭಿವೃದ್ಧಿ ಪಡಿಸಿದೆ. ಸ್ಮಾರ್ಟ್​ಫೋನ್​ನಲ್ಲಿ ಆಪ್ ಡೌನ್​ಲೋಡ್ ಮಾಡಿಕೊಂಡು ಬೀಟ್​ಗೆ ನಿಯೋಜನೆಗೊಳ್ಳುವ ಪೊಲೀಸ್ ಸಿಬ್ಬಂದಿ ತಮಗೆ ಸೂಚಿಸಿದ ಪಾಯಿಂಟ್​ಗೆ ಹೋಗಿ ಅಲ್ಲಿ ಹಾಕಿರುವ ಕ್ಯೂಆರ್ ಕೋಡ್ ಸ್ಕಾ್ಯನ್ ಮಾಡಬೇಕು. ಬೀಟ್ ಹಾಕಿದ ಮೇಲಧಿಕಾರಿಗಳಿಗೆ ಪೊಲೀಸ್ ಸಿಬ್ಬಂದಿ ಬೀಟ್ ಜಾಗಕ್ಕೆ ಎಷ್ಟೊತ್ತಿಗೆ ಹೋಗಿದ್ದರು? ಎಷ್ಟು ಸಮಯ ಅಲ್ಲಿದ್ದರು? ಅಲ್ಲಿಂದ ಹೊರಟಿದ್ದು ಯಾವಾಗ ಎಂಬಿತ್ಯಾದಿ ವಿವರಗಳು ರವಾನೆಯಾಗುತ್ತದೆ.

ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಇ-ಬೀಟ್ ವ್ಯವಸ್ಥೆ ಸಹಾಯಕ. ಈವರೆಗೆ ನಗರಗಳಲ್ಲಷ್ಟೇ ರಾತ್ರಿ ಗಸ್ತಿಗೆ ಸ್ಮಾರ್ಟ್ ಇ-ಬೀಟ್ ಪದ್ಧತಿಯಿತ್ತು. ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಈಗ ಗ್ರಾಮೀಣ ಪ್ರದೇಶದ ಡೇ ಬೀಟ್​ಗೂ ವಿಸ್ತರಿಸಲಾಗಿದೆ. ಪುಸ್ತಕ ಆಧಾರಿತ ಹಳೇ ಬೀಟ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ಇ-ಬೀಟ್ ಪದ್ಧತಿಯಿಂದ ಪೊಲೀಸರ ಭದ್ರತಾ ಕಾರ್ಯ ಮತ್ತಷ್ಟು ಹೆಚ್ಚಾಗಿ ಅಪರಾಧ ಪ್ರಕರಣಗಳ ನಿಯಂತ್ರಣ ಸಾಧ್ಯವಾಗುತ್ತದೆ. | ಪ್ರವೀಣ್ ಸೂದ್ ಡಿಜಿ-ಐಜಿಪಿ

ಏನೆಲ್ಲ ಅನುಕೂಲ?

  • ಇ-ಬೀಟ್​ನಿಂದಾಗಿ ಭದ್ರತಾ ಕಾರ್ಯ ಹೆಚ್ಚುವು ದರಿಂದ ಅಪರಾಧ ಪ್ರಕರಣ ನಿಯಂತ್ರಣ
  • ಪೊಲೀಸ್ ಸಿಬ್ಬಂದಿಯ ಕರ್ತವ್ಯಲೋಪ ಪತ್ತೆಹಚ್ಚಿ, ಶಿಸ್ತು ಕ್ರಮ ಜರುಗಿಸಲು ಅವಕಾಶ
  • ಎಲ್ಲವೂ ಆನ್​ಲೈನ್ ದಾಖಲೀಕರಣಗೊಳ್ಳುವ ಹಿನ್ನೆಲೆಯಲ್ಲಿ ಸುಳ್ಳು ಹೇಳಲು ಸಾಧ್ಯವಿಲ್ಲ
  • ಅಪರಾಧ ಪ್ರಕರಣ, ಶಂಕಾಸ್ಪದ ಘಟನೆ ನಡೆದರೆ ತಕ್ಷಣ ಸ್ಥಳ, ಫೋಟೋ ಅಪ್​ಲೋಡ್
  • ಎಲ್ಲರಿಗೂ ಘಟನೆ ಮಾಹಿತಿ ಹೋಗುವುದರಿಂದ ಆರೋಪಿಗಳ ಶೀಘ್ರ ಪತ್ತೆಗೆ ಸಹಾಯ
  • ಹಳೇ ಆರೋಪಿ, ರೌಡಿಗಳ ಮೇಲೆ ನಿಗಾ ವಹಿಸಲೂ ಇ-ಬೀಟ್ ವ್ಯವಸ್ಥೆ ಸಹಾಯಕ

ಡಿಜಿಪಿ ಸೂಚನೆಗಳು

  • ತಂತ್ರಾಂಶ ಬಳಸಿ ಗಸ್ತು ವ್ಯವಸ್ಥೆ ಉತ್ತಮವಾಗಿ ನಿರ್ವಹಿಸಲು ನಿಗಾ ವಹಿಸಬೇಕು
  • ರಾತ್ರಿ, ಹಗಲು ಗಸ್ತು ವ್ಯವಸ್ಥೆಯನ್ನು ಇ-ಬೀಟ್ ತಂತ್ರಾಂಶದಲ್ಲೇ ನಿರ್ವಹಿಸಬೇಕು
  • ಈಗ ಚಾಲ್ತಿಯಲ್ಲಿರುವ ಪುಸ್ತಕ ಆಧಾರಿತ ಬೀಟ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು
  • ತಂತ್ರಾಂಶದಲ್ಲೇ ಗಸ್ತಿನ ಸಂಪೂರ್ಣ ವರದಿ ಪಡೆದು ಮೇಲ್ವಿಚಾರಣೆ ವಹಿಸಬೇಕು

ಪೊಲೀಸರ ಕಳ್ಳಾಟಕ್ಕೆ ಬ್ರೇಕ್

  • ಈವರೆಗೆ ಮನೆ ಮುಂದೆ ಅಥವಾ ನಿಗದಿತ ಸ್ಥಳದಲ್ಲಿರುತ್ತಿದ್ದ ಪುಸ್ತಕದಲ್ಲಿ ಸಹಿ ಮಾಡಬೇಕಿತ್ತು
  • ಕಳ್ಳಾಟವಾಡುವ ಸಿಬ್ಬಂದಿ ವಾರಕ್ಕೊಮ್ಮೆ ಒಂದೇ ಬಾರಿಗೆ ಅಷ್ಟೂ ಸಹಿ ಹಾಕುತ್ತಿದ್ದರು
  • ಆದರೀಗ ಗಸ್ತು ಸಿಬ್ಬಂದಿ ನಿಗದಿತ ಸ್ಥಳದ ಕ್ಯೂಆರ್ ಕೋಡ್ ಸ್ಕ್ಯಾನ್​ ಮಾಡಬೇಕು
  • ಮೊದಲಿನಂತೆ ಹೋಗದಿದ್ದರೂ ಹೋಗಿದ್ದಾಗಿ ಸುಳ್ಳು ಹೇಳಲು ಸಾಧ್ಯವಿಲ್ಲ.
  • ಸಿಬ್ಬಂದಿ ಕಾರ್ಯವೈಖರಿ ಮೇಲೆ ಮೇಲಧಿಕಾರಿ ನಿಗಾ ವಹಿಸುವುದರಿಂದ ಕಳ್ಳಾಟ ಸಾಧ್ಯವಿಲ್ಲ.

ಯಾವೆಲ್ಲ ಬೀಟ್​ಗಳಿವೆ?

  • ನೈಟ್ ಬೀಟ್, ಡೇ ಬೀಟ್, ನ್ಯೂಸೆನ್ಸ್ ಬೀಟ್, ಗುಡ್ ಮಾರ್ನಿಂಗ್ ಬೀಟ್, ಫೆಸ್ಟಿವಲ್ ಬೀಟ್, ವಿಲೇಜ್ ಬೀಟ್
  • ನಗರ, ಪಟ್ಟಣ ಪ್ರದೇಶಗಳಲ್ಲಷ್ಟೇ ರಾತ್ರಿ ಗಸ್ತು ಇದೆ. ಗ್ರಾಮೀಣ ಭಾಗದಲ್ಲಿ ಡೇ-ಬೀಟ್ ಅಥವಾ ಹಗಲು ಗಸ್ತು ಪದ್ಧತಿ ಇದೆ
  • ಹಬ್ಬ-ಹರಿದಿನ, ಗಲಾಟೆ ಸಂದರ್ಭ ಹೊರತು ಬೀಟ್​ಗಳನ್ನು ಆಯಾ ಪರಿಸ್ಥಿತಿಗೆ ತಕ್ಕಂತೆ ಪೊಲೀಸರು ನಿರ್ವಹಿಸುತ್ತಾರೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net