

ಹೈದರಾಬಾದ್: ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಆರೋಪಿಸಿ ಇಂದು ಹೈದರಾಬಾದ್ನಲ್ಲಿ ಹೋರಾಟ ನಡೆಸಲಾಗುತ್ತಿದೆ. ಸಿಪಿಐ ನಡೆಸುತ್ತಿರುವ ಹೋರಾಟದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಪ್ರತಿಕೃತಿ ದಹನ ಮಾಡುವ ಪ್ರಯತ್ನ ನಡೆಸಲಾಗಿದೆ. ಈ ವೇಳೆ ಪೊಲೀಸರು ಕೆಲ ಸಿಪಿಐ ಸದಸ್ಯರನ್ನು ವಶಕ್ಕೆ ಪಡೆದಿದ್ದಾರೆ.
ದೆಹಲಿಯಲ್ಲಿ ಸಿಎಎ ಮತ್ತು ಎನ್ಆರ್ಸಿ ಪರ ವಿರೋಧ ಹೋರಾಟ ಹಿಂಸಾತ್ಮಕ ಹಾದಿ ತುಳಿದಿದೆ. ಇದರಿಂದಾಗಿ ಮುಖ್ಯ ಪೇದೆ, ಗುಪ್ತಚರ ದಳದ ಅಧಿಕಾರಿ ಸೇರಿದಂತೆ ಒಟ್ಟು 34 ಜನರು ಮೃತರಾಗಿದ್ದಾರೆ. 200ಕ್ಕೂ ಹೆಚ್ಚು ಜನರು ಗಾಯಾಳುಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪರಿಸ್ಥಿತಿಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಅನೇಕ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ದೂಷಿಸಿವೆ. ನಿನ್ನೆ ಸಭೆ ನಡೆಸಿದ ಕಾಂಗ್ರೆಸ್ ಮುಖಂಡರು, ಅಮಿತ್ ಷಾ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದರು. ಅಮಿತ್ ಷಾ ಅವರ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸಿರುವ ಬೆನ್ನಲ್ಲೇ ಅನೇಕ ಕಡೆಗಳಲ್ಲಿ ಹೋರಾಟದ ಕಿಚ್ಚು ಹತ್ತಿದ್ದು ಗೃಹ ಸಚಿವರ ರಾಜೀನಾಮೆಗೆ ಒತ್ತಾಯ ಮಾಡಲಾಗುತ್ತಿದೆ.
ಇಂದು ಬೆಳಗ್ಗೆಯಿಂದ ಹೈದರಾಬಾದ್ನಲ್ಲಿ ಅಮಿತ್ ಷಾ ಅವರ ರಾಜೀನಾಮೆಗೆ ಒತ್ತಾಯಿಸಿ ಹೋರಾಟ ನಡೆಸಲಾಗುತ್ತಿದ್ದು, ಅವರ ಪ್ರತಿಕೃತಿಗೆ ಬೆಂಕಿ ಹಚ್ಚುವ ಪ್ರಯತ್ನ ಮಾಡಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಪೊಲೀಸರು ಸಿಪಿಐನ ಕೆಲವು ಸದಸ್ಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. (ಏಜೆನ್ಸೀಸ್)