

ರಾಣೆಬೆನ್ನೂರ: ನೀರಿಗೆ ನೈದಿಲೆಯೇ ಸಿಂಗಾರವಾದರೆ ನಾಡಿಗೆ ಕಾಡು ಸಿಂಗಾರ. ಹೀಗಾಗಿ ಕಾಡು ಬೆಳೆಸಿ ನಾಡು ಉಳಿಸಿ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಂಶು ಕುಮಾರ ಹೇಳಿದರು.
ಇಲ್ಲಿಯ ಶಹರ ಪೊಲೀಸ್ ಠಾಣೆ, ಸರ್ಕಾರ ಪದವಿ ಕಾಲೇಜ್‌ನ ಎನ್‌ಎಸ್‌ಎಸ್ ಘಟಕ, ಓಂ ಶಿಕ್ಷಣ ಸಂಸ್ಥೆ ವತಿಯಿಂದ ಪೊಲೀಸ್ ಕವಾಯತು ಮೈದಾನದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಗುರುವಾರ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಕೃತಿಯ ಪೋಷಣೆ, ರಕ್ಷಣೆ ಪ್ರತಿಯೊಬ್ಬರ ಹೊಣೆ. ಪರಿಸರದ ರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಬದಲಾಗಿ ಎಲ್ಲ ಸಮುದಾಯದ ಜವಾಬ್ದಾರಿ. ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ವ್ಯಾಪಕವಾಗಿ ಜಾಗೃತಿ ಮೂಡಿಸಬೇಕು. ಸಸಿ ನೆಡುವ ಕಾರ್ಯಕ್ರಮ ನಿರಂತರವಾಗಿರಬೇಕು. ಹಸಿರು ಉಳಿದರೆ ಮಾತ್ರ ಉಸಿರು ಉಳಿಯಲು ಸಾಧ್ಯ. ಹೀಗಾಗಿ ಮನೆಗೊಂದು ಮರ ಬಳೆಸಿ ಊರಿಗೊಂದು ವನ ಬೆಳೆಸಬೇಕೆಂದು ಕರೆ ನೀಡಿದರು.
ಮನುಷ್ಯನನಿಗೂ ಪರಿಸರಕ್ಕೂ ಬಹಳ ಅನನ್ಯ ಸಂಬಂಧವಿದ್ದು, ಪರಿಸರ ರಕ್ಷಣೆಗಾಗಿ ಪ್ರತಿಯೊಬ್ಬರು ಒಂದೊಂದು ಗಿಡಗಳನ್ನು ಬೆಳೆಸಿ, ಅವನ್ನು ರಕ್ಷಿಸಬೇಕು. ಪ್ರಕೃತಿಯು ನಮಗೆ ಉಸಿರಾಡಲು ಗಾಳಿ, ಮಳೆ, ಹಣ್ಣು-ಹಂಪಲಗಳನ್ನು ನೀಡುತ್ತದೆ. ಪರಿಸರ ರಕ್ಷಣೆಯನ್ನು ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಮಾಡಬೇಕು ಎಂದರು.
ಹೆಚ್ಚುವರಿ ಎಸ್ಪಿ ಗೋಪಾಲ ಸಿ. ಮಾತನಾಡಿ, ಪರಿಸರ ಮಾಲಿನ್ಯ ಇಂದು ಅಪಾಯ ಮಟ್ಟಕ್ಕೆ ತಲುಪುತ್ತಿದ್ದು, ಮಾಲಿನ್ಯ ತಡೆ ಅನಿವಾರ್ಯ ಎಂದರು.
ಡಿವೈಎಸ್ಪಿ ಡಾ. ಗಿರೀಶ ಭೋಜಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದು ನೆಟ್ಟಿರುವ ಸಸಿಗಳನ್ನು ಠಾಣಾವಾರು ಹಂಚಿಕೆ ಮಾಡಿದ್ದು, ಅವುಗಳ ಲಾಲನೆ-ಪಾಲನೆ ಜವಾಬ್ದಾರಿಗಳನ್ನು ವಹಿಸಿಕೊಳ್ಳುವಂತೆ ಸೂಚಿಸಿದರು.
ಸರ್ಕಾರಿ ಪದವಿ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಡಾ. ಅರುಣಕುಮಾರ ಚಂದನ, ಸಾಮಾಜಿಕ ಅರಣ್ಯಾಧಿಕಾರಿಗಳಾದ ಪವನ ಎರೆಗಲ್ಲ, ಶಶಿಕಲಾ ಭೂಮರ, ಸಿಪಿಐ ಎಸ್.ಕೆ. ಶಂಕರ, ಕುಮಾರಪಟ್ಟಣ ಸಿಪಿಐ ಸಿದ್ದೇಶ, ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ, ಹಲಗೇರಿ ಪಿಎಸ್‌ಐ ಪರಶುರಾಮ ಲಮಾಣಿ, ಭಾರತಿ ಜೆ.ಇ., ಮಾಳಪ್ಪ ವೈ.ಸಿ., ಜಗದೀಶ ಜಿ. ಹಾಗೂ ಚಂದ್ರಶೇಖರ ವಿಭೂತಿ ಸೇರಿ ಪೊಲೀಸ್ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.