ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಪೊಲೀಸ್ ಆಯುಕ್ತರು

seemanth kumar sing
Published on

ಬೆಂಗಳೂರು: ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಯಾವ ರೀತಿ ಭದ್ರತೆ ಕೈಗೊಳ್ಳಬೇಕೆಂಬ ಬಗ್ಗೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಪೊಲೀಸ್ ಅಧಿಕಾರಿಗಳಿಗೆ ಕೆಲವು ಸಲಹೆ, ಸೂಚನೆ ನೀಡಿದ್ದಾರೆ.

ಆಯುಕ್ತರ ಕಚೇರಿಯಲ್ಲಿ ಸಭಾಂಗಣದಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ, ಮೆರವಣಿಗೆ, ವಿಸರ್ಜನೆ ಸಂದರ್ಭಗಳಲ್ಲಿ ಯಾವ ರೀತಿಯಲ್ಲಿ ಭದ್ರತೆ ಕೈಗೊಳ್ಳಬೇಕೆಂಬ ಬಗ್ಗೆ ವಿವರವಾಗಿ ತಿಳಿಸಿದರು.

ಯಾವುದೇ ಕಾರಣಕ್ಕೂ ಅಹಿತಕರ ಘಟನೆಗಳು ಆಗದಂತೆ ನೋಡಿಕೊಳ್ಳಬೇಕು. ಯಾವುದೇ ಸಣ್ಣ ಘಟನೆ ನಡೆದರೂ ತಕ್ಷಣ ಇನ್‌ಸ್ಪೆಕ್ಟರ್ ಸ್ಥಳಕ್ಕೆ ತೆರಳಿ ಅದನ್ನು ಬಗೆಹರಿಸಬೇಕು, ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳಗಳ ಬಳಿ ಪೊಲೀಸರನ್ನು ನಿಯೋಜಿಸಿ, ಆಯೋಜಕರೊಂದಿಗೆ ಸಂಪರ್ಕದಲ್ಲಿರುವಂತೆ ಅವರು ಸೂಚಿಸಿದರು.

ಗಣೇಶ ಪ್ರತಿಷ್ಠಾಪನೆ, ಪೂಜೆ ಅವಧಿ, ವಿಸರ್ಜನೆ ಸಮಯ, ಡಿಜೆ ನಿಷೇಧ, ಧ್ವನಿ ವರ್ಧಕ ಬಳಕೆ ಬಗ್ಗೆಯೂ ಚರ್ಚೆ ಸಭೆಯಲ್ಲಿ ಮಾಡಿದ್ದಾರೆ. ಸೂಕ್ಷ್ಮ ಸ್ಥಳಗಳಲ್ಲಿ ಅಗ್ನಿ ಶಾಮಕ ವಾಹನಗಳೊಂದಿಗೆ ಸಿಬ್ಬಂದಿ ಕೆಲವು ಪ್ರದೇಶಗಳಲ್ಲಿ ಕಾಯ್ದಿರಿಸಿಕೊಳ್ಳಿ. ಬೆಸ್ಕಾಂ ಅಧಿಕಾರಿಗಳ ಜತೆ ಸಂಪರ್ಕದಲ್ಲಿರಿ, ಈ ಹಿಂದೆ ಗಣೇಶ ಮೂರ್ತಿ ಪ್ರತಿಷ್ಠಾಪನ ಸ್ಥಳದಲ್ಲಿ ಯಾವುದಾದರೂ ಘಟನೆಗಳು ನಡೆದಿದ್ದರೆ ಅಂತಹ ಸ್ಥಳಗಳಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸುವಂತೆ ಅವರು ಸಲಹೆ ನೀಡಿದರು.

ಒಟ್ಟಾರೆ ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಆಗದಂತೆ ನೋಡಿಕೊಳ್ಳಬೇಕು ಎಂದು ಆಯುಕ್ತರು ಎಚ್ಚರಿಕೆ ನೀಡಿದರು.

ಅದೇ ರೀತಿ ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲೂ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡ ಬೇಕು. ಯಾವುದೇ ಗಲಭೆಗಳಿಗೆ ಅವಕಾಶ ಕೊಡಬೇಡಿ. ಯಾವುದೇ ಸಣ್ಣ ಘಟನೆ ನಡೆದರೂ ಸಹ ಪ್ರಾರಂಭದಲ್ಲೆ ಬಗೆಹರಿಸಿ ಇತ್ಯರ್ಥ ಪಡಿಸುವಂತೆ ಅವರು ಸೂಚಿಸಿದರು.

ಸಭೆಯಲ್ಲಿ ನಗರದ ಎಲ್ಲಾ ವಿಭಾಗಗಳ ಜಂಟಿ ಪೊಲೀಸ್ ಆಯುಕ್ತರು, ಡಿಸಿಪಿಗಳು, ಎಸಿಪಿಗಳು, ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net