

ದಕ್ಷಿಣಕನ್ನಡ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ತಲವಾರ್ ತೋರಿಸಿ ಜೀವಬೆದರಿಕೆ ಒಡ್ಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತಷ್ಟು ಬೆಳವಣಿಗೆ ನಡೆದಿದ್ದು, ಈ ಕುರಿತು ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರತಿಕ್ರಿಯಿಸಿದ್ದಾರೆ.
ಇದು ಓವರ್ಟೇಕ್ ಮಾಡುವ ಭರದಲ್ಲಿ ನಡೆದ ಘಟನೆಯಾಗಿದೆ. ಸ್ಕಾರ್ಪಿಯೋ ಕಾರಿನಲ್ಲಿದ್ದ ರಿಯಾಜ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಬಳಿ ಯಾವುದೇ ಆಯುಧಗಳು ಪತ್ತೆಯಾಗಿಲ್ಲ. ಆರೋಪಿಯ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣವೂ ದಾಖಲಾಗಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಪ್ರಕರಣದ ಬಗ್ಗೆ ತನಿಖೆ ಮುಂದುವರಿಸುತ್ತೇವೆ ಎಂದಿರುವ ಅವರು, ಇದು ಕೊಲೆಯತ್ನ ಪ್ರಕರಣವಲ್ಲ ಎಂಬುದಾಗಿಯೂ ತಿಳಿಸಿದ್ದಾರೆ.
ಆರೋಪಿ ತನ್ನ ಕಾರಿನ ಮೇಲೆ ತಲವಾರು ಝಳಪಿಸಿದ್ದ ಎಂದು ಹರೀಶ್ ಪೂಂಜಾ ಆರೋಪಿಸಿದ್ದು, ಈ ಕುರಿತು ಅವರ ಕಾರು ಚಾಲಕ ನವೀನ್ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿದ್ದು, ಆ ಬಗ್ಗೆ ಎಸ್ಪಿ ಮಾಹಿತಿ ನೀಡಿದ್ದಾರೆ.
ಗುರುವಾರ ರಾತ್ರಿ 11.30ರ ವೇಳೆಗೆ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ ಶಾಸಕರು ಅಲ್ಲಿಂದ ಬೆಳ್ತಂಗಡಿಗೆ ತೆರಳುತ್ತಿದ್ದರು. ಈ ವೇಳೆ ಶಾಸಕರು ತನ್ನ ಕಾರನ್ನು ಬಿಟ್ಟು ಸಂಬಂಧಿಕರೊಬ್ಬರ ಕಾರಿನಲ್ಲಿ ತೆರಳುತ್ತಿದ್ದರು. ಮಾರ್ಗಮಧ್ಯೆ ಪಡೀಲ್ನಿಂದ ಫರಂಗಿಪೇಟೆಯವರೆಗೆ ಶಾಸಕರು ಪ್ರಯಾಣಿಸುತ್ತಿದ್ದ ಕಾರನ್ನು ದುಷ್ಕರ್ಮಿಗಳು ಬಿಳಿ ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಹಿಂಬಾಲಿಸಿದ್ದರು. ಬಳಿಕ ಫರಂಗಿಪೇಟೆಯಲ್ಲಿ ಕಾರನ್ನು ಅಡ್ಡಗಟ್ಟಿ, ಅವಾಚ್ಯವಾಗಿ ನಿಂದಿಸಿ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶಾಸಕ ಹರೀಶ್ ಪೂಂಜಾ ಅವರ ಕಾರು ಚಾಲಕ ನವೀನ್ ದೂರು ನೀಡಿದ್ದರು.