

ಬೆಂಗಳೂರು: ಜೆ.ಪಿ.ನಗರ ಸಮೀಪ ಹೋಟೆಲ್‌ನಲ್ಲಿ ಜೂಜು ಅಡ್ಡೆ ಮೇಲೆ ಪುಟ್ಟೇನಹಳ್ಳಿ ಪೊಲೀಸರು ದಾಳಿ ನಡೆಸಿದಾಗ, ಅವರ ಠಾಣೆಯ ಸಹೋದ್ಯೋಗಿಗಳು ಶಾಕ್ ನೀಡಿದ್ದಾರೆ.
ಜೂಜು ಅಡ್ಡಗೆ ತೆರಳಿದಾಗ ಅಲ್ಲಿ ಪುಟ್ಟೇನಹಳ್ಳಿ ಠಾಣೆಯ ಏಳು ಕಾನ್‌ಸ್ಟೇಬಲ್‌ಗಳು ಸೆರೆ ಸಿಕ್ಕಿದ್ದಾಗಿ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ. ಅ.19 ರಂದು ಪುಟ್ಟೇನಹಳ್ಳಿಯ 27ನೇ ಅಡ್ಡರಸ್ತೆಯ ನಂದಿನಿ ಹೋಟೆಲ್‌ನಲ್ಲಿ ಜೂಜಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಅದರ ಅನ್ವಯ ಪೊಲೀಸರು ದಾಳಿ ನಡೆಸಿದಾಗ 7 ಕಾನ್‌ಸ್ಟೇಬಲ್‌ಗಳು ಜೂಜಾಟದಲ್ಲಿ ತೊಡಗಿರುವುದು ಗೊತ್ತಾಗಿದೆ. ಈ ಘಟನೆ ಕುರಿತು ಸುಬ್ರಹ್ಮಣ್ಯಪುರ ಉಪ ವಿಭಾಗದ ಎಸಿಪಿ ವರದಿ ಸಲ್ಲಿಸಿದ್ದಾರೆ. ಈ ವರದಿ ಪರಿಶೀಲಿಸಿದ ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಜೂಜು ಅಡ್ಡೆಗಳ ಮೇಲೆ ನಿಯಂತ್ರಿಸಬೇಕಾದ ಪೊಲೀಸರೇ ಜೂಜಾಟದಲ್ಲಿ ತೊಡಗಿರುವುದು ಬೇಸರದ ಸಂಗತಿ ಎಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಅಂತರರಾಜ್ಯ ಜೂಜು ಅಡ್ಡೆಗೆ ಸಹಕಾರ ನೀಡಿದ ಆರೋಪದ ಮೇರೆಗೆ ಮಹದೇವಪುರ ಠಾಣೆ ಇನ್‌ಸ್ಪೆಕ್ಟರ್ ಹಾಗೂ ಮುಖ್ಯಪೇದೆಯನ್ನು ಪೊಲೀಸ್ ಕಮಿಷನರ್ ಕಮಲ್ ಪಂತ್ ಅಮಾನತುಗೊಳಿಸಿದ್ದರು. ಈಗ ಜೂಜು ಅಡ್ಡೆಯಲ್ಲಿ ಪೊಲೀಸರು ಪತ್ತೆಯಾಗಿರುವುದು ಇಲಾಖೆಗೆ ಮುಜುಗರಕ್ಕೆ ಎಡೆಮಾಡಿಕೊಟ್ಟಿದೆ.