

ಬೆಂಗಳೂರು: ಕೆಎಎಸ್ ಮರು ಅಧಿಸೂಚನೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾದ ಹೋರಾಟಗಾರರನ್ನು ಬಂಧಿಸುವ ಮೂಲಕ ಹೋರಾಟವನ್ನು ಹತ್ತಿಕ್ಕಿದೆ ಎಂಬ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟಕ್ಕೆ ಅವಕಾಶ ನೀಡದೆಯೇ ಪೊಲೀಸರು ಹೋರಾಟಗಾರರನ್ನು ವ್ಯಾನಿಗೆ ತುಂಬಿಕೊಂಡು ಹೋಗಿದ್ದಾರೆ. ಹೋರಾಟಗಳನ್ನು ಹತ್ತಿಕ್ಕುತ್ತಿರುವ ಕಾರಣದಿಂದಲೇ ಕೆಪಿಎಸ್ಸಿ ಇಂತಹ ಅವಾಂತರಕ್ಕೆ ಕಾರಣವಾಗುತ್ತಿದೆ. ಸರ್ಕಾರವು ಕೆಪಿಎಸ್ಸಿ ಪರವಾಗಿದೆ ಎಂಬ ಸಂದೇಶ ರವಾನೆಯಾಗುತ್ತಿದೆ ಎಂದು ಸರ್ಕಾರಕ್ಕೆ ಮತ್ತು ಕೆಪಿಎಸ್ಸಿಗೆ ಧಿಕ್ಕಾರ ಕೂಗುವ ಮೂಲಕ ಅಸಮಾಧಾನ ಹೊರ ಹಾಕಿದರು.
ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದರೂ ಕೆಪಿಎಸ್ಸಿ ಮಾತ್ರ ತನ್ನ ದುರಾಡಳಿತವನ್ನು ಬದಲಾಯಿಸಿಕೊಂಡಿಲ್ಲ. ಕೆಪಿಎಸ್ಸಿ ಅವ್ಯವಸ್ಥೆ ಮತ್ತು ಕನ್ನಡ ವಿರೋಧಿ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಇಷ್ಟಕ್ಕೇ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಆಗ್ರಹಿಸಿದರು.
ಕೆಪಿಎಸ್ಸಿ ಕಚೇರಿ ಎದುರು ಪೊಲೀಸ್ ಸರ್ಪಗಾವಲು:
ಕೆಪಿಎಸ್ಸಿ ಕಚೇರಿ ಮುಂದೆ ಹೋರಾಟ ನಡೆಸುತ್ತಿದ್ದಂತೆಯೇ ಅರಮನೆ ರಸ್ತೆಯಿಂದ ವಿಧಾನಸೌಧದ ಕಡೆ ಬರುವ ಮಾರ್ಗದ ಸಂಚಾರವನ್ನು ಬಂದ್ ಮಾಡಿ ಅಡ್ಡವಾಗಿ ಪೊಲೀಸ್ ಬಸ್ಸು ನಿಲ್ಲಿಸಲಾಗಿತ್ತು. ಇತ್ತ ವಿಧಾನಸೌಧದ ಪಶ್ಚಿಮ ದ್ವಾರದ ಕಡೆಯಿಂದಲೂ ಬ್ಯಾರಿಕೇಡ್‌ಗಳನ್ನು ಹಾಕುವ ಮೂಲಕ ಸರ್ಪಗಾವಲು ಹಾಕಲಾಗಿತ್ತು. ಪಾದಚಾರಿಗಳು ಕೂಡ ಬಸವೇಶ್ವರ ವೃತ್ತ (ಚಾಲುಕ್ಯ)ದ ಮೂಲಕವೇ ಸಂಚರಿಸಬೇಕಿತ್ತು.
ಪೊಲೀಸರು ಮತ್ತು ಕರವೇ ಸಂಘರ್ಷ:
ಹೋರಾಟಕ್ಕೆ ಅವಕಾಶ ನೀಡದ ಪರಿಣಾಮ ಕರವೇ ಹೋರಾಟಗಾರರು ಮತ್ತು ಪೊಲೀಸ್ ಸಿಬ್ಬಂದಿ ವಿರುದ್ಧ ತೀವ್ರ ಸಂಘರ್ಷಕ್ಕೆ ಕಾರಣವಾಯಿತು. ಈ ವೇಳೆ ಹೋರಾಟಗಾರರನ್ನು ಬಂಧಿಸಲು ಪೊಲೀಸರು ಹರಸಾಹಸ ಮಾಡಬೇಕಾಯಿತು.
ಕಳೆದ ವಾರ ಕರವೇ ಅಧ್ಯಕ್ಷ ಟೆ.ಎ. ನಾರಾಯಣಗೌಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿತ್ತು. ಎರಡು ದಿನಗಳಲ್ಲಿ ಸರ್ಕಾರವು ನಿರ್ಧಾರ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಆದರೆ, ಈವರೆಗೂ ಯಾವುದೇ ರೀತಿಯಲ್ಲಿ ಸರ್ಕಾರವು ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ, ಕರವೇ ತಮ್ಮ ಹೋರಾಟವನ್ನು ಮುಂದುವರಿಸಿದೆ.