

ಚಾಮರಾಜನಗರ: ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಒಟ್ಟಿಗೆ ನೋಡಿದವ ದಾರುಣವಾಗಿ ಹತ್ಯೆಯಾದ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರಿನ ರಾಘವಪುರ ಗ್ರಾಮದಲ್ಲಿ ನಡೆದಿದೆ.
ನಾಗರಾಜ್ ಮೃತ ವ್ಯಕ್ತಿ. ಆತನ ಪತ್ನಿ ಪದ್ಮಾ ಮತ್ತು ಅವಳ ಪ್ರಿಯಕರ ಮಣಿಕಂಠ ಆರೋಪಿಗಳು. ಇವರಿಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪದ್ಮ ಮತ್ತು ಮಣಿಕಂಠ ಇಬ್ಬರೂ ಬೇಗೂರಿನ ತೊಂಡವಾಡಿ ಗ್ರಾಮದವರು. ನಾಗರಾಜ್ ನಾಯ್ಕನೊಂದಿಗೆ ಮದುವೆಯಾಗಿದ್ದ ಪದ್ಮಾ, ಮಣಿಕಂಠನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಹಾಗೇ ಸೆಪ್ಟೆಂಬರ್ 11ರಂದು ಪದ್ಮಾ ಪತಿಯನ್ನು ಕರೆದುಕೊಂಡು ತೊಂಡವಾಡಿಗೆ ಹೋಗಿದ್ದಳು.
ಆಗ ಪದ್ಮಾ ಮತ್ತು ಮಣಿಕಂಠ ಮನೆಯ ಹಿಂಬದಿ ಜಮೀನಿನಲ್ಲಿ ಇರುವುದನ್ನು ನಾಗರಾಜ್ ನಾಯ್ಕ್ ನೋಡಿದ್ದಾನೆ. ಸಣ್ಣ ಜಗಳವಾಗಿ, ನಂತರ ಮಣಿಕಂಠ ಮತ್ತು ಪದ್ಮಾ ಇಬ್ಬರೂ ಸೇರಿ ನಾಗರಾಜ್ನ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾರೆ. ಹೆಣವನ್ನು ಮಧ್ಯರಾತ್ರಿ ಬೈಕ್ ಮೇಲೆ ಸಾಗಿಸಿ, ನಂಜನಗೂಡಿನ ಕಳಲೆ ಗ್ರಾಮದ ಬಳಿ ನದಿಗೆ ಎಸೆದಿದ್ದಾರೆ. ಹೆಣ ಎಸೆದ ಜಾಗವನ್ನೂ ತಾವೇ ಪೊಲೀಸರಿಗೆ ತೋರಿಸಿದ್ದಾರೆ.
ಅಷ್ಟಕ್ಕೆ ಸುಮ್ಮನಿರದ ಪದ್ಮಾ ಗುಂಡ್ಲುಪೇಟೆಯ ಬೇಗೂರು ಠಾಣೆಗೆ ಬಂದು, ನನ್ನ ಗಂಡ ಕಾಣೆಯಾಗಿದ್ದಾನೆಂದು ದೂರು ನೀಡಿ, ನಾಟಕವಾಡಿದ್ದಳು. ತನಿಖೆ ಚುರುಕುಗಳಿಸಿದ ಪೊಲೀಸರ ಕೈಲಿ ಈಕೆ ಸಿಕ್ಕಿಬಿದ್ದಿದ್ದಾಳೆ. ಇದುವರೆಗೆ ನಾಗರಾಜ್ ಮೃತದೇಹ ಪತ್ತೆಯಾಗಲಿಲ್ಲ. (ದಿಗ್ವಿಜಯ ನ್ಯೂಸ್)