

UK | ಇತ್ತೀಚಿನ ದಿನಗಳಲ್ಲಿ ಮೊಬೈಲ್ನಿಂದ ಮಕ್ಕಳನ್ನು ದೂರ ಇಡೋದೇ ಪಾಲಕರಿಗೆ ದೊಡ್ಡ ಸವಾಲಾಗಿದೆ. ಆಟ-ಪಾಠಕ್ಕಿಂತ ಮಕ್ಕಳು ಹೆಚ್ಚಿನ ಸಮಯ ಮೊಬೈಲ್ನಲ್ಲೇ ಕಳೆಯುತ್ತಾರೆ. ರೀಲ್ಸ್ ಮಾಡ್ತಾ, ಗೇಮ್ಸ್ ನೋಡ್ತಾ ಟೈಮ್ ವೇಸ್ಟ್ ಮಾಡ್ತಿದ್ದಾರೆ. ರಾತ್ರಿ-ಹಗಲು ಎನ್ನದೆ ಮೊಬೈಲ್ ನೋಡಿ ಕೊನೆಗೆ ಓದಿನಲ್ಲಿ ಹಿಂದೆ ಬೀಳ್ತಿದ್ದಾರೆ. ಮೊಬೈಲ್ನಿಂದ ಮಕ್ಕಳನ್ನು ದೂರ ಇಡಲು ಪಾಲಕರು ಸಾಕಷ್ಟು ಕಷ್ಟ ಪಡ್ತಿದ್ದಾರೆ. ಆದ್ರೆ ಪಾಲಕರು ಮಕ್ಕಳ ಒಳ್ಳೆಯದಕ್ಕಾಗಿ ಮಾಡುವ ಕೆಲಸ ಅವರನ್ನೇ ಸಂಕಷ್ಟಕ್ಕೆ ನೂಕುತ್ತಿದೆ. ಮಕ್ಕಳಿಗಾಗಿ ತಾಯಿ ಮಾಡಿದ ಕೆಲಸವೊಂದು ಅವಳನ್ನೇ ಜೈಲು ಸೇರುವಂತೆ ಮಾಡಿದೆ. ಬ್ರಿಟನ್ಲ್ಲಿ ನಡೆದ ಈ ಘಟನೆ ಅಚ್ಚರಿಯನ್ನುಂಟು ಮಾಡಿದೆ. ತಾಯಿ ಮಕ್ಕಳ ಐಪ್ಯಾಡ್ ತೆಗೆದುಕೊಂಡಿದ್ದು, ಆಕೆಯನ್ನೇ ಕಳ್ಳಿ ಎಂದು ತಿಳಿದು ಪೊಲೀಸರು ಬಂಧಿಸಿದ್ದಾರೆ.
ಯುಕೆಯ ಸರ್ರೆಯಲ್ಲಿ ಈ ಘಟನೆ ನಡೆದಿದೆ. ವೃತ್ತಿಯಲ್ಲಿ ಇತಿಹಾಸದ ಟೀಚರ್ ಆದ 50 ವರ್ಷದ ವನೆಸ್ಸಾ ಬ್ರೌನ್ಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಮಕ್ಕಳನ್ನು ಡಿಜಿಟಲ್ ಡಿವೈಸ್ನಿಂದ ದೂರವಿಡಲು ವನೆಸ್ಸಾ ಮಾಡಿದ ಕಟ್ಟುನಿಟ್ಟು ಆಕೆಯನ್ನೇ ಜೈಲು ಸೇರುವಂತೆ ಮಾಡಿದೆ.
ವ್ಯಕ್ತಿಯೊಬ್ಬರು ಪೊಲೀಸರಿಗೆ ಕರೆ ಮಾಡಿ ಮನೆಯಲ್ಲಿದ್ದ ಎರಡು ಐಪ್ಯಾಡ್ ಕಳ್ಳತನವಾಗಿದೆ ಎಂದು ತಿಳಿಸಿದ್ದಾರೆ. ಆ ನಂತರ ಪೊಲೀಸರು ಐಪ್ಯಾಡ್ ಟ್ರ್ಯಾಕ್ ಮಾಡಿದ್ದಾರೆ. ಅದು ವನೆಸ್ಸಾ ಬಳಿ ಇರೋದು ಗೊತ್ತಾಗಿದೆ. ವನೆಸ್ಸಾ ಆ ಸಮಯದಲ್ಲಿ ತಾಯಿ ಮನೆಯಲ್ಲಿದ್ದಳು. ಅಲ್ಲಿಗೆ ಬಂದ ಪೊಲೀಸರು, ಐಪ್ಯಾಡ್ ಬಗ್ಗೆ ವಿಚಾರಿಸಿದ್ದಾರೆ. ಆರಂಭದಲ್ಲಿ ವನೆಸ್ಸಾ ಐಪ್ಯಾಡ್ ಬಗ್ಗೆ ಸುಳಿವು ನೀಡಲಿಲ್ಲ. ಹಾಗಾಗಿ ಆಕೆ ಕಳ್ಳತನ ಮಾಡಿದ್ದಾಳೆ ಎಂದು ವನೆಸ್ಸಾಳನ್ನು ಪೊಲೀಸರು ಬಂಧಿಸಿದ್ದಾರೆ.
ನಂತರ ಈ ಬಗ್ಗೆ ಮಾತನಾಡಿದ ವೆನಿಸ್ಸಾ, ಇದೊಂದು ಶಾಕಿಂಗ್ ಎಂದಿದ್ದಾಳೆ. ಅಮ್ಮನ ಮನೆಗೆ ಕಾಫಿ ಕುಡಿಯಲೆಂದು ಹೋಗಿದ್ದೆ. ಆದರೆ ಅಷ್ಟರಲ್ಲಿ ಅಲ್ಲಿಗೆ ಬಂದ ಪೊಲೀಸರು, ಐಪ್ಯಾಡ್ ಕಳ್ಳತನ ಮಾಡಿದ್ದೇನೆ ಎಂದು ಬಂಧಿಸಿದ್ದಾರೆ. ನಾನು ಮಕ್ಕಳ ಐಪ್ಯಾಡ್ ಕಳ್ಳತನ ಮಾಡಿರಲಿಲ್ಲ, ಅವರು ಡಿಜಿಟಲ್ ಡಿವೈಸ್ ನಿಂದ ದೂರ ಇರಲಿ ಅಂತ ತೆಗೆದಿಟ್ಟುಕೊಂಡಿದ್ದೆ ಎಂದು ವನೆಸ್ಸಾ ಹೇಳಿದ್ದಾಳೆ.
ವನೆಸ್ಸಾಳನ್ನು ಪೊಲೀಸರು 7 ಗಂಟೆ ಠಾಣೆಯಲ್ಲಿ ಇಟ್ಟುಕೊಂಡಿದ್ದರು. ಅಷ್ಟೇ ಅಲ್ಲ ಅವಳ 80 ವರ್ಷದ ತಾಯಿಗೂ ಮಾನಸಿಕ ಹಿಂಸೆ ನೀಡಿದ್ದಾರೆ. ಮೆಡಿಕಲ್ ಪರೀಕ್ಷೆ ಕೂಡ ಮಾಡಿದ್ದಾರೆ. ಮೂರು ಗಂಟೆಯವರೆಗೆ ವಕೀಲರ ಭೇಟಿಗೂ ಬಿಟ್ಟಿರಲಿಲ್ಲ. ಕೊನೆಗೆ ವನೆಸ್ಸಾಗೆ ಜಾಮೀನು ಸಿಕ್ಕಿದೆ. ಆದರೆ ಕೆಲ ಷರತ್ತಿನ ಮೂಲಕ ಕೋರ್ಟ್ ವನೆಸ್ಸಾಗೆ ಜಾಮೀನು ನೀಡಿತ್ತು. ಮಾರನೆದಿನ ತಮ್ಮ ತಪ್ಪಿನ ಅರಿವಾಗಿ ಪೊಲೀಸರು ವನೆಸ್ಸಾ ಬಳಿ ಕ್ಷಮೆ ಕೇಳಿ, ಕೇಸ್ ವಾಪಸ್ ಪಡೆದಿದ್ದಾರೆ.