ಬಿಹಾರದಲ್ಲಿ ಹಂತಕನ ಬಂಧಿಸಿದ ಪೊಲೀಸರು

ಪೊಲೀಸರ ವಶಕ್ಕೆ
ಪೊಲೀಸರ ವಶಕ್ಕೆ
Published on

ಬೆಂಗಳೂರು: ಇತ್ತೀಚೆಗೆ ಕೋರಮಂಗಲದ ವಿ.ಆರ್ ಲೇಔಟ್‌ನ ಪೇಯಿಂಗ್ ಗೆಸ್ಟ್(ಪಿಜಿ)ನಲ್ಲಿ ನಡೆದಿದ್ದ ಬಿಹಾರ ಮೂಲದ ಕೃತಿ ಕುಮಾರಿ ಕೊಲೆ ಪ್ರಕರಣ ಬೇಧಿಸಿರುವ ಕೋರಮಂಗಲ ಪೊಲೀಸರು ಹಂತಕನನ್ನು ಮಧ್ಯಪ್ರದೇಶದಲ್ಲಿ ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ.
ಮಧ್ಯಪ್ರದೇಶದ ಭೂಪಾಲ್ ಮೂಲದ ಅಭಿಷೇಕ್(೨೪) ಬಂಧಿತ. ಆರೋಪಿ ಜುಲೈ ೨೩ರಂದು ತಡರಾತ್ರಿ ಪಿಜಿಗೆ ನುಗ್ಗಿ ಕೃತಿಯನ್ನು ಬರ್ಬರವಾಗಿ ಹತ್ಯೆಗೈದು ಮಧ್ಯಪ್ರದೇಶಕ್ಕೆ ಪರಾರಿಯಾಗಿದ್ದ. ಈ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು, ಆರೋಪಿ ಜಾಡು ಹಿಡಿದು ಮಧ್ಯಪ್ರದೇಶದ ಭೂಪಾಲ್‌ಗೆ ತೆರಳಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಸ್ಥಳೀಯ ಕೋರ್ಟ್‌ಗೆ ಹಾಜರು ಪಡಿಸಿ ಟ್ರಾನ್ಸಿಟ್ ವಾರೆಂಟ್ ಪಡೆದು ಶನಿವಾರ ಸಂಜೆ ಬೆಂಗಳೂರಿಗೆ ಕರೆ ತಂದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ೧೦ ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹತ್ಯೆಯ ವಿಷಯ ಪಾಲಕರಿಗೆ ತಿಳಿಸಿದ್ದ:
ಕೃತ್ಯ ಎಸಗಿದ ಬಳಿಕ ಮಾರ್ಗ ಮಧ್ಯೆ ರಕ್ತಸಿಕ್ತ ಬಟ್ಟೆಗಳನ್ನು ಬದಲಾಯಿಸಿ ಆಟೋದಲ್ಲಿ ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದಾನೆ. ಅಲ್ಲಿಂದ ನೇರವಾಗಿ ರೈಲಿನಲ್ಲಿ ಮಧ್ಯಪ್ರದೇಶ ತಲುಪಿದ್ದ. ನಂತರ ತನ್ನ ಪಾಲಕರನ್ನು ಭೇಟಿಯಾಗಿ ಯುವತಿಯೊಬ್ಬಳನ್ನು ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದ್ದ ಎನ್ನಲಾಗಿದೆ. ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಮತ್ತೊಂದೆಡೆ ಅಭಿಷೇಕ್‌ನ ಪ್ರೇಯಸಿಯನ್ನು ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು, ಆತನ ಜಾಡು ಪತ್ತೆ ಹಚ್ಚಿದ್ದರು. ನಂತರ ಆತನ ಮೊಬೈಲ್ ನೆಟ್‌ವರ್ಕ್ ಹಾಗೂ ಇತರೆ ತಾಂತ್ರಿಕ ತನಿಖೆ ನಡೆಸಿದಾಗ ಆರೋಪಿಯ ವಿಳಾಸ ದೊರಕಿದ್ದು, ಸ್ಥಳೀಯ ಪೊಲೀಸರ ನೆರವು ಪಡೆದುಕೊಂಡು ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ.
ಅಭಿಷೇಕ್ ಹಾಗೂ ಕೊಲೆಯಾದ ಕೃತಿ ಕುಮಾರಿಯ ಸ್ನೇಹಿತೆ ಪರಸ್ಪರ ಪ್ರೀತಿಸುತ್ತಿದ್ದರು. ಅಭಿಷೇಕ್ ಪ್ರೇಯಸಿ ಹಾಗೂ ಕೃತಿ ಕುಮಾರಿ ಇಬ್ಬರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಒಂದೇ ಪಿ.ಜಿಯಲ್ಲಿ ವಾಸವಾಗಿದ್ದರು. ಅಭಿಷೇಕ್ ಮಧ್ಯಪ್ರದೇಶದ ಭೋಪಾಲ್ನಿಂದ ಬೆಂಗಳೂರಿನಲ್ಲಿರುವ ಈ ಪಿಜಿಗೆ ಆಗಾಗ್ಗೆ ಬಂದು ಪ್ರೇಯಸಿ ಜತೆ ಸುತ್ತಾಡಿಕೊಂಡು ಮತ್ತೆ ಊರಿಗೆ ಹಿಂತಿರುಗುತ್ತಿದ್ದ. ಅಭಿಷೇಕ್ ಭೋಪಾಲ್ನಲ್ಲಿ ಯಾವುದೇ ಕೆಲಸ ಕೆಲಸ ಮಾಡುತ್ತಿರಲಿಲ್ಲ. ಅದರಿಂದ ಅಸಮಾಧಾನಗೊಂಡಿದ್ದ ಪ್ರೇಯಸಿ ಆತನಿಗೆ ಕೆಲಸಕ್ಕೆ ಸೇರುವಂತೆ ಒತ್ತಡ ಹಾಕುತ್ತಿದ್ದಳು. ಕೆಲಸಕ್ಕೆ ಸೇರಿದ್ದಾಗಿ ಅಭಿಷೇಕ್ ಪ್ರೇಯಸಿಗೆ ಇತ್ತೀಚೆಗೆ ಸುಳ್ಳು ಹೇಳಿದ್ದ. ಆದರೆ, ಇದು ಆತನ ಪ್ರೇಯಸಿಗೆ ಗೊತ್ತಾಗಿತ್ತು. ಆತನನ್ನು ನಿರ್ಲಕ್ಷಿಸಿದ್ದಳು. ಅದರಿಂದ ಕೋಪಗೊಂಡ ಅಭಿಷೇಕ್ ಪಿ.ಜಿ ಬಳಿ ಗಲಾಟೆ ಮಾಡುತ್ತಿದ್ದ. ಪ್ರಕರಣ ನಡೆಯುವ ೩ ದಿನಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದ ಆರೋಪಿ, ಬಾಡಿಗೆ ಮನೆ ಮಾಡಿದ್ದ. ಅಲ್ಲಿಗೆ ಪ್ರೇಯಸಿಯನ್ನು ಕರೆಸಿಕೊಂಡಿದ್ದ. ಈ ವೇಳೆ ಆಕೆ ನಗರದಲ್ಲೇ ಒಂದು ಕೆಲಸ ಹುಡುಕಿಕೊಳ್ಳುವಂತೆ ಸಲಹೆ ನೀಡಿದ್ದಳು. ಆದರೆ, ಮರು ದಿನವೇ ಆರೋಪಿ ಕೆಲಸಕ್ಕೆ ಸೇರಿಕೊಂಡಿದ್ದೇನೆ ಎಂದು ಮತ್ತೊಂದು ಸುಳ್ಳು ಹೇಳಿದ್ದ.
ಪ್ರೇಯಸಿಯನ್ನು ದೂರ ಮಾಡಿದಕ್ಕೆ ಹತ್ಯೆ:
ಈ ವಿಚಾರ ತಿಳಿದ ಕೃತಿ, ಆತ ಕೆಲಸಕ್ಕೆ ಸೇರಿಕೊಂಡಿಲ್ಲ. ಅಂತಹ ವ್ಯಕ್ತಿಯಿಂದ ದೂರ ಇರುವಂತೆ ಸ್ನೇಹಿತೆಗೆ ಸಲಹೆ ನೀಡಿದ್ದಳು. ಹೀಗಾಗಿ ಆರೋಪಿಯಿಂದ ಆತನ ಪ್ರೇಯಿಸಿ ಅಂತರ ಕಾಯ್ದುಕೊಂಡು ದೂರವಾಗಿದ್ದಳು. ಇದರಿಂದ ಆಕ್ರೋಶಗೊಂಡಿದ್ದ ಆರೋಪಿ, ಜುಲೈ ೨೩ರಂದು ತಡರಾತ್ರಿ ೧೧.೩೦ ಕ್ಕೆ ಪಿಜಿಗೆ ನುಗ್ಗಿ ಕೃತಿಯ ಕತ್ತು, ಹೊಟ್ಟೆ ಹಾಗೂ ಇತರೆಡೆ ಇರಿದು ಪರಾರಿಯಾಗಿದ್ದ. ಹತ್ಯೆಯ ಭೀಕರ ದೃಶ್ಯ ಪಿಜಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದರ ಆಧಾರದ ಮೇಲೆ ಹಾಗೂ ಆತನ ಪ್ರೇಯಸಿಯನ್ನು ವಿಚಾರಣೆ ಮಾಹಿತಿ ಪಡೆದುಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net