ನಕಲಿ ಅಂತಾರಾಷ್ಟ್ರೀಯ ಪೊಲೀಸ್ ತನಿಖಾ ಕಚೇರಿ ನಡೆಸುತ್ತಿದ್ದ 6 ಮಂದಿ ಬಂಧಿಸಿದ ಪೊಲೀಸರು| Fake PIB

Fake PIB
Published on

Fake PIB: ಗಾಜಿಯಾಬಾದ್​ನಲ್ಲಿ ನಕಲಿ ರಾಯಭಾರಿ ಕಚೇರಿ ತೆರೆದ ರೀತಿ, ನಕಲಿ ಅಂತಾರಾಷ್ಟ್ರೀಯ ಪೊಲೀಸ್ ಮತ್ತು ತನಿಖಾ ಬ್ಯೂರೋ ಕಚೇರಿ ನಡೆಸುತ್ತಿದ್ದನ್ನು ಉತ್ತರ ಪ್ರದೇಶದ ಗೌತಮಬುದ್ಧ ನಗರ ಪೊಲೀಸರು ಬೇಧಿಸಿದ್ದು, 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಖಚಿತ ಮಾಹಿತಿ ಮೇರೆಗೆ ಶನಿವಾರ ಮಧ್ಯರಾತ್ರಿ ನೋಯ್ಡಾದ ಸೆಕ್ಟರ್-70ರ ಬಿಎಸ್​-136 ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. 10 ದಿನಗಳ ಹಿಂದೆ ಅಷ್ಟೇ ಆರೋಪಿಗಳು ಅಧಿಕೃತ ತನಿಖಾ ಸಂಸ್ಥೆಯ ಕಚೇರಿಯನ್ನು ಹೋಲುವ ಹಾಗೆಯೇ ಕಚೇರಿಯನ್ನು ಸ್ಥಾಪಿಸಿದ್ದರು ಎನ್ನಲಾಗಿದೆ.

ಸಾರ್ವಜನಿಕರನ್ನು ದಾರಿ ತಪ್ಪಿಸುವ, ಸರ್ಕಾರಿ ಅಧಿಕಾರಿಗಳಂತೆ ನಟಿಸುವ ಮತ್ತು ನಕಲಿ ದಾಖಲೆಗಳು, ನಕಲಿ ಐಡಿಗಳು ಮತ್ತು ಪೊಲೀಸ್ ಶೈಲಿಯ ಲಾಂಛನಗಳನ್ನು ಬಳಸಿಕೊಂಡು ಹಣವನ್ನು ಸುಲಿಗೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಪಶ್ಚಿಮ ಬಂಗಾಳ ಮೂಲದ ಬಿಭಾಷ್, ಅರಘ್ಯ, ಬಾಬು, ಚಂದ್ರ ಮಂಡಲ್, ಪಿಂಟು, ಸಮಪ್ದಾ ಮತ್ತು ಆಶಿಶ್ ಬಂಧಿತರು.

ಆರೋಪಿಗಳ ಗ್ಯಾಂಗ್, ಪೊಲೀಸರಂತಹ ಬಣ್ಣಗಳು ಮತ್ತು ಲೋಗೋಗಳನ್ನು ಬಳಸಿದ್ದಾರೆ. ಬುಡುಕಟ್ಟು ವ್ಯವಹಾರಗಳ ಸಚಿವಾಲಯ, ಆಯುಷ್ ಸಚಿವಾಲಯ, ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯದ ನಕಲಿ ಪ್ರಮಾಣಪತ್ರಗಳನ್ನು ಪ್ರದರ್ಶಿಸಿದ್ದಾರೆ. ಇಂಟರ್‌ಪೋಲ್, ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಯುರೇಷಿಯಾ ಪೋಲ್‌ನೊಂದಿಗೆ ಸಂಬಂಧ ಹೊಂದಿದೆ, ಯುಕೆಯಲ್ಲಿ ಕಚೇರಿಯನ್ನು ಹೊಂದಿದ್ದೆವೆ ಎಂದು ಸುಳ್ಳು ಹೇಳಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಈ ಗ್ಯಾಂಗ್ ಸಾರ್ವಜನಿಕ ಸೇವಕರಂತೆ ನಟಿಸಿ, ತಮ್ಮ ವೆಬ್‌ಸೈಟ್ - www.intlpscrib.in - ಮೂಲಕ ದೇಣಿಗೆ ಪಡೆದು, ನ್ಯಾಯಸಮ್ಮತತೆಯ ನೋಟವನ್ನು ಸೃಷ್ಟಿಸಲು ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಮಾಣಪತ್ರಗಳನ್ನು ಆನ್‌ಲೈನ್‌ನಲ್ಲಿ ಪ್ರದರ್ಶಿಸುತ್ತಿತ್ತು. ಜನರ ಮೇಲೆ ಪ್ರಭಾವ ಬೀರಲು ಮತ್ತು ವಂಚಿಸಲು ಅವರು ಬಹು ಪತ್ರಿಕಾ ಗುರುತಿನ ಚೀಟಿಗಳು, "ಅಂತರರಾಷ್ಟ್ರೀಯ ಮಾನವ ಹಕ್ಕುಗಳ" ಗುರುತಿನ ಚೀಟಿಗಳು ಮತ್ತು ಅಧಿಕೃತವಾಗಿ ಕಾಣುವ ಅಂಚೆಚೀಟಿಗಳನ್ನು ಸಹ ಇಟ್ಟುಕೊಂಡಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ನೋಯ್ಡಾ ಕೇಂದ್ರ ಡಿಸಿಪಿ ಶಕ್ತಿ ಮೋಹನ್ ಅವಸ್ಥಿ, "ಚೆನ್ನಾಗಿ ಆಯೋಜಿಸಿದ್ದ ಒಂದು ವಂಚನೆಯ ಜಾಲವನ್ನು ಬೇಧಿಸಿದ್ದೇವೆ. ಆರೋಪಿಗಳು ಅಂತರರಾಷ್ಟ್ರೀಯ ಪೊಲೀಸ್ ಮತ್ತು ಅಪರಾಧ ತನಿಖಾ ಬ್ಯೂರೋ'ದ ಸೋಗಿನಲ್ಲಿ ವಂಚನೆ ಕಚೇರಿಯನ್ನು ಸ್ಥಾಪಿಸಿದ್ದರು, ಪೊಲೀಸರಂತಹ ಲಾಂಛನಗಳು ಮತ್ತು ನಕಲಿ ಸಚಿವಾಲಯದ ದಾಖಲೆ ಬಳಸಿಕೊಂಡು ಸಾರ್ವಜನಿಕರನ್ನು ವಂಚಿಸಿ ಹಣ ವಂಚಿಸಿದ್ದರು. ದಾಳಿಯ ಸಮಯದಲ್ಲಿ ಆರು ಶಂಕಿತರನ್ನು ಬಂಧಿಸಿದ್ದೇವೆ. ನಕಲಿ ಐಡಿಗಳು, ಸಚಿವಾಲಯದ ಪ್ರಮಾಣಪತ್ರಗಳು, ಚೆಕ್ ಪುಸ್ತಕಗಳು, ಎಟಿಎಂ ಕಾರ್ಡ್‌ಗಳು, ವಿಸಿಟಿಂಗ್ ಕಾರ್ಡ್‌ಗಳು, ಸೈನ್‌ಬೋರ್ಡ್‌ಗಳು, ಮೊಬೈಲ್ ಫೋನ್‌ಗಳು ಮತ್ತು ನಗದು ಸೇರಿದಂತೆ ವ್ಯಾಪಕ ಪುರಾವೆಗಳನ್ನು ವಶಪಡಿಸಿಕೊಂಡಿದ್ದೇವೆ" ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net