ಪೊಲೀಸರಿಗೆ ಸಿಕ್ಕಿ ಬಿದ್ದ ನಂದಿ ದೇವಾಲಯದ ಹುಂಡಿ ಕಳ್ಳರು

Published on

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ನಂದಿಯ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯದ ಹುಂಡಿಗಳಲ್ಲಿರುವ ಹಣವನ್ನು ಕದ್ದು ಪರಾರಿಯಾಗಿದ್ದ ಕಳ್ಳರಿಬ್ಬರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

ಮೈಸೂರಿನ ಏಕಲವ್ಯ ನಗರದ ಕಬಾಲ್ ಚಂದು (24) ಮತ್ತು ಮಂಡ್ಯ ಜಿಲ್ಲೆಯ ಹಿಂಡುವಾಳದ ಸುಮಂತ್ (21) ಬಂಧಿತರು. ಕಳೆದ .30 ರಂದು ಇಲ್ಲಿನ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯಗಳಲ್ಲಿನ ಹುಂಡಿಗಳ ಬೀಗ ಹೊಡೆದು ಹಣವನ್ನು ಕದಿಯಲಾಗಿತ್ತು. ದೇವಾಲಯದಲ್ಲಿನ ಶೃಂಗತೀರ್ಥ ಕಲ್ಯಾಣದ ಗೋಪುರದಿಂದ ಒಳ ಪ್ರವೇಶಿಸಿದ ಕಳ್ಳರು ಹುಂಡಿಯನ್ನು ತೆಗೆದುಕೊಂಡು ಹೋಗಿದ್ದರು. ಕೊನೆಗೆ ಹಣವನ್ನು ಕದ್ದು ಹುಂಡಿ ಬಿಸಾಡಿದ್ದರು. ಇದೆಲ್ಲವೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಮುಖಕ್ಕೆ ಬಟ್ಟೆ ಕಟ್ಟಿಕೊಂಡ ಹಿನ್ನೆಲೆಯಲ್ಲಿ ಮೊದಲು ಕಳ್ಳರು ಯಾರು ಎನ್ನುವುದು ಪತ್ತೆಯಾಗಿರಲಿಲ್ಲ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಡಿವೈಎಸ್ಪಿ ಕೆ.ರವಿಶಂಕರ್ ನೇತೃತ್ವದ ವಿಶೇಷ ತಂಡವನ್ನು ರಚಿಸಿದ್ದರು. ಇದು ದೊಡ್ಡಬಳ್ಳಾಪುರದ ರೈಲ್ವೆ ಬ್ರಿಡ್ಜ್ ಬಳಿ ಕಳ್ಳರಿಬ್ಬರನ್ನು ಬಂಧಿಸಿದೆ. ಎರಡು ಕಬ್ಬಿಣದ ರಾಡ್, ದ್ವಿಚಕ್ರ ವಾಹನ ಮತ್ತು 6,700 ನಗದು ಹಣವನ್ನು ವಶಪಡಿಸಿಕೊಂಡಿದೆ.

ಬೆಂಗಳೂರು ನಗರದ ಅಮೃತಹಳ್ಳಿ, ದೇವನಹಳ್ಳಿ, ಮಾದನಾಯಕನಹಳ್ಳಿ, ಚಿಕ್ಕಪೇಟೆ, ಸೋಲದೇವನಹಳ್ಳಿ, ರಾಮನಗರ ಜಿಲ್ಲೆಯ ಚನ್ನಪಟ್ಟಣ, ಮಂಡ್ಯ ಜಿಲ್ಲೆಯ ಮದ್ದೂರು, ನಾಗಮಂಗಲ, ತುಮಕಾರು, ಮೈಸೂರು ಸೇರಿ ಇತರೆ ಪೊಲೀಸ್ ಠಾಣೆಗಳಲ್ಲಿ ಆರೋಪಿಗಳ ವಿರುದ್ಧ 15 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net